Alia Bhatt, Reliance: ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಅವರ ಕಂಪನಿ ಸೇಲ್; ಅಂಬಾನಿ ಪಾಲಾಗಲಿದೆಯಾ ಎಡ್ಡೇ ಮಮ್ಮಾ?
Reliance Brands To Buy Ed-a-Mamma: 2020ರಲ್ಲಿ ಆಲಿಯಾ ಭಟ್ ಸ್ಥಾಪಿಸಿದ ಕಿಡ್ಸ್ವೇರ್ ಬ್ರ್ಯಾಂಡ್ ಎಡ್ ಎ ಮಮ್ಮಾ ಕಂಪನಿಯನ್ನು ಖರೀದಿಸಲು ರಿಲಾಯನ್ಸ್ ಗ್ರೂಪ್ ಕಂಪನಿಯೊಂದು ಮುಂದಾಗಿರುವ ಸುದ್ದಿ ಇದೆ. ಮಾತುಕತೆ ಅಂತಿಮ ಹಂತದಲ್ಲಿರುವುದು ತಿಳಿದುಬಂದಿದೆ.
ಮುಂಬೈ, ಜುಲೈ 17: ರಿಲಾಯನ್ಸ್ ಇಂಡಸ್ಟ್ರೀಸ್ನ ರಿಲಾಯನ್ಸ್ ರೀಟೇಲ್ ವೆಂಚರ್ಸ್ ಕಂಪನಿಗೆ ಸೇರಿದ ರಿಲಾಯನ್ಸ್ ಬ್ರ್ಯಾಂಡ್ಸ್ (Reliance Brands) ಸಂಸ್ಥೆ ಇದೀಗ ಎಡ್–ಎ–ಮಮ್ಮಾ (Ed-a-Mamma) ಎಂಬ ಕಂಪನಿಯನ್ನು ಖರೀದಿಸಲು ಮುಂದಾಗಿರುವ ಸುದ್ದಿ ಕೇಳಿಬಂದಿದೆ. ಎಡ್–ಎ–ಮಮ್ಮಾ ಸಂಸ್ಥೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಅವರಿಂದ ಸ್ಥಾಪನೆಯಾದುದು. ಮಕ್ಕಳ ಉಡುಗೆ ತೊಡುಗೆಗಳನ್ನು ಮಾರುವ ಬ್ರ್ಯಾಂಡ್ ಅದು. ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ರಿಲಾಯನ್ಸ್ ಬ್ರ್ಯಾಂಡ್ಸ್ ಸಂಸ್ಥೆ 300ರಿಂದ 350 ಕೋಟಿ ರುಪಾಯಿಗೆ ಎಡ್ಡೇ ಮಮ್ಮಾವನ್ನು ಖರೀದಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾತುಕತೆ ಅಂತಿಮ ಹಂತಕ್ಕೆ ಬಂದಿರುವುದು ಗೊತ್ತಾಗಿದೆ. ಆ ವರದಿ ಪ್ರಕಾರ ಮುಂದಿನ 10 ದಿನದೊಳಗೆ ಖರೀದಿ ಒಪ್ಪಂದ ಕೂಡ ಆಗಬಹುದು ಎನ್ನಲಾಗಿದೆ.
ಭಾರತದ್ದೇ ವಿಶ್ವದರ್ಜೆಯ ಉಡುಗೆಯ ಬ್ರ್ಯಾಂಡ್ ಕಟ್ಟಿದ್ದಾರೆ ಆಲಿಯಾ
ಆಲಿಯಾ ಭಟ್ ಮೂರು ವರ್ಷಗಳ ಹಿಂದೆ ಎಡ್ ಎ ಮಮ್ಮಾ ಕಂಪನಿಯನ್ನು ಸ್ಥಾಪಿಸಿದ್ದರು. ಕಡಿಮೆ ಬೆಲೆಗೆ ವಿಶ್ವದರ್ಜೆಯ ಬಟ್ಟೆಯನ್ನು ಮಾರುವುದು ಅವರ ಗುರಿ. ಅದರಂತೆ ಎಡ್ ಎ ಮಮ್ಮಾ ಬ್ರ್ಯಾಂಡ್ ತಕ್ಕಮಟ್ಟಿಗೆ ಖ್ಯಾತಿ ಪಡೆದಿದೆ. ಇವರದ್ದೇ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಮಾರಲಾಗುತ್ತಿದೆ. ಹಾಗೆಯೇ, ಫಸ್ಟ್ ಕ್ರೈ, ಆಜಿಯೋ, ಮಿಂತ್ರಾ, ಅಮೇಜಾನ್, ಟಾಟಾ ಕ್ಲಿಕ್ ಮೊದಲಾದ ಇತರ ಪ್ಲಾಟ್ಫಾರ್ಮ್ಗಳಲ್ಲೂ ಎಡ್ ಎ ಮಮ್ಮ ಸೇಲ್ ಆಗುತ್ತಿದೆ. ಶಾಪರ್ಸ್ ಸ್ಟಾಪ್, ಲೈಫ್ಸ್ಟೈಲ್ ಮೊದಲಾದ ರೀಟೇಲ್ ಮಳಿಗೆಗಳಲ್ಲೂ ಅದು ಲಭ್ಯ ಇದೆ.
ಇದನ್ನೂ ಓದಿ: Inspirational Story: ಆರಂಭಿಕ ಬಂಡವಾಳ ಕೇವಲ 810 ರೂ, ಇವತ್ತು ಗೋವಿಂದ್ ಧೋಲಾಕಿಯಾ ಉದ್ದಿಮೆ ಮೌಲ್ಯ 4,800 ಕೋಟಿ ರೂ
ಆಲಿಯಾ ಭಟ್ 4ರಿಂದ 12 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆಂದು ಉಡುಗೆಗಳ ಮಾರಾಟ ಮೊದಲು ಆರಂಭಿಸಿದ್ದರು. ಈ ವರ್ಷ ಇನ್ನೂ ಚಿಕ್ಕ ವಯಸ್ಸಿನ ಶಿಶುಗಳಿಗೆ ವಿವಿಧ ಬಟ್ಟೆಗಳ ಮಾರಾಟ ಶುರು ಮಾಡಿದ್ದಾರೆ.
ಎಡ್ ಎ ಮಮ್ಮಾ ಹೆಸರಿನ ಹಿಂದೆ ಇಂಟರೆಸ್ಟಿಂಗ್ ಕಥೆ
ಆಲಿಯಾ ಭಟ್ ಅವರು ಎಡ್–ಎ–ಮಮ್ಮಾ ಬ್ರ್ಯಾಂಡ್ನ ಕಂಪನಿ ಸ್ಥಾಪಿಸಿದಾಗ ಬಹಳ ಮಂದಿಗೆ ಇದು ಯಾವ ಹೆಸರು ಎಂದು ಅಚ್ಚರಿ ಪಟ್ಟಿದ್ದುಂಟು. ಎಡ್ ಪದದ ಹುಟ್ಟಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗಿದ್ದವು. ಆದರೆ, ಆಲಿಯಾ ಭಟ್ ಅವರು ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಈ ಅನುಮಾನಗಳಿಗೆ ತೆರೆ ಎಳೆದಿದ್ದರು.
ಎಡ್ ಎಂಬುದು ಎಡ್ವರ್ಡ್ ಎಂಬ ಅವರ ಬೆಕ್ಕಿನ ಹೆಸರಂತೆ. ಆ ಬೆಕ್ಕಿಗೆ ತಾನು ತಾಯಿ ಸಮಾನಳಾಗಿದ್ದರಿಂದ ಮಮ್ಮಾ ಹಾಗು ಎಡ್ವರ್ಡ್ ಹೆಸರು ಸೇರಿಸಿ ಎಡ್–ಎ–ಮಮ್ಮಾ ಎಂದು ಹೆಸರಿಟ್ಟೆ ಎಂದಿದ್ದ ಆಲಿಯಾ ಭಟ್.
ರಿಲಾಯನ್ಸ್ಗೆ ಉಪಯೋಗವಾಗಲಿದೆ ಆಲಿಯಾ ಭಟ್ ಕಂಪನಿ
ರಿಲಾಯನ್ಸ್ ಬ್ರ್ಯಾಂಡ್ಸ್ ವಿವಿಧ ಸ್ತರಗಳಲ್ಲಿರುವ ಎಲ್ಲಾ ರೀತಿಯ ಇಂಟರ್ನ್ಯಾಷನಲ್ ಬ್ರ್ಯಾಂಡ್ಗಳ ಜೊತೆ ಸಹಭಾಗಿತ್ವ ಹೊಂದಿದೆ. ಅರ್ಮಾನಿ ಎಕ್ಸ್ಚೇಂಜ್, ಬರ್ಬೆರಿ, ಬ್ಯಾಲಿ, ಬೋಟೆಗಾ ವೆನೆಟಾ, ಕನಾಲಿ, ಡೀಸೆಲ್, ಡ್ಯೂನ್, ಹ್ಯಾಮ್ಲೀಸ್, ಫೆರಾಗಮೋ, ಜಿಎಎಸ್, ಜಿಯಾರ್ಜಿಯೋ ಅರ್ಮಾನಿ, ಜಿಮ್ಮಿ ಚೂ, ಕೇಟ್ ಸ್ಪೇಡ್, ಮಾರ್ಕ್ಸ್ ಅಂಡ್ ಸ್ಪೆನ್ಸರ್, ಮೈಕೇಲ್ ಕೋರ್ಸ್ ಮೊದಲಾದ ಬ್ರ್ಯಾಂಡ್ಗಳೊಂದಿಗೆ ರಿಲಾಯನ್ಸ್ ಪಾರ್ಟ್ನರ್ಶಿಪ್ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ