ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ

Comparing Economies of India, Pakistan and Other Countries: ದಕ್ಷಿಣ ಏಷ್ಯಾ ದೇಶಗಳ ಆರ್ಥಿಕತೆ ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತಿಲ್ಲ ಎಂದು ವಿಶ್ವಬ್ಯಾಂಕ್​ನ ವರದಿಯೊಂದು ಹೇಳಿದೆ. ಭಾರತವೂ ಒಳಗೊಂಡಂತೆ ಈ ಭಾಗದ ವಿವಿಧ ದೇಶಗಳಲ್ಲಿ ಮಾನವ ಸಂಪನ್ಮೂಲ ಹೆಚ್ಚಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳುವಷ್ಟು ಉದ್ಯೋಗಸೃಷ್ಟಿ ಆಗಿಲ್ಲ. ಬೇರೆ ಅಭಿವೃದ್ಧಿಶೀಲ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಏಷ್ಯಾ ಭಾಗದಲ್ಲಿ ಉದ್ಯೋಗಸೃಷ್ಟಿ ಕಡಿಮೆ ಇದೆ. ಇದರಿಂದ ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಕುಂಠಿತವಾಗಿದೆ ಎಂಬುದು ವರ್ಲ್ಡ್ ಬ್ಯಾಂಕ್​ನ ಆರ್ಥಿಕ ತಜ್ಞರ ಅಭಿಪ್ರಾಯ.

ಈ ವರ್ಷ ಭಾರತ, ಪಾಕಿಸ್ತಾನ ಆರ್ಥಿಕ ಬೆಳವಣಿಗೆ ಹೇಗಿರುತ್ತೆ?; ವಿಶ್ವಬ್ಯಾಂಕ್​ನಿಂದ ಹೋಲಿಕೆ
ವಿಶ್ವಬ್ಯಾಂಕ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 10:30 AM

ವಾಷಿಂಗ್ಟನ್, ಏಪ್ರಿಲ್ 3: ಭಾರತ ಅದ್ವಿತೀಯ ರೀತಿಯಲ್ಲಿ ಆರ್ಥಿಕ ವೃದ್ಧಿ ತೋರುತ್ತಿದ್ದರೂ ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ದಕ್ಷಿಣ ಏಷ್ಯಾ ಪ್ರದೇಶದ ಆರ್ಥಿಕತೆ ಸದ್ಯಕ್ಕೆ ತೀರಾ ಆಶಾದಾಯಕವಾಗಿಲ್ಲ. ಈ ಪ್ರದೇಶದ ಆರ್ಥಿಕತೆ ಇನ್ನೂ ಕೂಡ ಕೋವಿಡ್ ಮುಂಚಿನ ಆರ್ಥಿಕ ಮಟ್ಟವನ್ನು (pre-covid growth level) ದಾಟಿಲ್ಲ. ಭಾರತವನ್ನೂ ಒಳಗೊಂಡಂತೆ ಈ ಭಾಗದ ದೇಶಗಳಲ್ಲಿ ಖಾಸಗಿ ಹೂಡಿಕೆಗಳು ಹೆಚ್ಚಾಗಬೇಕು, ಉದ್ಯೋಗಸೃಷ್ಟಿ ಜಾಸ್ತಿಯಾಗಬೇಕು. ಆಗ ಆರ್ಥಿಕ ಅಭಿವೃದ್ಧಿಗೆ ವೇಗ ಸಿಗಬಹುದು ಎಂಬುದು ವಿಶ್ವಬ್ಯಾಂಕ್​ನ ಸಲಹೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಭೂತಾನ್ ಮತ್ತು ಅಫ್ಘಾನಿಸ್ತಾನ ದೇಶಗಳು ದಕ್ಷಿಣ ಏಷ್ಯಾ ಪ್ರದೇಶದಲ್ಲಿವೆ. ವಿಶ್ವಬ್ಯಾಂಕ್ ವರದಿಯಲ್ಲಿ ಅಫ್ಗಾನಿಸ್ತಾನದ ಅಂಕಿ ಅಂಶಗಳನ್ನು ಒಳಗೊಳ್ಳಲಾಗಿಲ್ಲ. ಭಾರತದ ಆರ್ಥಿಕತೆ 2023-24ರಲ್ಲಿ ಶೇ. 7.5ರಷ್ಟು ಬೆಳೆದರೆ, 2024-25ರಲ್ಲಿ ಅದರ ಜಿಡಿಪಿ ಬೆಳವಣಿಗೆ ಶೇ. 6.6ಕ್ಕೆ ಸೀಮಿತಗೊಳ್ಳಬಹುದು ಎಂಬುದು ವಿಶ್ವಬ್ಯಾಂಕ್​ನ ಅನಿಸಿಕೆ.

ಇದನ್ನೂ ಓದಿ: ಜಪಾನ್ ದೇಶದ ಕರೆನ್ಸಿ 34 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ; ಭಾರತಕ್ಕೆ ಲಾಭವಾ, ನಷ್ಟವಾ?

ವಿಶ್ವಬ್ಯಾಂಕ್ ಅಂದಾಜು ಪ್ರಕಾರ 2023-24ರಲ್ಲಿ ಜಿಡಿಪಿ ವೃದ್ಧಿ

  • ಭಾರತ: ಶೇ. 7.5
  • ಬಾಂಗ್ಲಾದೇಶ: ಶೇ. 5.6
  • ಪಾಕಿಸ್ತಾನ: ಶೇ. 1.8
  • ಭೂತಾನ್: ಶೇ. 4.9
  • ಮಾಲ್ಡೀವ್ಸ್: ಶೇ. 4.7
  • ಶ್ರೀಲಂಕಾ: ಶೇ. 2.2
  • ನೇಪಾಳ: ಶೇ. 3.3

ವಿಶ್ವಬ್ಯಾಂಕ್ ಅಂದಾಜು ಪ್ರಕಾರ 2024-25ರಲ್ಲಿ ಜಿಡಿಪಿ ವೃದ್ಧಿ

  • ಭಾರತ: ಶೇ. 6.6
  • ಬಾಂಗ್ಲಾದೇಶ: ಶೇ. 5.7
  • ಪಾಕಿಸ್ತಾನ: ಶೇ. 2.3
  • ಭೂತಾನ್: ಶೇ. 5.7
  • ಮಾಲ್ಡೀವ್ಸ್: ಶೇ. 5.2
  • ಶ್ರೀಲಂಕಾ: ಶೇ. 2.5
  • ನೇಪಾಳ: ಶೇ. 4.6

ದಕ್ಷಿಣ ಏಷ್ಯಾ ದೇಶಗಳು ಹಿನ್ನಡೆ ಅನುಭವಿಸುತ್ತಿರುವುದು ಯಾಕೆ?

ದಕ್ಷಿಣ ಏಷ್ಯ ದೇಶಗಳಲ್ಲಿ ಉತ್ತಮ ಆರ್ಥಿಕ ಅಭಿವೃದ್ಧಿ ಸಾಧಿಸುವ ಸಾಮರ್ಥ್ಯ ಹೆಚ್ಚಿದೆ. ಇದಕ್ಕೆ ಕಾರಣ ಜನಸಂಖ್ಯೆ. ಬೇರೆ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಜನಸಂಖ್ಯೆ ಹೆಚ್ಚು. ಅದರಲ್ಲೂ ಕೆಲಸ ಮಾಡುವ ವಯೋಮಾನದ ಜನರ ಸಂಖ್ಯೆ ಹೆಚ್ಚಿದೆ. ಈ ಮಾನವ ಸಂಪನ್ಮೂಲವನ್ನು ದಕ್ಷಿಣ ಏಷ್ಯಾ ದೇಶಗಳು ಸರಿಯಾಗಿ ಬಳಸುತ್ತಿಲ್ಲ. ಉದ್ಯೋಗಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು ಎಂದು ವಿಶ್ವಬ್ಯಾಂಕ್​ನ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

ಈ ಪ್ರಕಾರ ದಕ್ಷಿಣ ಎಷ್ಯಾದಲ್ಲಿ ಉದ್ಯೋಗ ಅನುಪಾತ ಶೇ. 59 ಇದ್ದರೆ, ಬೇರೆ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಇದು ಶೇ. 70ರಷ್ಟಿದೆ. ಉದ್ಯೋಗ ಅನುಪಾತ ಇನ್ನಷ್ಟು ಹೆಚ್ಚಿದಲ್ಲಿ ದಕ್ಷಿಣ ಏಷ್ಯಾದ ಒಟ್ಟಾರೆ ಆರ್ಥಿಕ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಾಗುತ್ತದೆ ಎಂದು ವರ್ಲ್ಡ್ ಬ್ಯಾಂಕ್​ನ ಸೌತ್ ಏಷ್ಯಾ ಮುಖ್ಯ ಆರ್ಥಿಕ ತಜ್ಞ ಫ್ರಾಂಜಿಸ್ಕಾ ಆನ್ಸೋರ್ಜ್ ಹೇಳಿದ್ದಾರೆ.

ಆದರೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ವಿಶ್ವಬ್ಯಾಂಕ್​ನ ಕಡಿಮೆ ಅಂದಾಜು ಅಚ್ಚರಿ ಮೂಡಿಸುತ್ತದೆ. 2023-24ರಲ್ಲಿ ಭಾರತದ ಜಿಡಿಪಿ ಶೇ. 8ರ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಅನೇಕರು ಅಂದಾಜಿಸಿದ್ದಾರೆ. 2024-25ರಲ್ಲೂ ಇದೇ ವೇಗವನ್ನು ಭಾರತ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ