ಬೆಂಗಳೂರು: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ ಜಿ20 ಸಮಾವೇಶದ (G20 Summit) ಭಾಗವಾಗಿ ಬೆಂಗಳೂರಿನಲ್ಲಿ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪಿನ ಸಭೆ (TIWG- Trade and Investment Working Group) 3 ದಿನಗಳ ಕಾಲ ನಡೆಯಲಿದೆ. ಮೇ 23ರಿಂದ 25ರವರೆಗೂ ನಡೆಯುವ ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳಿಂದ ನೂರಕ್ಕೂ ಹೆಚ್ಚು ಮಂದಿ ನಿಯೋಗಗಳು ಪಾಲ್ಗೊಳ್ಳಲಿವೆ. ಜಿ20 ಸದಸ್ಯ ರಾಷ್ಟ್ರಗಳ ಜೊತೆಗೆ ಆಹ್ವಾನಿತ ದೇಶಗಳು, ಪ್ರಾದೇಶಿಕ ಗುಂಪುಗಳು, ಅಂತಾರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳೂ ಈ ಪಟ್ಟಿಯಲ್ಲಿವೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಅನುಪ್ರಿಯ ಪಟೇಲ್ ಮೇ 24ರಂದು ಈ ಸಭೆಯ ಉದ್ಘಾಟನೆ ಮಾಡಲಿದ್ದಾರೆ.
ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಎರಡನೇ ಟಿಐಡಬ್ಲ್ಯೂಜಿ ಸಭೆ ಇದಾಗಿದೆ. ಮೇ 23, 24 ಮತ್ತು 25ರಂದು ವಿವಿಧ ಕಾರ್ಯಕ್ರಮಗಳು ಆಯೋಜನೆ ಆಗಿವೆ. ಅದರ ವಿವರ ಇಲ್ಲಿದೆ:
ಮೇ 23: ವ್ಯಾಪಾರ ಮತ್ತು ತಂತ್ರಜ್ಞಾನದ ಬಗ್ಗೆ ಒಂದು ಸೆಮಿನಾರ್ ನಡೆಯುತ್ತದೆ. ಇದರಲ್ಲಿ ಎರಡು ಪ್ಯಾನಲ್ ಡಿಸ್ಕಷನ್ಸ್ ಇರಲಿದೆ. ವ್ಯಾಪಾರಕ್ಕೆ ತಿರುವು ತರುವ ತಂತ್ರಜ್ಞಾನ ಹಾಗೂ ಸಮಗ್ರ ಅಭಿವೃದ್ದಿಗೆ ತಂತ್ರಜ್ಞಾನದ ಪಾತ್ರ ಇತ್ಯಾದಿ ವಿಚಾರಗಳನ್ನಿಟ್ಟುಕೊಂಡು ಚರ್ಚೆಗಳು ನಡೆಯುತ್ತವೆ. ಇದಾದ ಬಳಿಕ ಜಿ20 ಪ್ರತಿನಿಧಿಗಳಿಗೆ ಬೆಂಗಳೂರಿನ ದರ್ಶನ ಮಾಡಿಸಲಾಗುತ್ತದೆ. ಬಳಿಕ, ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.
ಇದನ್ನೂ ಓದಿ: TCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು
ಮೇ 24: ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯೂಟಿಒ) ಸುಧಾರಣೆ ವಿಚಾರದ ಬಗ್ಗೆ ಚರ್ಚೆ ಆಗಲಿದೆ. ಡಬ್ಲ್ಯೂಟಿಒದ ಕಾರ್ಯನಿರ್ವಹಣೆಯಲ್ಲಿ ಮುಕ್ತತೆ ಹಾಗೂ ಪಾರದರ್ಶಕತೆ ತರುವ ಅಗತ್ಯತೆಯನ್ನು ಗುರುತಿಸುವ ಕೆಲಸವಾಗಲಿದೆ.
ಮೇ 25: ಅಂತರದೇಶೀಯ ವ್ಯಾಪಾರಕ್ಕೆ ಅಗತ್ಯವಾಗಿರುವ ವಿವಿಧ ಕಾಗದ ದಾಖಲೆಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಪ್ರೆಸೆಂಟೇಶನ್ಗಳನ್ನು ಮಾಡಲಾಗುತ್ತದೆ. ಎಂಎಸ್ಎಂಇಗಳಿಗೆ ಮೆಗಾ ಇನ್ಫಾರ್ಮೇಶನ್ ಪೋರ್ಟಲ್ ರಚಿಸುವುದು, ಜಿವಿಸಿಗಳ ಮ್ಯಾಪಿಂಗ್ಗೆ ಒಂದು ಚೌಕಟ್ಟು ರೂಪಿಸುವುದು ಇತ್ಯಾದಿ ಬಗ್ಗೆ ಆ್ಯಕ್ಷನ್ ಪ್ಲಾನ್ ರಚಿಸುವ ಸಂಬಂಧ ಪ್ರಸ್ತುತಿಗಳಾಗಲಿವೆ.
ಟಿಐಡಬ್ಲ್ಯೂಜಿಯ ಮೊದಲ ಸಭೆ 2023 ಮಾರ್ಚ್ 28ರಿಂದ 30ರವರೆಗೂ ಮುಂಬೈನಲ್ಲಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಯಲಿದೆ. ಜಿ20 ಸಭೆಯ ನಿಮಿತ್ತವಾಗಿ ಮತ್ತು ಪೂರಕವಾಗಿ ಇದೂ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಒಂದು ವರ್ಷದಾದ್ಯಂತ ನಡೆಯುತ್ತಿವೆ. ಭಾರತ ಈ ಬಾರಿಯ ಜಿ20 ಸಭೆಯ ಅಧ್ಯಕ್ಷತೆ ವಹಿಸಿದೆ. ನವದೆಹಲಿಯಲ್ಲಿ ಸೆಪ್ಟಂಬರ್ 9 ಮತ್ತು 210 ರಂದು ಜಿ20 ಶೃಂಗಸಭೆ ನಡೆಯುತ್ತದೆ. ಭಾರತದಲ್ಲಿ ಮತ್ತು ದಕ್ಷಿಣ ಏಷ್ಯಾದಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು. ಆ ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳುವ ಮತ್ತು ಅಜೆಂಡಾಗಳನ್ನು ರೂಪಿಸುವ ಸಾಧ್ಯತೆ ಇದೆ.