ನವದೆಹಲಿ, ನವೆಂಬರ್ 12: ಇಸ್ರೇಲ್ ಯುದ್ಧ, ಅಮೆರಿಕದ ಅಧಿಕ ಬಡ್ಡಿಮಟ್ಟ ಇತ್ಯಾದಿ ಕಾರಣಗಳಿಂದ ಫಾರೀನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು (FPI) ಭಾರತದ ಈಕ್ವಿಟಿಯಿಂದ ಹೂಡಿಕೆ ಹಿಂಪಡೆಯುವುದು ಮುಂದುವರಿದಿದೆ. ನವೆಂಬರ್ನಲ್ಲಿ ಈವರೆಗೂ 5,800 ಕೋಟಿ ರೂನಷ್ಟು ಹೂಡಿಕೆಗಳು ಹೊರಹೋಗಿವೆ. ಆದರೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ಗೆ ಹೋಲಿಸಿದರೆ ಎಫ್ಪಿಐಗಳು ಕಡಿಮೆ ಹೂಡಿಕೆಗಳನ್ನು ಹಿಂಪಡೆದಿವೆ. ಸೆಪ್ಟೆಂಬರ್ನಲ್ಲಿ 14,767 ಕೋಟಿ ರೂ ಮೊತ್ತದ ಎಫ್ಪಿಐಗಳು ಹೊರಹೋಗಿವೆ. ಅಕ್ಟೋಬರ್ನಲ್ಲಿ 24,548 ಕೋಟಿ ರೂನಷ್ಟು ಹೂಡಿಕೆಗಳು ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಹೊರಬಿದ್ದಿದ್ದವು. ಈಗ ನವೆಂಬರ್ನ ಮೊದಲ ಹತ್ತು ದಿನದಲ್ಲೇ 5,800 ಕೋಟಿ ರೂನಷ್ಟು ಎಫ್ಪಿಐ ಹೂಡಿಕೆಗಳು ಹೊರಹೋಗಿವೆ. ತಜ್ಞರ ಪ್ರಕಾರ, ಈ ಟ್ರೆಂಡ್ ಹೀಗೇ ಮುಂದುವರಿಯುವ ಸಾಧ್ಯತೆ ಕಡಿಮೆ ಇದೆ.
ಒಟ್ಟಾರೆ, ಎಫ್ಪಿಐ ಹೊರಹೋಗಲು ಶುರು ಮಾಡಿದ ಸೆಪ್ಟೆಂಬರ್ಗಿಂತ ಮುಂಚಿನ ಆರು ತಿಂಗಳು ಈಕ್ವಿಟಿ ಮಾರುಕಟ್ಟೆಗೆ ಒಳ್ಳೆಯ ವಿದೇಶೀ ಬಂಡವಾಳ ಹರಿದುಬಂದಿತ್ತು. ಮಾರ್ಚ್ನಿಂದ ಆಗಸ್ಟ್ವರೆಗೆ ಒಟ್ಟು 1.74 ಲಕ್ಷ ಕೋಟಿ ರೂನಷ್ಟು ಎಫ್ಪಿಐ ಹೂಡಿಕೆಗಳು ಭಾರತದ ಷೇರುಪೇಟೆಗೆ ಬಂದಿದ್ದವು.
ನವೆಂಬರ್ 1ರಿಂದ 10ರವರೆಗೆ ಎಫ್ಪಿಐಗಳು 5,805 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಮುಂದುವರಿಯುವುದು ಅನುಮಾನ. ಅಕ್ಟೋಬರ್ನಲ್ಲಿ ಮಾರಲಾಗಿದ್ದ 24,548 ಕೋಟಿ ರೂಗೆ ಹೋಲಿಸಿದರೆ ನವೆಂಬರ್ನಲ್ಲಿ ಹೂಡಿಕೆನಷ್ಟ 15,000 ಕೋಟಿ ರೂ ದಾಟುವುದು ಕಷ್ಟ.
ಇದನ್ನೂ ಓದಿ: ಭಾರತದ ವಿದೇಶ ವಿನಿಮಯ ಮೀಸಲು ನಿಧಿ 591 ಬಿಲಿಯನ್ ಡಾಲರ್ಗೆ ಏರಿಕೆ
ಇದೇ ವೇಳೆ, ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಭಾರತೀಯ ಬಾಂಡ್ ಮಾರುಕಟ್ಟೆ ಮೇಲೆ ಆಸಕ್ತಿ ತೋರುವುದು ಹೆಚ್ಚಿದೆ. ಈ ವರ್ಷ ಎಫ್ಪಿಐಗಳು ಭಾರತೀಯ ಷೇರುಪೇಟೆಯಲ್ಲಿ ಮಾಡಿರುವ ಹೂಡಿಕೆ 90,161 ಕೋಟಿ ರೂ ಆಗಿದೆ. ಡೆಟ್ ಮಾರುಕಟ್ಟೆ ಅಥವಾ ಬಾಂಡ್ ಮಾರುಕಟ್ಟೆಯಲ್ಲಿ ಆಗಿರುವ ಹೂಡಿಕೆ 41,554 ಕೋಟಿ ರೂ. ಅದರಲ್ಲಿ ಸ್ವಲ್ಪ ಭಾಗವನ್ನು ಎಫ್ಪಿಐಗಳು ಮಾರಿವೆ. ಇಸ್ರೇಲ್ ಯುದ್ಧದಿಂದ ಉಂಟಾಗಿರುವ ಅನಿಶ್ಚಿತ ಸ್ಥಿತಿ ಮತ್ತು ಅಮೆರಿಕದ ಪ್ರಬಲ ಡಾಲರ್ ಸ್ಥಿತಿ ಇವು ಭಾರತದಿಂದ ಸ್ವಲ್ಪ ಬಂಡವಾಳ ಹೊರಹೋಗಲು ಕಾರಣವೆನ್ನುತ್ತಾರೆ ತಜ್ಞರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ