ಎನ್ಡಿಎಯಿಂದ ಸುಭದ್ರ ಸರ್ಕಾರದ ಭರವಸೆ; ಹೊಸ ಎತ್ತರಕ್ಕೆ ಏರಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ದಾಖಲೆ
PM Narendra Modi's speech makes Stock Market happier: ಪ್ರಧಾನಿ ನರೇಂದ್ರ ಮೋದಿ ಅವರು ಎನ್ಡಿಎ ಒಕ್ಕೂಟದ ಎಲ್ಲಾ ಅಂಗಪಕ್ಷಗಳ ವಿಶ್ವಾಸ ಪಡೆದು ಆಡಳಿತ ನಿರ್ವಹಿಸುವುದಾಗಿ ನೀಡಿದ ಭರವಸೆ ಷೇರು ಮಾರುಕಟ್ಟೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಬಿಎಸ್ಇನ ಸೆನ್ಸೆಕ್ಸ್ ಸೇರಿ ಎಲ್ಲಾ ಸೂಚ್ಯಂಕಗಳೂ ಶುಕ್ರವಾರ ಪಾಸಿಟಿವ್ ಆಗಿವೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲೂ ನಿಫ್ಟಿ ಸೇರಿದಂತೆ ಎಲ್ಲಾ ಸೂಚ್ಯಂಕಗಳು ಮೇಲೇರಿವೆ. ಒಟ್ಟಾರೆ ಷೇರು ಮಾರುಕಟ್ಟೆ ಹೊಸ ದಾಖಲೆಯ ವೇಗದಲ್ಲಿ ಮುನ್ನುಗ್ಗುತ್ತಿದೆ.
ನವದೆಹಲಿ, ಜೂನ್ 7: ಷೇರು ಮಾರುಕಟ್ಟೆ (stock market) ಇಂದು ಶುಕ್ರವಾರ ಇನ್ನಿಲ್ಲದ ರೀತಿಯಲ್ಲಿ ಕಳೆಗಟ್ಟಿದೆ. ಜೂನ್ 4ರಂದು ಮತ ಎಣಿಕೆಯ ದಿನ ಪ್ರಪಾತಕ್ಕೆ ಬಿದ್ದಿದ್ದ ಮಾರುಕಟ್ಟೆ ಈಗ ಬಿದ್ದಷ್ಟೇ ವೇಗದಲ್ಲಿ ಫೀನಿಕ್ಸ್ನಂತೆ ಮೇಲೇರಿದೆ. ಸೆನ್ಸೆಕ್ಸ್, ನಿಫ್ಟಿ ಹೀಗೆ ಪ್ರತಿಯೊಂದು ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಮುಂದುವರಿಯುತ್ತಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ಎಲ್ಲಾ ಎನ್ಡಿಎ ಅಂಗ ಪಕ್ಷಗಳು ಸಂಪೂರ್ಣ ಬೇಷರತ್ ಆಗಿ ಮೋದಿಗೆ ಬೆಂಬಲ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಕೂಡ ಎನ್ಡಿಎನ ಎಲ್ಲಾ ಅಂಗ ಪಕ್ಷಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇವೆಲ್ಲವೂ ಮಾರುಕಟ್ಟೆಗೆ ವಿಶ್ವಾಸ ಹೆಚ್ಚಿಸಿವೆ. ಪರಿಣಾಮವಾಗಿ, ಷೇರುಪೇಟೆ ಹೊಸ ದಾಖಲೆ ಬರೆದಿದೆ.
ಇಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ ಬರೋಬ್ಬರಿ 1,600 ಅಂಕಗಳಷ್ಟು ಮೇಲೇರಿ 76,700.82 ರ ಮಟ್ಟ ಮುಟ್ಟಿತ್ತು. ವ್ಯವಹಾರದ ಕೊನೆಯ ಗಂಟೆಯಲ್ಲಿ 76,550 ಅಂಕಗಳ ಆಸುಪಾಸಿನ ಮಟ್ಟದಲ್ಲಿ ಸೆನ್ಸೆಕ್ಸ್ ಹೊಯ್ದಾಡುತ್ತಿತ್ತು.
ಇನ್ನು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ ಕೂಡ 23,281 ಅಂಕಗಳ ಮಟ್ಟದವರೆಗೂ ಹೋಗಿತ್ತು. 480 ಅಂಕಗಳನ್ನು ನಿಫ್ಟಿ50 ಗಳಿಸಿತ್ತು. ಸದ್ಯ ಈ 50 ಷೇರುಗಳ ಸೂಚ್ಯಂಕ 23,242 ಅಂಕಗಳ ಆಸುಪಾಸಿನಲ್ಲಿದೆ.
ಎನ್ಎಸ್ಇನ ಸೂಚ್ಯಂಕಗಳ ಪೈಕಿ ಅತಿ ಹೆಚ್ಚಳ ಕಂಡಿದ್ದು ನಿಫ್ಟಿ ಐಟಿ, ನಿಫ್ಟಿ ಸ್ಮಾಲ್ಕ್ಯಾಪ್50 ಮತ್ತು ನಿಫ್ಟಿ ಆಟೊ. ಇವು ಕ್ರಮವಾಗಿ ಶೇ. 3.10, ಶೇ. 2.53 ಮತ್ತು ಶೇ. 2.36ರಷ್ಟು ಹೆಚ್ಚಾಗಿವೆ. ಸ್ಮಾಲ್ಕ್ಯಾಪ್100 ಸೂಚ್ಯಂಕ, ನಿಫ್ಟಿ ಎನರ್ಜಿ, ನಿಫ್ಟಿ ಕಮಾಡಿಟೀಸ್ ಮೊದಲಾದ ಕೆಲ ಸೂಚ್ಯಂಕಗಳೂ ಕೂಡ ಶುಕ್ರವಾರ ಶೇ. 2ಕ್ಕಿಂತಲೂ ಹೆಚ್ಚು ಹೆಚ್ಚಿವೆ.
ಇದನ್ನೂ ಓದಿ: ಮೇ 31ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್ 651.5 ಬಿಲಿಯನ್ ಡಾಲರ್; ಇದು ಸಾರ್ವಕಾಲಿಕ ದಾಖಲೆ
ಶುಕ್ರವಾರ ಅತಿಹೆಚ್ಚು ಬೇಡಿಕೆ ಪಡೆದ ಸ್ಟಾಕುಗಳು
ನಿಫ್ಟಿ50 ಸೂಚ್ಯಂಕದಲ್ಲಿ ಲಿಸ್ಟ್ ಆಗಿರುವ 50 ಷೇರುಗಳಲ್ಲಿ ಎಸ್ಬಿಐ ಲೈಫ್ ಇನ್ಷೂರೆನ್ಸ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಹೊರತುಪಡಿಸಿ ಉಳಿದ ಎಲ್ಲಾ 48 ಷೇರುಗಳೂ ಕೂಡ ಸಕಾರಾತ್ಮಕವಾಗಿ ವಹಿವಾಟು ಕಂಡಿವೆ. ಟಾಪ್ ಷೇರುಗಳು ಈ ಕೆಳಕಂಡಂತಿವೆ.
- ಮಹೀಂದ್ರ ಅಂಡ್ ಮಹೀಂದ್ರ: ಶೇ. 5.56 ಲಾಭ
- ವಿಪ್ರೋ: ಶೇ. 4.76
- ಇನ್ಫೋಸಿಸ್: ಶೇ. 4.27
- ಅಲ್ಟ್ರಾಟೆಕ್ ಸಿಮೆಂಟ್: ಶೇ. 4.19
- ಟಾಟಾ ಸ್ಟೀಲ್: ಶೇ. 3.98
- ಟೆಕ್ ಮಹೀಂದ್ರ: ಶೇ. 4.20
- ಟೈಟಾನ್ ಕಂಪನಿ: ಶೇ. 3.72
- ಎಲ್ಟಿಐ ಮೈಂಡ್ ಟ್ರೀ: ಶೇ. 3.62
- ಬಜಾಜ್ ಫೈನಾನ್ಸ್: ಶೇ. 3.51
- ಟಾಟಾ ಮೋಟಾರ್ಸ್: ಶೇ. 3.35
- ಒಎನ್ಜಿಸಿ: ಶೇ. 3.09
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ