ಬೆಂಗಳೂರು, ಜುಲೈ 17: ಆ್ಯಪಲ್ಗೆ ಐಫೋನ್ ನಿರ್ಮಿಸಿಕೊಡುವ ಫಾಕ್ಸ್ಕಾನ್ ಸಂಸ್ಥೆ (Foxconn) ಕರ್ನಾಟಕದಲ್ಲಿ ದೇವನಹಳ್ಳಿ ಜೊತೆಗೆ ತುಮಕೂರಿನಲ್ಲೂ ಪ್ರತ್ಯೇಕ ಘಟಕ ಸ್ಥಾಪಿಸಲಿದೆ. ದೇವನಹಳ್ಳಿಯಲ್ಲಿ ಐಫೋನ್ ಅಸೆಂಬಲ್ ಮಾಡುವ ಪ್ರಮುಖ ಘಟಕ ಇದ್ದರೆ, ತುಮಕೂರಿನಲ್ಲಿ ಬೇರೆ ಬಿಡಿಭಾಗ ತಯಾರಿಯಾಗುವ ಪೂರಕ ಘಟಕ ಸ್ಥಾಪನೆಯಾಗುವ ಪ್ರಸ್ತಾಪ ಇದೆ. ಬೆಂಗಳೂರಿನಲ್ಲಿ ಸೋಮವಾರ (ಜುಲೈ 17) ಫಾಕ್ಸ್ಕಾನ್ನ ಅಧಿಕಾರಿಗಳ ತಂಡ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ಈ ವಿಚಾರದ ಚರ್ಚೆಗಳಾಗಿರುವುದು ತಿಳಿದುಬಂದಿದೆ.
ತುಮಕೂರಿನ ಜಪಾನ್ ಇಂಡಸ್ಟ್ರಿಯಲ್ ಟೌನ್ಶಿಪ್ನಲ್ಲಿ 100 ಎಕರೆಯಷ್ಟು ಜಾಗ ಬೇಕೆಂದು ಫಾಕ್ಸ್ಕಾನ್ ಕಂಪನಿ ಕೇಳಿಕೊಂಡಿದೆ. ಇದಕ್ಕೆ ಸರ್ಕಾರ ಕೂಡ ಪೂರಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಫಾಕ್ಸ್ಕಾನ್ನ ತಂಡವೊಂದು ತುಮಕೂರಿಗೆ ಹೋಗಿ ಜಾಗ ನೋಡಿಕೊಂಡು ಬರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಮತ್ತು ಫಾಕ್ಸ್ಕಾನ್ ಅಧಿಕಾರಗಳ ಮಧ್ಯೆ ನಡೆದ ಭೇಟಿಯಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: Foxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ
ಫಾಕ್ಸ್ಕಾನ್ನ ಅಂಗಸಂಸ್ಥೆಯಾದ ಫಾಕ್ಸ್ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್ಐಐ) ತುಮಕೂರಿನಲ್ಲಿ ಹೊಸ ಘಟಕ ಆರಂಭಿಸುವ ಇರಾದೆಯಲ್ಲಿದೆ. ಸಿಎಂ ಭೇಟಿ ಮಾಡಿದ ನಿಯೋಗವು ಎಫ್ಐಐನ ಸಿಇಒ ಬ್ರಾಂಡ್ ಚೆಂಗ್ ಮುಂದಾಳತ್ವದಲ್ಲಿ ಇತ್ತು. ತುಮಕೂರಿನ ಉದ್ದೇಶಿತ ಘಟಕದಲ್ಲಿ ಐಫೋನ್ಗಳ ಸ್ಕ್ರೀನ್, ಹೊರಕವಚ ಮತ್ತಿತರ ಬಿಡಿಭಾಗಗಳ ತಯಾರಿಕೆ ಆಗಲಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಮಾರ್ಚ್ ತಿಂಗಳಲ್ಲಿ ಫಾಕ್ಸ್ಕಾನ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಮಧ್ಯೆ ಒಡಂಬಡಿಕೆ ಆಗಿತ್ತು. ದೇವನಹಳ್ಳಿಯಲ್ಲಿ ಫಾಕ್ಸ್ಕಾನ್ಗೆ ಐಫೋನ್ ತಯಾರಿಕೆ ಘಟಕ ಸ್ಥಾಪಿಸಲು ಸರ್ಕಾರ 300 ಎಕರೆ ಜಾಗ ಕೊಡಲು ಒಪ್ಪಿತ್ತು. ಇತ್ತೀಚೆಗಷ್ಟೇ, 300 ಎಕರೆ ಜಾಗ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ ಎಂದು ಈಗಿನ ಸರ್ಕಾರದ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದರು.
ರಾಜ್ಯದಲ್ಲಿ ಫಾಕ್ಸ್ಕಾನ್ ಸಂಸ್ಥೆ ಒಟ್ಟು 8,000ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದ್ದು 50,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ