Sri Lanka Financial Crisis: ಇಂಧನ ಕೊರತೆ ಕಾರಣಕ್ಕೆ ಶಾಲೆ, ಕಚೇರಿಗಳಿಗೆ ರಜಾ ಘೋಷಿಸಿದ ಶ್ರೀಲಂಕಾ ಸರ್ಕಾರ

| Updated By: Srinivas Mata

Updated on: Jun 18, 2022 | 4:43 PM

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ. ಈ ಕಾರಣಕ್ಕೆ ಅಲ್ಲಿ ಇಂಧನಕ್ಕೂ ಕೊರತೆ ಆಗಿದ್ದು, ಶುಕ್ರವಾರದಂದು ವಾಹನಗಳ ಸಂಚಾರವನ್ನು ನಿಯಂತ್ರಿಸುವ ಉದ್ದೇಶವಿಟ್ಟುಕೊಂಡು ಅಲ್ಲಿನ ಸರ್ಕಾರವು ಶಾಲೆ, ಸಾರ್ವಜನಿಕ ಕಚೇರಿಗಳಿಗೆ ರಜಾ ಘೋಷಿಸಿತ್ತು.

Sri Lanka Financial Crisis: ಇಂಧನ ಕೊರತೆ ಕಾರಣಕ್ಕೆ ಶಾಲೆ, ಕಚೇರಿಗಳಿಗೆ ರಜಾ ಘೋಷಿಸಿದ ಶ್ರೀಲಂಕಾ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ (Sri Lanka) ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದೆ. ಈವರೆಗಿನ ಅತ್ಯಂತ ಭಯಾನಕ ಆರ್ಥಿಕ ಬಿಕ್ಕಟ್ಟನ್ನು ಈ ದೇಶ ಎದುರಿಸುತ್ತಿದೆ. ಹೊಸದಾಗಿ ಪೂರೈಕೆ ಬರುವ ಅಲ್ಪ ಸಾಧ್ಯತೆಯೊಂದಿಗೆ ಸಾರಿಗೆಗೆ ಇಂಧನದ ಕೊರತೆ ಎದುರಾಗಿದೆ. ವಾಹನಗಳ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಶುಕ್ರವಾರದಂದು ಶ್ರೀಲಂಕಾದಲ್ಲಿ ಸಾರ್ವಜನಿಕ ಕಚೇರಿಗಳು ಮತ್ತು ಶಾಲೆಗಳಿಗೆ ಸರ್ಕಾರವು ರಜಾ ಘೋಷಿಸಿತ್ತು. ಆ ಕಾರಣಕ್ಕೆ ರಾಜಧಾನಿ ಕೊಲಂಬೋದಲ್ಲಿ ರಸ್ತೆಗಳು ಭಣಗುಡುತ್ತಿದ್ದವು. ಪೆಟ್ರೋಲ್​ ಬಂಕ್​ಗಳಲ್ಲಿ ಇಂಧನ ಪೂರೈಕೆ ಕಡಿಮೆ ಇರುವುದರಿಂದ ಚಾಲಕರು ಕಿಲೋಮೀಟರ್​ಗಟ್ಟಲೆ ಸರತಿಯಲ್ಲಿ ನಿಂತಿರುವುದು ಕಂಡುಬಂತು. ವಿದ್ಯುತ್ ಹಾಗೂ ಇಂಧನ ಸಚಿವರಾದ ಕಾಂಚನ ವಿಜೆ​ಸೇಖರ ಗುರುವಾರದಂದು ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಹೊಸದಾಗಿ ದಾಸ್ತಾನಿಗೆ ಟೆಂಡರ್ ಬೇಡಿಕೆ ಬಂದಿಲ್ಲ. ಏಕೆಂದರೆ ಪೂರೈಕೆದಾರರು ಬಾಕಿ ಪಾವತಿ ಉಳಿಸಿದ್ದಾರೆ.

ದಿನಪತ್ರಿಕೆಯಲ್ಲಿ ಶನಿವಾರ ಕಂಡುಬಂದಿರುವ ಪ್ರಕಾರ, ಸರ್ಕಾರಿ ಉದ್ಯೋಗಿಗಳು ಎರಡು ವಾರಗಳ ಕಾಲ ವರ್ಕ್​​ ಫ್ರಮ್ ಹೋಮ್ ಮಾಡುವಂತೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ರಷ್ಯಾ ಸೇರಿದಂತೆ ಇತರ ದೇಶಗಳು ಮತ್ತು ಕಂಪೆನಿಗಳಿಗೆ ಶ್ರೀಲಂಕಾಗೆ ತೈಲ ಪೂರೈಕೆ ಮಾಡಲು ಆಗುತ್ತಿಲ್ಲ. ಭಾರತದಿಂದ ಹೊಸದಾಗಿ 500 ಮಿಲಿಯನ್ ಯುಎಸ್​ಡಿ ಕ್ರೆಡಿಟ್ ಲೈನ್ ತೈಲ ಆಮದಿಗೆ ಭಾರತದಿಂದ ಅನುಮತಿ ಸಿಗುವ ಭರವಸೆ ಇದೆ ಎಂದು ವಿಜೆಸೇಖರ ಹೇಳಿದ್ದಾರೆ.

ಶ್ರೀಲಂಕಾದ ಆರ್ಥಿಕ ಕುಸಿತವು ಅದರ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಅತ್ಯಂತ ಭೀಕರವಾಗಿದ್ದು, ಕಳೆದ ಕೆಲವು ತಿಂಗಳಿಂದ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರನ್ನು ಸರ್ಕಾರದಿಂದ ಹೊರಹಾಕಲು ದ್ವೀಪದಾದ್ಯಂತ ಪ್ರತಿಭಟನೆಗಳು ಬುಗಿಲೆದ್ದವು. ಇಂಧನದಿಂದ ಔಷಧದವರೆಗೆ ಎಲ್ಲದರ ತೀವ್ರ ಕೊರತೆ, ಸುಮಾರು ಶೇ 40ರಷ್ಟು ಹಣದುಬ್ಬರ, 13 ಗಂಟೆಗಳಷ್ಟು ನಿತ್ಯದ ವಿದ್ಯುತ್ ಕಡಿತ ಮತ್ತು ಐತಿಹಾಸಿಕ ಸಾಲದ ಡೀಫಾಲ್ಟ್‌ಗೆ ಕಾರಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕುಟುಂಬವನ್ನು ದೂಷಿಸಲಾಗಿದೆ.

ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಕಾರ, ಮುಂದಿನ ಆರು ತಿಂಗಳ ಕಾಲ ಏರಿಳಿತಕ್ಕಾಗಿ ಈ ದೇಶಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳಿಂದ ಸುಮಾರು 6 ಶತಕೋಟಿ ಅಮೆರಿಕನ್ ಡಾಲರ್ ನೆರವು ಬೇಕಾಗುತ್ತದೆ. ಸ್ಥಳೀಯ ಅಧಿಕಾರಿಗಳು ಇತರ ಹೊಸ ಮೂಲಗಳ ನಿಧಿಯನ್ನು ಪಡೆಯುವ ಸಲುವಾಗಿ IMFನೊಂದಿಗೆ ಬೇಲ್ಔಟ್ ಮಾತುಕತೆಗಳನ್ನು ಶೀಘ್ರವಾಗಿ ಟ್ರ್ಯಾಕ್ ಮಾಡಲು ನೋಡುತ್ತಿದ್ದಾರೆ. ಶ್ರೀಲಂಕಾದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ ಸಂಕುಚಿತಗೊಂಡಿರಬಹುದು. ಸಾರ್ವಜನಿಕ ಪ್ರತಿಭಟನೆಗಳು, ರಾಜಕೀಯ ಅಸ್ಥಿರತೆ, ಹೆಚ್ಚಿನ ಸರಕುಗಳ ಬೆಲೆಗಳು ಮತ್ತು ಪೂರೈಕೆ-ಸರಪಳಿ ಸಮಸ್ಯೆಗಳಿಂದ ತತ್ತರಿಸಿದೆ. ಬ್ಲೂಮ್‌ಬರ್ಗ್ ಪ್ರಕಾರ, ಈ ವರ್ಷ ಆರ್ಥಿಕ ಹಿಂಜರಿತವನ್ನು ತಪ್ಪಿಸಲಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Sri Lanka Crisis ಪೆಟ್ರೋಲ್ ಖರೀದಿಸಲು ಹಣವಿಲ್ಲ, ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ ಎಂದು ನಾಗರಿಕರಲ್ಲಿ ಮನವಿ ಮಾಡಿದ ಶ್ರೀಲಂಕಾ ಸರ್ಕಾರ