Google Layoffs: ಇದು ನೋಡಿ ದುರದೃಷ್ಟ; ಬೇರೊಬ್ಬರಿಗೆ ಕೆಲಸ ಕೊಡಿಸಲು ಸಂದರ್ಶನ ಮಾಡುತ್ತಿದ್ದಾಗಲೇ ಬಂತು ವಜಾ ಸಂದೇಶ
ಸಂದರ್ಶನ ನಡೆಸುತ್ತಿದ್ದಾಗಲೇ ಉದ್ಯೋಗದಿಂದ ವಜಾಗೊಂಡ ಉದ್ಯೋಗಿಯ ಹೆಸರು ಡಾನ್ ಲಾನಿಗನ್ ಯಾನ್. ತಮ್ಮ ದುರದೃಷ್ಟದ ನೈಜ ಕತೆಯನ್ನು ಲಿಂಕ್ಡ್ಇನ್ನಲ್ಲಿ ಯಾನ್ ಬರೆದುಕೊಂಡಿದ್ದಾರೆ.
ಅವರು ಕಂಪನಿಯ ನೇಮಕಾತಿ (Recruitment) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ. ವಿವಿಧ ವಿಭಾಗಗಳಿಗೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳ ಸಂದರ್ಶನ (Interview) ನಡೆಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವುದೇ ಇವರ ಕೆಲಸ. ಅಭ್ಯರ್ಥಿಯೊಬ್ಬರ ಸಂದರ್ಶನ ನಡೆಸುತ್ತಿದ್ದಾಗಲೇ, ‘ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ (Layoff)’ ಎಂಬ ಸಂದೇಶ ಬಂದರೆ ಪರಿಸ್ಥಿತಿ ಹೇಗಿರಬೇಡ? ಹೌದು, ತಂತ್ರಜ್ಞಾನ ದೈತ್ಯ ಗೂಗಲ್ (Google) ಕಂಪನಿಯ ಉದ್ಯೋಗಿಯೊಬ್ಬರಿಗೆ ಈ ಅನುಭವ ಆಗಿದೆ. ಸಂದರ್ಶನ ನಡೆಸುತ್ತಿದ್ದಾಗಲೇ ಉದ್ಯೋಗದಿಂದ ವಜಾಗೊಂಡ ಉದ್ಯೋಗಿಯ ಹೆಸರು ಡಾನ್ ಲಾನಿಗನ್ ಯಾನ್ (Dan Lanigan Ryan). ತಮ್ಮ ದುರದೃಷ್ಟದ ನೈಜ ಕತೆಯನ್ನು ಲಿಂಕ್ಡ್ಇನ್ನಲ್ಲಿ ಯಾನ್ ಬರೆದುಕೊಂಡಿದ್ದಾರೆ.
‘ದುರದೃಷ್ಟವಶಾತ್, ಸಾವಿರಾರು ಉದ್ಯೋಗಿಗಳ ಜತೆ ಕಳೆದ ಶುಕ್ರವಾರ ನಾನೂ ಗೂಗಲ್ನಿಂದ ವಜಾಗೊಂಡೆ. ಗೂಗಲ್ನಲ್ಲಿ ನನ್ನ ಉದ್ಯೋಗಾವಧಿಯು ಹೀಗೆ ಹಠಾತ್ತಾಗಿ ಕೊನೆಗೊಳ್ಳಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಸಂದರ್ಶನವೊಂದನ್ನು ನಡೆಸುತ್ತಿದ್ದಾಗಲೇ ನನ್ನ ಸಿಸ್ಟಂ ಅನ್ನು ಬ್ಲಾಕ್ ಮಾಡಲಾಯಿತು’ ಎಂದು ಯಾನ್ ಬರೆದಿದ್ದಾರೆ. ಇದು ನನ್ನ ಕನಸಿನ ಕಂಪನಿಯ ಕನಸಿನ ಉದ್ಯೋಗವಾಗಿತ್ತು ಎಂದೂ ಅವರು ಉಲ್ಲೇಖಿಸಿದ್ದಾರೆ.
‘ಒಂದು ವರ್ಷದ ಹಿಂದೆ ನನ್ನ ಕನಸಿನ ಕಂಪನಿಯಲ್ಲಿ ಕನಸಿನ ಉದ್ಯೋಗ ಆರಂಭಿಸಿದ್ದೆ. ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದಾಗ ನನಗೆ ನೇಮಕಾತಿ ಕರೆ ಬಂದಿತ್ತು. ಆ ಕ್ಷಣ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ’ ಎಂದು ಅವರು ಲಿಂಕ್ಡ್ಇನ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Google Layoff: ಗೂಗಲ್ನಲ್ಲಿ ಉನ್ನತ ಹುದ್ದೆಯವರಿಗೂ ಕುತ್ತು; 8 ಕೋಟಿ ವೇತನದವರೂ ಕಂಪನಿಯಿಂದ ಔಟ್
ಸಂದರ್ಶನವೊಂದನ್ನು ನಡೆಸುತ್ತಿದ್ದಾಗಲೇ ಕಂಪನಿಯ ಆಂತರಿಕ ವೆಬ್ಸೈಟ್ ಪ್ರವೇಶ ಬ್ಲಾಕ್ ಆಯಿತು. ಇದಾಗಿ ಕೆಲವೇ ಕ್ಷಣಗಳಲ್ಲಿ ಕಂಪನಿಯ ಇ-ಮೇಲ್ ಕೂಡ ಬ್ಲಾಕ್ ಮಾಡಿದರು. ಎಲ್ಲವನ್ನೂ ಬ್ಲಾಕ್ ಮಾಡಲಾಯಿತು. ಅದಾಗಿ 15-20 ನಿಮಿಷಗಳ ನಂತರ, ಗೂಗಲ್ 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂಬ ಸುದ್ದಿ ಕಾಣಿಸಿತು ಎಂದು ಯಾನ್ ಹೇಳಿಕೊಂಡಿದ್ದಾರೆ.
ಗೂಗಲ್ನಿಂದ 12,000 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕಳೆದ ವಾರ ಅಲ್ಫಾಬೆಟ್ ಇಂಕ್ ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ, ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳನ್ನು ಉದ್ದೇಶಿಸಿ ಇ-ಮೇಲ್ ಸಂದೇಶ ಕಳುಹಿಸಿದ್ದರು. ಕಂಪನಿಯ ಎಲ್ಲ ತಂಡಗಳ ಮೇಲೆ ಉದ್ಯೋಗ ಕಡಿತದ ಪ್ರಭಾವ ಆಗಲಿದೆ ಎಂದೂ ಅಮೆರಿಕದ ಸಿಬ್ಬಂದಿಯ ಮೇಲೆ ತಕ್ಷಣವೇ ಪರಿಣಾಮ ಬೀರಲಿದೆ ಎಂದೂ ಅವರು ಇ-ಮೇಲ್ನಲ್ಲಿ ಉಲ್ಲೇಖಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Sat, 28 January 23