CNG Price Hike: 1 ಕೆಜಿ ಸಿಎನ್​ಜಿಗೆ 6, ಒಂದು ಯೂನಿಟ್ ಅಡುಗೆ ಅನಿಲಕ್ಕೆ 4 ರೂಪಾಯಿ ಹೆಚ್ಚಳ

ಈ ಬೆಲೆಏರಿಕೆಯೊಂದಿಗೆ ಸಿಎನ್​ಜಿ ಧಾರಣೆಯು ಮುಂಬೈ ಮಹಾನಗರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 86 ಮುಟ್ಟಿದೆ.

CNG Price Hike: 1 ಕೆಜಿ ಸಿಎನ್​ಜಿಗೆ 6, ಒಂದು ಯೂನಿಟ್ ಅಡುಗೆ ಅನಿಲಕ್ಕೆ 4 ರೂಪಾಯಿ ಹೆಚ್ಚಳ
ಸಿಎನ್​ಜಿ
Edited By:

Updated on: Aug 03, 2022 | 9:57 AM

ಮುಂಬೈ: ವಾಹನಗಳಿಗೆ ಇಂಧನವಾಗಿ ಬಳಕೆಯಾಗುವ ಸಿಎನ್​ಜಿ (Compressed Natural Gas – CNG) ಬೆಲೆ ಬುಧವಾರದಿಂದ (ಆಗಸ್ಟ್​ 3) ಒಂದು ಕೆಜಿಗೆ ₹ 6 ಹೆಚ್ಚಾಗಿದೆ. ಈ ಬೆಲೆಏರಿಕೆಯೊಂದಿಗೆ ಮುಂಬೈ ಮಹಾನಗರದಲ್ಲಿ (Mumbai Metropolitan Region – MMR) ಸಿಎನ್​ಜಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 86 ಮುಟ್ಟಿದೆ. ಪೈಪ್ ಮೂಲಕ ಮನೆಗಳಿಗೆ ಸರಬರಾಜಾಗುವ ಅಡುಗೆ ಅನಿಲದ ಬೆಲೆಯನ್ನು ಒಂದು ಯೂನಿಟ್​ಗೆ ₹ 4 ಹೆಚ್ಚಿಸಲಾಗಿದೆ. ಈ ಬೆಲೆಏರಿಕೆಯೊಂದಿಗೆ ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಅಡುಗೆ ಅನಿಲದ ಬೆಲೆಯು ಒಂದು ಯೂನಿಟ್​ಗೆ ₹ 52.50 ಆಗಿದೆ. ಅಡುಗೆ ಅನಿಲ ಬೆಲೆಏರಿಕೆಯು ಮುಂಬೈನ 19 ಲಕ್ಷ ಮನೆಗಳ ಮೇಲೆ ಪರಿಣಾಮ ಬೀರಲಿದೆ.

ಕಳೆದ 13 ತಿಂಗಳಲ್ಲಿ ಇದು 11ನೇ ಬೆಲೆ ಏರಿಕೆಯಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಒಂದು ಕೆಜಿ ಸಿಎನ್​ಜಿ ಧಾರಣೆಯು ₹ 36ರಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬೆಲೆ ಏರಿಕೆ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುಂಬೈನಲ್ಲಿ ಬೆಲೆ ಏರಿಕೆಯಾದ ನಂತರ ಬೆಂಗಳೂರಿನಲ್ಲಿಯೇ ಬೆಲೆ ಹೆಚ್ಚಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ನಗರದಲ್ಲಿ ಪ್ರಸ್ತುತ ಒಂದು ಕೆಜಿ ಸಿಎನ್​ಜಿ ಬೆಲೆಯು ₹ 88 ಇದೆ.

ಸಿಎನ್​ಜಿ ಬೆಲೆಏರಿಕೆ ಹಿನ್ನೆಲೆಯಲ್ಲಿ ಮುಂಬೈ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘವು ಬಾಡಿಗೆ ಹೆಚ್ಚಿಸಲು ಮುಂದಾಗಿದೆ. ‘ಬಾಡಿಗೆ ದರ ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಷ್ಕರ ಮಾಡಬೇಕಾಗುತ್ತದೆ’ ಎಂದು ಸಂಘದ ನಅಧ್ಯಕ್ಷ ಎ.ಎಲ್.ಖದ್ರೊಸ್ ಎಚ್ಚರಿಸಿದ್ದಾರೆ. ‘ಇಂದಿನ ದರ ಏರಿಕೆಯು ನಮ್ಮನ್ನು ಕಷ್ಟಕ್ಕೆ ತಳ್ಳಿದೆ. ನಗರ ವ್ಯಾಪ್ತಿಯಲ್ಲಿ ಮಿನಿಮಮ್ ಟ್ಯಾಕ್ಸಿ ದರವನ್ನು ₹ 35ಕ್ಕೆ ನಿಗದಿಪಡಿಸಬೇಕು’ ಎಂದು ಸಂಘವು ಕೋರಿದೆ.

ಮುಂಬೈ ನಗರ ಸಾರಿಗೆ ‘BEST’ (ಬೆಸ್ಟ್) ಸುಮಾರು 2,100 ಸಿಎನ್​ಜಿ ಚಾಲಿತ ಬಸ್​ಗಳನ್ನು ಬಳಸುತ್ತಿದೆ. ಸಿಟಿ ಬಸ್​ ಟಿಕೆಟ್ ಬೆಲೆಯನ್ನು 5 ಕಿಮೀಗೆ ₹ 5ಕ್ಕೆ ನಿಗದಿಪಡಿಸಲಾಗಿದೆ. ಸಿಎನ್​ಜಿ ಬೆಲೆಏರಿಕೆಯ ನಂತರ ನಗರ ಸಾರಿಗೆ ದರ ಹೆಚ್ಚಳದ ಬಗ್ಗೆಯೂ ಒತ್ತಾಯ ಕೇಳಿ ಬಂದಿದೆ. ಮಂಬೈ ನಗರದಲ್ಲಿ 8,000 ಶಾಲಾ ಬಸ್​ಗಳು ಕಾರ್ಯಾಚರಣೆ ಮಾಡುತ್ತಿವೆ. ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಾಲಾ ಬಸ್​ ಮಾಲೀಕರು ದರ ಪರಿಷ್ಕರಣೆಗೆ ಮುಂದಾಗುವ ನಿರೀಕ್ಷೆಯಿದೆ.

ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಗ್ಯಾಸ್ ಲಿಮಿಟೆಡ್ (Mahanagar Gas Limited – MGL), ‘ದೇಶೀಯ ಬಳಕೆಗಾಗಿ ಹಂಚಿಕೆಯಾಗಿರುವ ಅನಿಲದ ಪ್ರಮಾಣ ಕಡಿಮೆಯಾಗಿರುವುದರಿಂದ ಇತರೆಡೆಗಳಿಂದ ಅನಿಲ ಆಮದು ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಸಿಎನ್​ಜಿ ಬಳಕೆ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗಿದೆ. ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಾಗಿರುವುದರಿಂದ ಕಂಪನಿಯ ಕಾರ್ಯಾಚರಣೆ ವೆಚ್ಚ ದುಬಾರಿಯಾಗಿದೆ. ಇದನ್ನು ಸರಿದೂಗಿಸಲು ಸಿಎನ್​ಜಿ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಬೇಕಾಗಿದೆ’ ಎಂದು ವಿವರಿಸಿದೆ.

Published On - 9:38 am, Wed, 3 August 22