Inspirational Story: ಆರಂಭಿಕ ಬಂಡವಾಳ ಕೇವಲ 810 ರೂ, ಇವತ್ತು ಗೋವಿಂದ್ ಧೋಲಾಕಿಯಾ ಉದ್ದಿಮೆ ಮೌಲ್ಯ 4,800 ಕೋಟಿ ರೂ

Govind Dholakia of Gujarat: ಗುಜರಾತ್​ನ ಖ್ಯಾತ ಡೈಮಂಡ್ ವರ್ತಕ ಗೋವಿಂದ್ ಧೋಲಾಕಿಯಾ ಇವತ್ತು 4,800 ಕೋಟಿ ರೂ ಮೌಲ್ಯದ ಉದ್ದಿಮೆಪತಿ ಎನಿಸಿದರೂ ಅವರ ಆರಂಭಿಕ ಶ್ರಮ ನಿಜಕ್ಕೂ ಪ್ರಶಂಸನೀಯ.

Inspirational Story: ಆರಂಭಿಕ ಬಂಡವಾಳ ಕೇವಲ 810 ರೂ, ಇವತ್ತು ಗೋವಿಂದ್ ಧೋಲಾಕಿಯಾ ಉದ್ದಿಮೆ ಮೌಲ್ಯ 4,800 ಕೋಟಿ ರೂ
ಗೋವಿಂದ್ ಧೋಲಾಕಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2023 | 5:16 PM

ಯಶಸ್ಸಿನ ಮೂಲ ನಮ್ಮ ಮನಸ್ಸು ಎಂದು ಹೇಳುತ್ತಾರೆ. ಇಚ್ಛಾಶಕ್ತಿ (Willness) ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ನಮ್ಮ ಬಹುತೇಕ ಮಂದಿಯ ಬಹುತೇಕ ಕನಸುಗಳು ಇಚ್ಛಾಶಕ್ತಿ ಕೊರತೆಯಿಂದ ಮುರುಟಿಹೋಗುವುದಿದೆ. ಕೈಯಲ್ಲಿ ಬಿಡಿಗಾಸು ಇಲ್ಲದೇ, ಯಾರ ನೆರವೂ ಇಲ್ಲದೇ ಸ್ವಂತ ಪರಿಶ್ರಮದಿಂದ ದೊಡ್ಡ ಉದ್ಯಮಿಗಳಾದವರು ಅನೇಕರಿದ್ದಾರೆ. ಈ ರೀತಿ ಯಶಸ್ಸು ಕಂಡ ಉದ್ಯಮಿಗಳಲ್ಲಿ ಗುಜರಾತ್​ನ ಡೈಮಂಡ್ ರಾಜಾ ಅಥವಾ ಕಾಕಾ ಎಂದು ಖ್ಯಾತರಾಗಿರುವ ಗೋವಿಂದ್ ಧೋಲಾಕಿಯಾ (Govind Dholakia) ಒಬ್ಬರು. ಕೈಯಲ್ಲಿ 500 ರು ಇಟ್ಟುಕೊಂಡು, 410 ರೂ ಸಾಲ ಪಡೆದು ಇವರು ಶುರು ಮಾಡಿದ ವ್ಯವಹಾರ ಇವತ್ತು ಹೆಚ್ಚೂಕಡಿಮೆ 5,000 ಕೋಟಿ ರೂ ಮೌಲ್ಯದ ಉದ್ದಿಮೆಯಾಗಿ ಬೆಳೆದುಹೋಗಿದೆ.

ಕುಗ್ರಾಮದಲ್ಲಿ ಹುಟ್ಟಿ ಕಷ್ಟಪಟ್ಟು ಬೆಳೆದ ಗೋವಿಂದ್

ಗೋವಿಂದ್ ಧೋಲಾಕಿಯಾ ಹುಟ್ಟಿದ್ದು 1947 ನವೆಂಬರ್ 7ರಂದು. ಕೃಷಿಕರ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಆರು ಮಂದಿ ಅಣ್ಣಮ್ಮಂದಿರು, ಅಕ್ಕತಂಗಿಯರು. 17ರ ವಯಸ್ಸಿನಲ್ಲಿ ಕೆಲಕ್ಕೆ ಹೋಗುವ ಅನಿವಾರ್ಯತೆ ಬಂದಿದ್ದರಿಂದ ಸೂರತ್​ಗೆ ಹೋದವರು ಗೋವಿಂದ್. ಸೂರತ್ ಎಂದರೆ ಹೇಳಿಕೇಳಿ ಡೈಮಂಡ್ ಸಿಟಿ. ಗೋವಿಂದ್ ಸೂರತ್​ನಲ್ಲಿ ಡೈಮಂಡ್ ಕಟ್ಟರ್ ಮತ್ತು ಪಾಲಿಶರ್ ಕೆಲಸಕ್ಕೆ ಸೇರುತ್ತಾರೆ.

ಇದನ್ನೂ ಓದಿInspiring: ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದ ವಿಜಯ್ ಇವತ್ತು ಸಾವಿರ ಕೋಟಿ ರೂ ರಾಯಲ್ ಓಕ್ ಒಡೆಯ

ಡೈಮಂಡ್ ಬ್ಯುಸಿನೆಸ್​ನಲ್ಲಿ ಕಟ್ಟರ್ ಮತ್ತು ಪಾಲಿಶರ್​ಗಳಿಗೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಗೋವಿಂದ್ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಸ್ವಂತವಾಗಿ ಡೈಮಂಡ್ ಕಟ್ಟರೆ ಕೆಲಸ ಆರಂಬಿಸುತ್ತಾರೆ. ಚಿಕ್ಕದೊಂದು ರೂಮು ಬಾಡಿಗೆಗೆ ಪಡೆಯುತ್ತಾರೆ. ಎಸ್​ಆರ್​ಕೆ (ಶ್ರೀ ರಾಮ ಕೃಷ್ಣ) ಎಕ್ಸ್​ಪೋರ್ಟ್ ಎಂಬ ಕಂಪನಿ ಸ್ಥಾಪಿಸುತ್ತಾರೆ. ಆದರೆ, ಇವರಿಗೆ ಶುಭ ಕಾಲ ಬರಲು ಇನ್ನಷ್ಟು ದಿನ ಕಾಯಬೇಕಾಯಿತು.

ಡೈಮಂಡ್ ಪಾಲಿಶ್​ನಲ್ಲಿ ಗಮನ ಸೆಳೆದ ಧೋಲಾಕಿಯಾ ಮತ್ತು ಸ್ನೇಹಿತರು

ಡೈಮಂಡ್ ಕಟ್ಟಿಂಗ್ ಮತ್ತು ಪಾಲಿಶ್ ಕಾರ್ಯದಲ್ಲಿ ಬಹಳ ಮಂದಿ ತೊಡಗಿದ್ದರು. ಆದ್ದರಿಂದ ಗೋವಿಂದ್ ಮತ್ತು ಸ್ನೇಹಿತರಿಗೆ ತೀರಾ ಹೆಚ್ಚಿನ ಬ್ಯುಸಿನೆಸ್ ನಿರೀಕ್ಷೆ ಇರಲಿಲ್ಲ. ಕಚ್ಛಾ ಡೈಮಂಡ್ ಅಥವಾ ರಫ್ ಡೈಮಂಡ್ ಅನ್ನು ತಂದು ಅದನ್ನು ಪಾಲಿಶ್ ಮಾಡಬೇಕು. ಹೀಗೆ ಮಾಡಿದ ಬಳಿಕ ಬರುವ ವಜ್ರವು ಮೂಲ ಕಚ್ಛಾ ಡೈಮಂಡ್​ನ ಶೇ. 28ಕ್ಕಿಂತ ಹೆಚ್ಚು ತೂಕವಿರಬೇಕು ಎಂಬುದು ಆಗಿನ ಮಾನದಂಡ ಇದ್ದದ್ದು. ಆದರೆ, ಗೋವಿಂದ್ ಧೋಲಾಕಿಯಾ ಮತ್ತವರ ಸ್ನೇಹಿತರು ಮಾಡಿದ ಪಾಲಿಶ್​ನಿಂದ ಶೇ. 34ರಷ್ಟು ತೂಕದ ವಜ್ರ ತಯಾರಾಗುತ್ತಿತ್ತು. ಇದು ಆಗಿನ ಸಂದರ್ಭಕ್ಕೆ ಹೊಸ ಕೌಶಲ್ಯ. ತಮ್ಮ ಪ್ರತಿಭೆ ಮತ್ತು ಶಕ್ತಿ ಅರಿತ ಗೋವಿಂದ್ ಧೋಲಾಕಿಯಾಗೆ ತಾನೇ ನೇರವಾಗಿ ಕಚ್ಛಾ ವಜ್ರಗಳನ್ನು ಖರೀದಿಸಿ ವಜ್ರ ತಯಾರಿಕೆಗೆ ಇಳಿಯುವ ಐಡಿಯಾ ಬರುತ್ತದೆ.

ಇದನ್ನೂ ಓದಿSuccess Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ

500 ರೂ ಇಟ್ಟುಕೊಂಡು ರಫ್ ಡೈಮಂಡ್​ಗೆ ಅಲೆದಾಟ

ವಜ್ರ ತಯಾರಿಕೆಗೆ ಬೇಕಾದ ರಫ್ ಡೈಮಂಡ್ ಅನ್ನು ಖರೀದಿಸಲು ವ್ಯಾಪಾರಿಯೊಬ್ಬರ ಬಳಿ ಹೋಗುತ್ತಾರೆ. ಒಂದು ಕ್ಯಾರಟ್ ಡೈಮಂಡ್​ಗೆ 91 ರೂ ಹೇಳುತ್ತಾರೆ. ಆದರೆ, ಕನಿಷ್ಠ 10 ಕ್ಯಾರಟ್ ವಜ್ರ ಖರೀದಿಸಬೇಕು ಎನ್ನುತ್ತಾರೆ. ಜೊತೆಗೆ 10 ರೂ ಕಮಿಷನ್. ಒಟ್ಟು 910 ರೂ ಬೇಕಾಗುತ್ತದೆ. ಸೈಕಲ್ ತುಳಿದುಕೊಂಡು ಹೋಗಿದ್ದ ಧೋಲಾಕಿಯಾ ಬಳಿ ಇದ್ದದ್ದು ಕೇವಲ 500 ರೂ ಮಾತ್ರವೇ.

ಅವರ ಅದೃಷ್ಟಕ್ಕೆ ಅ ವ್ಯಾಪಾರಿಯು ಉಳಿದ ಹಣವನ್ನು ಮನೆಗೆ ಹೋಗಿ ತೆಗೆದುಕೊಂಡು ಬಂದು ಕೊಡುವಂತೆ ಹೇಳಿ ರಫ್ ಡೈಮಂಡ್ ಕೊಟ್ಟು ಕಳುಹಿಸುತ್ತಾರೆ. ಗೋವಿಂದ್ ಕಚ್ಛಾ ವಜ್ರದೊಂದಿಗೆ ಮನೆಗೆ ಹೋಗಿ ತನ್ನ ಇಬ್ಬರು ಸ್ನೇಹಿತರಿಂದ 410 ರೂ ಸಾಲ ಮಾಡಿ ಆ ವ್ಯಾಪಾರಿಗೆ ಕೊಡುತ್ತಾರೆ. ಬಳಿಕ ಅವರು ರಫ್ ಡೈಮಂಡ್​ಗೆ ಪಾಲಿಶ್ ಮಾಡಿ, 10 ಪರ್ಸೆಂಟ್ ಲಾಭಕ್ಕೆ ಮಾರುತ್ತಾರೆ. ಅಲ್ಲಿಂದ ಗೋವಿಂದ್ ಧೋಲಾಕಿಯ ಮತ್ತವರ ಸ್ನೇಹಿತರ ತಂಡದ ವಜ್ರ ವ್ಯಾಪಾರ ಬೆಳೆಯುತ್ತಾ ಹೋಗುತ್ತದೆ. ಇವತ್ತು ಅವರ ಉದ್ದಿಮೆಯ ಮೌಲ್ಯ 4,800 ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ