ನವದೆಹಲಿ, ಏಪ್ರಿಲ್ 3: ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ (Billionaires) ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬರುತ್ತಿದೆ. ಇಲ್ಲಿ ಆರ್ಥಿಕತೆ ಬೆಳೆದಂತೆಲ್ಲಾ ಹೆಚ್ಚೆಚ್ಚು ಮಂದಿ ಕುಬೇರರಾಗುತ್ತಿದ್ದಾರೆ. ಜಾಗತಿಕ ಬಿಲಿಯನೇರ್ಗಳ ಸಾಲಿನಲ್ಲಿ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ. ಫೋರ್ಬ್ಸ್ ಬಿಲಿಯನೇರ್ ಪಟ್ಟಿ 2024 ಪ್ರಕಾರ ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ 200 ದಾಟಿದೆ. ಈ ಮೈಲಿಗಲ್ಲನ್ನು ಭಾರತ ಮುಟ್ಟಿದ್ದು ಇದೇ ಮೊದಲು. ವಿಶ್ವದಲ್ಲಿ ಅತಿ ಹೆಚ್ಚು ಬಿಲಿಯನೇರ್ಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನ ಪಡೆದಿದೆ. ಕಳೆದ ವರ್ಷ ಈ ಕುಬೇರರ ಸಂಖ್ಯೆ 169 ಇತ್ತು. ಈ ವರ್ಷ 25 ಹೊಸ ಬಿಲಿಯನೇರ್ಗಳು ಸೇರ್ಪಡೆಯಾಗಿದ್ದಾರೆ. ಭಾರತದಲ್ಲಿರುವ 200 ಬಿಲಿಯನೇರ್ಗಳ ಬಳಿ ಒಟ್ಟಾರೆ ಇರುವ ಸಂಪತ್ತು 954 ಬಿಲಿಯನ್. ಅಂದರೆ ಹೆಚ್ಚೂಕಡಿಮೆ ಒಂದು ಟ್ರಿಲಿಯನ್ ಡಾಲರ್ನಷ್ಟು ಸಂಪತ್ತು ಈ 200 ಜನರ ಬಳಿ ಇದೆ. ಪಾಕಿಸ್ತಾನದ ಜಿಡಿಪಿಯ ಮೂರು ಪಟ್ಟು ಹಣ ಈ ಭಾರತೀಯ ಕುಬೇರರ ಬಳಿ ಇದೆ ಎನ್ನಬಹುದು.
ಫೋರ್ಬ್ಸ್ ಪಟ್ಟಿ ಪ್ರಕಾರ ವಿಶ್ವಾದ್ಯಂತ ಬಿಲಿಯನೇರ್ಗಳ ಸಂಖ್ಯೆ 2,781 ಇದೆ. 2021ರಲ್ಲಿ 2,760 ಬಿಲಿಯನೇರ್ಗಳಿದ್ದರು. ಈ ಬಾರಿ ಸಂಖ್ಯೆ ಹೆಚ್ಚಾಗಿದೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಜಾಗತಿಕವಾಗಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇವರ ಬಳಿ 222.4 ಬಿಲಿಯನ್ ಡಾಲರ್ನಷ್ಟು ಸಂಪತ್ತು ಇದೆ. ಅಮೇಜಾನ್ನ ಜೆಫ್ ಬೆಜೋಸ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಸಾಕಷ್ಟು ಕಾಲ ನಂಬರ್ ಒನ್ ಸ್ಥಾನದಲ್ಲಿದ್ದ ಇಲಾನ್ ಮಸ್ಕ್ 190 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ.
ಇದನ್ನೂ ಓದಿ: ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್ನಿಂದ ಹೋಲಿಕೆ
ಭಾರತದ ಮುಕೇಶ್ ಅಂಬಾನಿ 116.3 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ಭಾರತದ ನಂಬರ್ ಒನ್ ಶ್ರೀಮಂತ ಎಂಬ ಪಟ್ಟ ಮುಂದುವರಿಸಿದ್ದಾರೆ. ಒಂದಿಲ್ಲೊಂದು ಹಿನ್ನಡೆ ಕಾಣುತ್ತಿರುವ ಗೌತಮ್ ಅದಾನಿ ಆಸ್ತಿ 84.8 ಬಿಲಿಯನ್ ಡಾಲರ್ಗೆ ಇಳಿದಿದ್ದು ಇವರು ಶ್ರೀಮಂತಿಕೆಯಲ್ಲಿ 17ನೇ ಸ್ಥಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?
ಒಂದು ಬಿಲಿಯನ್ ಅಥವಾ ನೂರು ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವವರನ್ನು ಬಿಲಿಯನೇರ್ ಎಂದನಿಸಿಕೊಳ್ಳುತ್ತಾರೆ. ರುಪಾಯಿ ಲೆಕ್ಕದಲ್ಲಿ ಒಂದು ಬಿಲಿಯನ್ ಡಾಲರ್ ಎಂದರೆ ಈಗಿನ ಬೆಲೆಯಲ್ಲಿ 8,350 ಕೋಟಿ ರೂ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ