ನವದೆಹಲಿ, ಡಿಸೆಂಬರ್ 8: ಭಾರತದ ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಏಳು ತಿಂಗಳಲ್ಲಿ 368 ಮಿಲಿಯನ್ ಡಾಲರ್ನಷ್ಟು ವಿದೇಶೀ ನೇರ ಹೂಡಿಕೆಗಳು ಹರಿದು ಬಂದಿವೆ. ಸರ್ಕಾರದಿಂದ ಸಂಸತ್ಗೆ ನೀಡಿದ ಮಾಹಿತಿ ಪ್ರಕಾರ 2024-25ರ ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ 368.37 ಮಿಲಿಯನ್ ಡಾಲರ್ ಮೊತ್ತದಷ್ಟು ಎಫ್ಡಿಐ ಬಂದಿದೆಯಂತೆ. ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.
ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಭಾರತದಲ್ಲಿ ಹೂಡಿಕೆಯಾದ 368 ಮಿಲಿಯನ್ ಡಾಲರ್ ವಿದೇಶೀ ಬಂಡವಾಳದಲ್ಲಿ ಹೆಚ್ಚಿನದು ಐರ್ಲೆಂಡ್ ದೇಶದಿಂದ ಬಂದಿದೆ. ಐರ್ಲೆಂಡ್ನಿಂದ 83.84 ಮಿಲಿಯನ್ ಡಾಲರ್, ಸಿಂಗಾಪುರ್ನಿಂದ 48.45 ಮಿಲಿಯನ್, ಆಸ್ಟ್ರೇಲಿಯಾದಿಂದ 20.18 ಮಿಲಿಯನ್ ಡಾಲರ್, ಮೆಕ್ಸಿಕೋದಿಂದ 9.59 ಮಿಲಿಯನ್ ಡಾಲರ್ ಮೊತ್ತದ ನೇರ ಹೂಡಿಕೆಯು ಭಾರತದ ಆಹಾರ ಸಂಸ್ಕರಣಾ ಸೆಕ್ಟರ್ಗೆ ಬಂದಿದೆ.
ಇದನ್ನೂ ಓದಿ: ಶೇ. 3.2ಕ್ಕೆ ಇಳಿದ ನಿರುದ್ಯೋಗ ದರ; ಇ-ಶ್ರಮ್ ಪೋರ್ಟಲ್ನಲ್ಲಿ ಅಸಂಘಟಿತ ವಲಯದ 30 ಕೋಟಿ ಕಾರ್ಮಿಕರ ನೊಂದಣಿ
ಪಿಎಂ ಕಿಸಾನ್ ಸಂಪದ ಯೋಜನೆ, ಪಿಎಂ ಎಫ್ಎಂಇ ಯೋಜನೆ, ಪಿಎಲ್ಐ ಸ್ಕೀಮ್ ಇವು ಭಾರತದ ಫೂಡ್ ಪ್ರೋಸಸಿಂಗ್ ಸೆಕ್ಟರ್ಗೆ ಪುಷ್ಟಿ ನೀಡಲು ಯಶಸ್ವಿಯಾಗಿವೆ. 2023-24ರ ಹಣಕಾಸು ವರ್ಷದಲ್ಲಿ ಈ ಕ್ಷೇತ್ರಕ್ಕೆ ಹರಿದುಬಂದ ಎಫ್ಡಿಐ 608.31 ಮಿಲಿಯನ್ ಡಾಲರ್ ಎನ್ನಲಾಗಿದೆ.
ಕೇಂದ್ರದ ಪಿಡಿಎಸ್ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೇಂದ್ರ ಆಹಾರ ಸಚಿವಾಲಯವು ‘ಅನ್ನ ಚಕ್ರ’ ಎನ್ನುವ ಸಾಧನವನ್ನು ಅಳವಡಿಸಿದೆ. ಇದು ಪಿಡಿಎಸ್ ಸ್ಕೀಮ್ನಲ್ಲಿ ಆಹಾರಧಾನ್ಯಗಳ ಸರಬರಾಜು ಸರಪಳಿಯ ಬಲಪಡಿಸಲಿದೆ. ಒಂದು ಅಂದಾಜು ಪ್ರಕಾರ 80 ಕೋಟಿ ಬಡಜನರಿಗೆ ಉಚಿತವಾಗಿ ಗೋಧಿ ಮತ್ತು ಅಕ್ಕಿಯನ್ನು ಸಾಗಿಸಲು ಆಗುವ ವಾರ್ಷಿಕ ವೆಚ್ಚದಲ್ಲಿ 250 ಕೋಟಿ ರೂನಷ್ಟು ಹಣವನ್ನು ಉಳಿತಾಯ ಮಾಡಲು ಅನ್ನ ಚಕ್ರ ಸಹಾಯವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ಅನಗತ್ಯ ಹಣ ಪೋಲು ತಪ್ಪಿಸಲು ಕ್ರಮ; ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ವಾಪಸ್
ಅನ್ನ ಚಕ್ರ ಯೋಜನೆಯನ್ನು 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈ ವೇಳೆ, ಪಡಿತರ ಅಂಗಡಿಗಳಿಗೆ ಆಹಾರಧಾನ್ಯಗಳನ್ನು ಸರಬರಾಜು ಮಾಡಲು ಅತಿ ಸಮೀಪ ಇರುವ ಎಫ್ಸಿಐ ಗೋದಾಮುಗಳನ್ನು ಗುರುತಿಸಿ ಮಾರ್ಗಗಳ ಮರುರಚನೆ ಮಾಡಲಾಯಿತು. ಇದರಿಂದ ಸರಬರಾಜು ಮಾರ್ಗದ ಅಂತರ ಶೇ. 15ರಿಂದ 50ರಷ್ಟು ಕಡಿಮೆ ಆಗಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಈಗ ಪೂರ್ಣಪ್ರಮಾಣದಲ್ಲಿ ಜಾರಿಗೆ ತರಲಾಗುತ್ತಿದೆ.
ವರ್ಲ್ಡ್ ಫೂಡ್ ಪ್ರೋಗ್ರಾಮ್ ಮತ್ತು ಐಐಟಿ ದಿಲ್ಲಿ ಸಹಯೋಗದಲ್ಲಿ ಅನ್ನ ಚಕ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಆಹಾರ ಮತ್ತು ಸಂಸ್ಕರಣೆ ಸಚಿವ ಪ್ರಹ್ಲಾದ್ ಜೋಷಿ ಈ ಟೂಲ್ ಅನ್ನು ಅನಾವರಣಗೊಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ