ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ
FPIs take away investments of over Rs 1 lakh crore in March in Indian equities: 2026ರ ಮಾರ್ಚ್ ತಿಂಗಳಲ್ಲಿ ಭಾರತೀಯ ಈಕ್ವಿಟಿಗಳಿಂದ ಕಂಡ ಹೊರಹರಿವು ಒಂದು ಲಕ್ಷ ಕೋಟಿ ರೂ ದಾಟಿದೆ. ಮಾರ್ಚ್ 1ರಿಂದ 27ರವರೆಗೆ ಫಾರೀನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು 1,13,380 ಕೋಟಿ ರೂ ಮೊತ್ತದ ಹೂಡಿಕೆಗಳನ್ನು ಹಿಂಪಡೆದುಕೊಂಡಿವೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್ಗಳಿದ್ದು ಹೂಡಿಕೆಗಳು ಮತ್ತಷ್ಟು ಹೊರಹೋಗಬಹುದು.

ನವದೆಹಲಿ, ಮಾರ್ಚ್ 29: ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್ನಷ್ಟು ಎಫ್ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ.
ಯಾವುದೇ ಒಂದು ತಿಂಗಳಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೇ ಮೊದಲು. 2024ರ ಅಕ್ಟೋಬರ್ ತಿಂಗಳಲ್ಲಿ 94,017 ಕೋಟಿ ರೂ ಮೊತ್ತದಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿದ್ದವು. ಅದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಹೊರಹರಿವಿನ ಮೈಲಿಗಲ್ಲು ಸೃಷ್ಟಿಯಾಗಿದೆ.
ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು
ಮಾರ್ಚ್ ತಿಂಗಳಲ್ಲಿ ಎಫ್ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರ್ಕೆಟ್ನಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ ಎನ್ನಲಾಗಿದೆ.
2026ರಲ್ಲಿ, ಅಂದರೆ ಜನವರಿಯಿಂದ ಈಚೆಗೆ ಎಫ್ಪಿಐಗಳಿಂದ ಆಗಿರುವ ಹೂಡಿಕೆ ನಿರ್ಗಮನ ಒಟ್ಟು 1.27 ಲಕ್ಷ ಕೋಟಿ ರೂ. ಇದರಲ್ಲಿ ಮಾರ್ಚ್ ತಿಂಗಳದ್ದೇ ಸಿಂಹಪಾಲು. ಫೆಬ್ರುವರಿ ತಿಂಗಳಲ್ಲಿ ವಿಭಿನ್ನ ಟ್ರೆಂಡ್ ಇತ್ತು. ಎಫ್ಪಿಐಗಳು 22,615 ಕೋಟಿ ರೂನಷ್ಟು ಮೊತ್ತದ ಭಾರತೀಯ ಈಕ್ವಿಟಿಗಳನ್ನು ಖರೀದಿ ಮಾಡಿದ್ದವು. ಕಳೆದ 17 ತಿಂಗಳಲ್ಲೇ ಅತಿಹೆಚ್ಚು ಮಾಸಿಕ ಒಳಹರಿವು ಅದಾಗಿತ್ತು.
ಇದನ್ನೂ ಓದಿ: ರಷ್ಯನ್ ಎಲ್ಎನ್ಜಿಯನ್ನು ಖರೀದಿಸಲಿರುವ ಭಾರತ; ಎಲ್ಪಿಜಿ, ಪಿಎನ್ಜಿ, ಎಲ್ಎನ್ಜಿಗಿರುವ ವ್ಯತ್ಯಾಸಗಳೇನು?
ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಹಾಗೆಯೇ, ಕಳೆದ 18 ತಿಂಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ದುರ್ಬಲ ಸಾಧನೆ ತೋರಿದೆ. ಹೀಗಾಗಿ, ಎಫ್ಪಿಐಗಳು ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಕಡಿಮೆ ಮಾಡಿರಬಹುದು. ಇದರ ಜೊತೆಗೆ, ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಿರುವುದು ಮತ್ತು ಜಾಗತಿಕವಾಗಿ ಹಣಕಾಸು ಸ್ಥಿತಿ ಸಂಕುಚಿತಗೊಂಡಿರುವುದು ಕೂಡ ಎಫ್ಪಿಐಗಳ ಹೊರಹರಿವಿಗೆ ಕಾರಣವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
