ನವದೆಹಲಿ, ಜೂನ್ 7: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (India Forex reserves) ಇದೇ ಮೊದಲ ಬಾರಿಗೆ 650 ಬಿಲಿಯನ್ ಡಾಲರ್ ಗಡಿ ದಾಟಿದೆ. ಮೇ 31ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 651.5 ಬಿಲಿಯನ್ ಡಾಲರ್ ಇದೆ. ಆ ವಾರ 4.8 ಬಿಲಿಯನ್ ಡಾಲರ್ನಷ್ಟು ನಿಧಿ ಹೆಚ್ಚಳ ಕಂಡಿತ್ತು. ಅದಕ್ಕೂ ಹಿಂದಿನ ವಾರದಲ್ಲಿ 2 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ನಿಧಿ ಸಂಕುಚಿತಗೊಂಡಿತ್ತು. ಈಗ ಮೇ 31ಕ್ಕೆ ಅಂತ್ಯಗೊಂಡ ವಾರದಲ್ಲಿ ಭರ್ಜರಿ ಹೆಚ್ಚಳ ಕಂಡು ಹೊಸ ದಾಖಲೆಯ ಮಟ್ಟಕ್ಕೆ ಏರಿದೆ.
ಮಾನಿಟರಿ ಪಾಲಿಸಿ ಕಮಿಟಿಯ ಮೂರು ದಿನಗಳ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಫಾರೆಕ್ಸ್ ರಿಸರ್ವ್ಸ್ನಲ್ಲಿ ಹೆಚ್ಚಳ ಆಗಿರುವ ಸಂಗತಿಯನ್ನು ತಿಳಿಸಿದ್ದಾರೆ. ಫಾರೆಕ್ಸ್ ನಿಧಿಯಲ್ಲಿ ಯಾವ್ಯಾವುವೆಲ್ಲಾ ಎಷ್ಟೆಷ್ಟು ಹೆಚ್ಚಳ ಆಗಿದೆ ಎನ್ನುವ ಮಾಹಿತಿಯನ್ನು ಇಂದು ಸಂಜೆ ಆರ್ಬಿಐ ಪ್ರಕಟಿಸಲಿದೆ.
ಇದನ್ನೂ ಓದಿ: ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ಆರ್ಬಿಐ ನಿರ್ಧಾರ
ಹಿಂದಿನ ವಾರದಲ್ಲಿ, ಅಂದರೆ ಮೇ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮಿಸಲು ನಿಧಿ 646.673 ಬಿಲಿಯನ್ ಡಾಲರ್ ಇತ್ತು. ಅಂದರೆ ಸುಮಾರು 53.7 ಲಕ್ಷ ಕೋಟಿ ರೂನಷ್ಟು ಫಾರೆಕ್ಸ್ ನಿಧಿ ಇತ್ತು. ಅದರ ಹಿಂದಿನ ವಾರಕ್ಕೆ ಹೋಲಿಸಿದರೆ 2.027 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿತ್ತು. ಫಾರೀನ್ ಕರೆನ್ಸಿ ಆಸ್ತಿ, ಚಿನ್ನ, ಎಸ್ಡಿಆರ್, ಐಎಂಎಫ್ನೊಂದಿಗಿರುವ ನಿಧಿ ಇಷ್ಟೂ ಅಂಶಗಳೂ ಇಳಿಕೆ ಆಗಿದ್ದವು. ಮೇ 31ರಂದು ಫಾರೆಕ್ಸ್ ಮೀಸಲು ಸಂಪತ್ತು ಹೊಸ ದಾಖಲೆ ಬರೆದಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಆರ್ಥಿಕತೆ ಬಗ್ಗೆ ಹೆಚ್ಚು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಹಣದುಬ್ಬರದ ಬಗ್ಗೆ ಆಶಾದಾಯಕವಾಗಿದ್ದಾರೆ. ಬಾಹ್ಯ ಅಂಶಗಳು ಪರಿಣಾಮ ಬೀರದಷ್ಟು ಭಾರತದ ಆರ್ಥಿಕತೆ ಸುದೃಢತೆ ಬೆಳೆಸಿಕೊಂಡಿದೆ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಂಕುಗಳಿಗೆ ಸಿಂಗಲ್ ಡೆಪಾಸಿಟ್ ಮಿತಿ 3 ಕೋಟಿ ರೂಗೆ ಹೆಚ್ಚಳ; ಹೆಚ್ಚಿನ ಮೊತ್ತ ರೀಟೇಲ್ ಎಫ್ಡಿಗೆ ವರ್ಗ
ಆರ್ಬಿಐನ ಆರು ಸದಸ್ಯರಿರುವ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಶೇ. 6.50ರಲ್ಲಿ ಮುಂದುವರಿಸುವ ನಿರ್ಧಾರಕ್ಕೆ 4:2ರ ಬೆಂಬಲ ವ್ಯಕ್ತವಾಗಿದೆ. ಜಿಡಿಪಿ 2024-25ರ ಆರ್ಥಿಕ ವರ್ಷದಲ್ಲಿ ಶೇ. 7.2ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ. ಈ ಹಿಂದಿನ ಎಂಪಿಸಿ ಸಭೆಯಲ್ಲಿ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಲಾಗಿತ್ತು. ಈಗ ಹೆಚ್ಚು ಆಶಾದಾಯಕವಾಗಿದೆ.
ಹಾಗೆಯೇ, ಮುಂಗಾರು ಮಳೆ ಉತ್ತಮವಾಗಿ ಆಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಹಣದುಬ್ಬರ ಕಡಿಮೆ ಆಗಬಹುದು ಎನ್ನುವ ಆಶಾಭಾವನೆಯನ್ನು ಆರ್ಬಿಐ ಇಟ್ಟುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ