AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆಯ ಬಂಪರ್ ಫಲ ಪಡೆದ ಚಂದ್ರಬಾಬು ನಾಯ್ಡು ಪತ್ನಿ; ಐದು ದಿನದಲ್ಲಿ 584 ಕೋಟಿ ರೂ ಸಂಪತ್ತು ಹೆಚ್ಚಿಸಿಕೊಂಡ ಭುವನೇಶ್ವರಿ

Chandrababu Naidu's wife Nara Bhuvaneshwari great stock gain: ಹೆರಿಟೇಜ್ ಫೂಡ್ಸ್ ಕಂಪನಿಯ ಪ್ರಮುಖ ಪ್ರೊಮೋಟರ್ (ಮಾಲಕಿ) ಆಗಿರುವ ನರ ಭುವನೇಶ್ವರಿ ಅವರ ಷೇರು ಸಂಪತ್ತು ಕಳೆದ ಐದು ದಿನದಲ್ಲಿ ಭರ್ಜರಿಯಾಗಿ ಏರಿದೆ. ಆಂಧ್ರದ ಮಾಜಿ ಮತ್ತು ಬಾವಿ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಹೆರಿಟೇಜ್ ಫೂಡ್ಸ್​ನಲ್ಲಿ 2.26 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಜೂನ್ 3ರ ಆರಂಭದಲ್ಲಿ ಅವರ ಒಟ್ಟು ಷೇರುಸಂಪತ್ತು 911 ಕೋಟಿ ರೂ ಇತ್ತು. ಇವತ್ತು ಜೂನ್ 7ಕ್ಕೆ ಅವರ ಷೇರುಸಂಪತ್ತು 1,495 ಕೋಟಿ ರೂಗೆ ಏರಿದೆ. ಐದು ದಿನದಲ್ಲಿ 584 ಕೋಟಿ ರೂನಷ್ಟು ಸಂಪತ್ತು ವೃದ್ಧಿಯಾಗಿದೆ.

ಷೇರು ಮಾರುಕಟ್ಟೆಯ ಬಂಪರ್ ಫಲ ಪಡೆದ ಚಂದ್ರಬಾಬು ನಾಯ್ಡು ಪತ್ನಿ; ಐದು ದಿನದಲ್ಲಿ 584 ಕೋಟಿ ರೂ ಸಂಪತ್ತು ಹೆಚ್ಚಿಸಿಕೊಂಡ ಭುವನೇಶ್ವರಿ
ಚಂದ್ರಬಾಬು ನಾಯ್ಡು ಮತ್ತು ಪತ್ನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2024 | 4:51 PM

Share

ಅಮರಾವತಿ, ಜೂನ್ 7: ಮತ ಎಣಿಕೆಯ ದಿನದಂದು ಷೇರು ಮಾರುಕಟ್ಟೆ ಪ್ರಪಾತಕ್ಕೆ ಬಿದ್ದಿತಾದರೂ ಬಳಿಕ ಸಾಕಷ್ಟು ಚೇತರಿಸಿಕೊಂಡು ಮೇಲೇರಿದೆ. ಸಾಕಷ್ಟು ಜನರ ಸಂಪತ್ತು ವೃದ್ಧಿಯಾಗಿದೆ. ಎನ್​ಡಿಎ 3.0 ಸರ್ಕಾರದ ಕಿಂಗ್ ಮೇಕರ್ ಎನಿಸಿರುವ ಚಂದ್ರಬಾಬು ನಾಯ್ಡು ಅವರ ಪತ್ನಿ ನರ ಭುವನೇಶ್ವರಿ (Nara Bhuvaneshwari) ಅವರ ಷೇರು ಸಂಪತ್ತು ಐದು ದಿನದಲ್ಲಿ ಬರೋಬ್ಬರಿ 584 ಕೋಟಿ ರೂನಷ್ಟು ಹೆಚ್ಚಾಗಿದೆ. ಜೂನ್ 4ರಂದು ಮಹಾಕುಸಿತದ ದಿನವೂ ಅವರ ಸಂಪತ್ತು ಕಡಿಮೆ ಆಗಲಿಲ್ಲ ಎನ್ನುವುದು ವಿಶೇಷ. ನರ ಭುವನೇಶ್ವರಿ ಅವರು ಹೆರಿಟೇಜ್ ಫೂಡ್ಸ್​ನ ಒಡತಿಯಾಗಿದ್ದಾರೆ. ಅವರ ಷೇರು ಶೇ. 24.37ರಷ್ಟಿದೆ. ಇದರ ಪರಿಣಾಮವಾಗಿ ಸಾವಿರ ಕೋಟಿ ರೂ ಮೌಲ್ಯದ ಷೇರು ಸಂಪತ್ತಿನ ಮಾಲಕಿಯಾಗಿದ್ದಾರೆ.

ಜೂನ್ 3, ಸೋಮವಾರದಂದು ಹೆರಿಟೇಜ್ ಫುಡ್​ನ ಷೇರುಬೆಲೆ 402.90 ರೂ ಇತ್ತು. ಇವತ್ತು ಅದರ ಬೆಲೆ 661.25 ರೂಗೆ ಹೆಚ್ಚಾಗಿದೆ. ಹೆರಿಟೇಜ್ ಫೂಡ್ಸ್​ನಲ್ಲಿ ನರ ಭುವನೇಶ್ವರಿ ಅವರು 2,26,11,525 ಷೇರುಗಳನ್ನು ಹೊಂದಿದ್ದಾರೆ. ಅಂದರೆ 2.26 ಕೋಟಿ ಷೇರುಗಳ ಒಡತಿ ಅವರು. ಮೇ 31ಕ್ಕೆ ವಾರಾಂತ್ಯದ ವೇಳೆ ಅಷ್ಟು ಷೇರುಗಳ ಒಟ್ಟು ಮೌಲ್ಯ 911 ಕೋಟಿ ರೂ ಇತ್ತು. ಇವತ್ತು ಅವರ ಷೇರು ಸಂಪತ್ತು 1495 ಕೋಟಿ ರೂಗೆ ಏರಿದೆ. ಅಂದರೆ ಕೇವಲ ಐದು ದಿನದಲ್ಲಿ ಅವರ ಷೇರು ಸಂಪತ್ತು 584 ಕೋಟಿ ರೂನಷ್ಟು ಏರಿಕೆ ಆಗಿದೆ.

ಇದನ್ನೂ ಓದಿ: ಎನ್​ಡಿಎಯಿಂದ ಸುಭದ್ರ ಸರ್ಕಾರದ ಭರವಸೆ; ಹೊಸ ಎತ್ತರಕ್ಕೆ ಏರಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ದಾಖಲೆ

ಹೆರಿಟೇಜ್ ಫೂಡ್ಸ್ ಷೇರು ಬೆಲೆ ಹೆಚ್ಚಲು ಏನು ಕಾರಣ?

ಹೆರಿಟೇಜ್ ಫೂಡ್ಸ್ ಆಂಧ್ರ ಮೂಲದ ಕಂಪನಿ. ಹೆರಿಟೇಜ್ ಹಾಲು, ಮೊಸರು ಇತ್ಯಾದಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡುವಿನಿಂದ ಹಿಡಿದು ದೂರದ ಪಂಜಾಬ್​ವರೆಗೂ ಅದು ಮಾರುಕಟ್ಟೆ ಹೊಂದಿದೆ. ಚಂದ್ರಬಾಬು ನಾಯ್ಡು 1992ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದ್ದರು. ಈಗ ಅವರ ಪತ್ನಿ ನರ ಭುನವೇಶ್ವರಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಅವರೇ ಮಾಲಕಿಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸಂಪೂರ್ಣ ಬಹುಮತ ಪಡೆದುಕೊಂಡ ಹಿನ್ನೆಲೆಯಲ್ಲಿ ಹೆರಿಟೇಜ್ ಫೂಡ್ಸ್ ಷೇರಿಗೆ ಭಾರೀ ಬೇಡಿಕೆ ಬಂದಿದೆ. ಹೆರಿಟೇಜ್ ಮಾತ್ರವಲ್ಲ, ಆಂಧ್ರ ಮೂಲದ ಹಲವು ಸಂಸ್ಥೆಗಳ ಷೇರುಗಳು ಲಾಭ ಮಾಡುತ್ತಿವೆ. ಜೂನ್ 4ರಂದು ಹೆಚ್ಚಿನ ಷೇರುಗಳು ನೆಗಟಿವ್ ಆಗಿದ್ದರೂ ಹೆರಿಟೇಜ್ ಷೇರಿಗೆ ಬೇಡಿಕೆ ಹೆಚ್ಚಲು ಕಾರಣವಾಗಿದ್ದು ಟಿಡಿಪಿಯ ಭರ್ಜರಿ ಚುನಾವಣೆ ಗೆಲುವು.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು 18ನೇ ಲೋಕಸಭೆಯ ನಾಯಕನನ್ನಾಗಿ ಆಯ್ಕೆ ಮಾಡಿದ ಎನ್​ಡಿಎ ಸಂಸದರು

ಏಪ್ರಿಲ್ ತಿಂಗಳಲ್ಲಿ ಹೆರಿಟೇಜ್ ಪೂಡ್ಸ್​ನ ಷೇರುಬೆಲೆ 300 ರೂ ಇತ್ತು. ಎರಡು ತಿಂಗಳ ಒಳಗೆ ಎರಡು ಪಟ್ಟಿಗೂ ಹೆಚ್ಚು ಮೌಲ್ಯ ವೃದ್ಧಿಯಾಗಿದೆ. ಏಪ್ರಿಲ್ 16ರಂದು ಯಾರಾದರೂ ಇದರ ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ ಅವರ ಒಂದು ಲಕ್ಷ ರೂ ಹಣ ಇವತ್ತು ಎರಡು ಲಕ್ಷ ರೂಗಿಂತ ಹೆಚ್ಚಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ