Zomato IPO: ಝೊಮ್ಯಾಟೋ ಐಪಿಒ ಆಫರ್​ಗಿಂತ 40.4 ಪಟ್ಟು ಹೆಚ್ಚು ಬೇಡಿಕೆ

| Updated By: Srinivas Mata

Updated on: Jul 17, 2021 | 11:47 AM

ಫುಡ್ ಡೆಲಿವರಿ ಕಂಪೆನಿಯಾದ ಝೊಮ್ಯಾಟೋದ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ ಬಂದಿದೆ. ಆಫರ್ ಮಾಡಿದ್ದಕ್ಕಿಂತ 40.4 ಪಟ್ಟು ಹೆಚ್ಚು ಬೇಡಿಕೆ ಬಂದಿದೆ.

Zomato IPO: ಝೊಮ್ಯಾಟೋ ಐಪಿಒ ಆಫರ್​ಗಿಂತ 40.4 ಪಟ್ಟು ಹೆಚ್ಚು ಬೇಡಿಕೆ
ಸಾಂದರ್ಭಿಕ ಚಿತ್ರ
Follow us on

ಫುಡ್ ಡೆಲಿವರಿ ಯೂನಿಕಾರ್ನ್ ಕಂಪೆನಿಯಾದ ಝೊಮ್ಯಾಟೋ ಐಪಿಒಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಶುಕ್ರವಾರಕ್ಕೆ (ಜುಲೈ 16, 2021) ಐಪಿಒ ಕೊನೆಯಾಗಿದ್ದು, 40.4 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಈ ಮೂಲಕ ಭಾರತದ ಬಹು ನಿರೀಕ್ಷಿತ ಐಪಿಒ ಸಬ್​ಸ್ಕ್ರಿಪ್ಷನ್​ಗೆ ತೆರೆ ಬಿದ್ದಿದೆ. ಮೂರನೇ ಹಾಗೂ ಕೊನೆ ದಿನವಾದ ಶುಕ್ರವಾರ ಝೊಮ್ಯಾಟೋ ಐಪಿಒಗೆ 2940 ಕೋಟಿ ಷೇರುಗಳಿಗೆ ಬೇಡಿಕೆ ಬಂದಿದೆ. ಆದರೆ ಐಪಿಒ ಗಾತ್ರವೇ 71.92 ಕೋಟಿ ಷೇರುಗಳಿಗೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿರಿಸಿರುವ ಷೇರಿನ ಭಾಗಕ್ಕಿಂತ 7.87 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಇನ್ನು ನಾನ್​ ಇನ್​ಸ್ಟಿಟ್ಯೂಷನಲ್ ಹೂಡಿಕೆದಾರರಿಗೆ 34.80 ಪಟ್ಟು, ಕ್ವಾಲಿಫೈಡ್ ಇನ್​ಸ್ಟಿಟ್ಯೂಷನಲ್ ಖರೀದಿದಾರರಿಂದ 54.71 ಪಟ್ಟು ಹಾಗೂ ಉದ್ಯೋಗಿಗಳಿಂದ ಅತ್ಯಂತ ಕಡಿಮೆ, ಅಂದರೆ ಶೇ 62ರಷ್ಟು ಮಾತ್ರ ಬೇಡಿಕೆ ಬಂದಿದೆ.

ವಿಶ್ಲೇಷಕರು ಹೇಳುತ್ತಿರುವಂತೆ, ಝೊಮ್ಯಾಟೋ ಕಂಪೆನಿ ಐಪಿಒದ ಈ ಯಶಸ್ಸು ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿರುವ ಪೇಟಿಎಂ, ಮೊಬಿಕ್ವಿಕ್ ಮತ್ತು ಪಾಲಿಸಿಬಜಾರ್​ನಂಥ ಕಂಪೆನಿಗಳಿಗೆ ಸಹಾಯ ಮಾಡುತ್ತದೆ. ಹೊಸ ತಲೆಮಾರಿನ ಕಂಪೆನಿಗಳ ಐಪಿಒ ಭಾರತೀಯ ಮಾರುಕಟ್ಟೆಗೆ ಜಾಗತಿಕ ಹೂಡಿಕೆದಾರರನ್ನು ಸೆಳೆಯುತ್ತದೆ. ಅಂದಹಾಗೆ ಚೈನೀಸ್ ಹೊಸ ತಲೆಮಾರಿನ ಕಂಪೆನಿಗಳಲ್ಲಿ ಜಾಗತಿಕ ಹೂಡಿಕೆದಾರರು ನಷ್ಟವನ್ನು ಅನುಭವಿಸಿದ್ದಾರೆ. ಅವುಗಳಿಂದ 80,000 ಕೋಟಿ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಈ ಹೊಸ ಕಂಪೆನಿಗಳ ಯಶಸ್ವಿ ಲಿಸ್ಟಿಂಗ್​ನಿಂದ ಈಗಾಗಲೇ ಇರುವ ಕಂಪೆನಿಗಳಿಗೆ ಮತ್ತಷ್ಟು ಬೇಡಿಕೆ ಬರುತ್ತದೆ, ಆ ಮೂಲಕ ಮಾರುಕಟ್ಟೆಯು ಸದ್ಯದ ಮಟ್ಟದಿಂದ ಇನ್ನಷ್ಟು ಎತ್ತರಕ್ಕೆ ಏರುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ಪೇಟಿಎಂ ಮತ್ತು ಮೊಬಿಕ್ವಿಕ್​ನಿಂದ ಈ ವಾರ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಪತ್ರಗಳನ್ನು ಫೈಲ್ ಮಾಡಲಾಗುತ್ತಿದೆ. ನ್ಯಾಕಾ ಹಾಗೂ ಪಾಲಿಸಿ ಬಜಾರ್​ನಿಂದಲೂ ಸದ್ಯದಲ್ಲೇ ಈ ಕಡೆಗೆ ಹೆಜ್ಜೆ ಹಾಕಲಿವೆ. 9,375 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯೊಂದಿಗೆ ಪಬ್ಲಿಕ್ ಆಫರ್ ಕರೆದಿದ್ದು, ದರ ಬ್ಯಾಂಡ್ 72ರಿಂದ 76 ರೂಪಾಯಿ ನಿಗದಿ ಮಾಡಲಾಗಿತ್ತು. ಜುಲೈ 14ರಿಂದ ಐಪಿಒ ಆರಂಭವಾಗಿತ್ತು. ಅಂದ ಹಾಗೆ 2021ನೇ ಇಸವಿಯಲ್ಲಿ ಅತಿ ಹೆಚ್ಚು ಸಬ್​ಸ್ಕ್ರೈಬ್ ಆದ ಹತ್ತನೇ ಐಪಿಒ ಝೊಮ್ಯಾಟೋ.

ಇದನ್ನೂ ಓದಿ:   Zomato IPO: ಝೊಮ್ಯಾಟೋ ಐಪಿಒಗೆ ಭರ್ಜರಿ ಬೇಡಿಕೆ; ಶೇ 60ರಷ್ಟು ಅರ್ಜಿದಾರರು 30 ವರ್ಷದ ಒಳಗಿನವರು

(Food delivery company Zomato IPO over subscribed more than 40 times. Here is the full details of IPO subscription)