Clean Chit: ಅದಾನಿ ಗ್ರೂಪ್ಗೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟ್ ಸಮಿತಿ; ಕೃತಕವಾಗಿ ಷೇರು ಬೆಲೆ ಹೆಚ್ಚಿಸಿದ್ದಕ್ಕೆ ಪುರಾವೆ ಇಲ್ಲ ಎಂದ ತಜ್ಞರು
SC Panel On Adani-Hindenburg Case: ಅದಾನಿ ಗ್ರೂಪ್ನ ಷೇರುಗಳನ್ನು ಕೃತಕವಾಗಿ ಉಬ್ಬಿಸುವಂತಹ ಕಾರ್ಯಗಳು ಎಸಗಿದ್ದು ಕಂಡುಬಂದಿಲ್ಲ ಎಂದು ತಜ್ಞರ ಸಮಿತಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ನವದೆಹಲಿ: ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ಭಾರೀ ಆಘಾತಕ್ಕೊಳಗಾಗಿದ್ದ ಅದಾನಿ ಗ್ರೂಪ್ಗೆ ಈಗ ತುಸು ನಿರಾಳದ ಬೆಳವಣಿಗೆಯಾಗಿದೆ. ಅದಾನಿ ಹಿಂಡನ್ಬರ್ಗ್ ಪ್ರಕರಣವನ್ನು ಅವಲೋಕಿಸಲು ಸುಪ್ರೀಂಕೋರ್ಟ್ನಿಂದ ರಚನೆಯಾಗಿದ್ದ ತಜ್ಞರ ಸಮಿತಿ ಇದೀಗ ಅದಾನಿ ಸಂಸ್ಥೆಗಳಿಗೆ ಕ್ಲೀನ್ ಚಿಟ್ ನೀಡಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಸುಪ್ರೀಂಕೋರ್ಟ್ಗೆ ಈ ಸಮಿತಿ ಸಲ್ಲಿರುವ ವರದಿಯಲ್ಲಿ, ಅದಾನಿ ಗ್ರೂಪ್ನ ಷೇರುಗಳನ್ನು ಕೃತಕವಾಗಿ ಉಬ್ಬಿಸುವಂತಹ ಕಾರ್ಯಗಳು ಎಸಗಿದ್ದು ಸ್ಪಷ್ಟವಾಗಿ ಕಂಡುಬಂದಿಲ್ಲ ಎಂದು ಹೇಳಿದೆಯಂತೆ. ಆದರೆ, ಈ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ.
ಅದಾನಿ–ಹಿಂಡನ್ಬರ್ಗ್ ಪ್ರಕರಣದ ತನಿಖೆಯನ್ನು ಅವಲೋಕಿಸುವಂತೆ ಸುಪ್ರೀಂಕೋರ್ಟ್ ರಚಿಸಿದ್ದ ಸಮಿತಿ ಇದು. ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳು ಹಾಗು ಅದರ ಕಾನೂನು ಚೌಕಟ್ಟನ್ನು ಪರಿಶೀಲಿಸುವಂತೆ ಈ ಸಮಿತಿಗೆ ತಿಳಿಸಲಾಗಿತ್ತು.
ಇದನ್ನೂ ಓದಿ: Green Card: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದಶಕದಿಂದ ಕಾಯುತ್ತಿರುವ ಭಾರತೀಯರು; ಯಾಕಿಷ್ಟು ವಿಳಂಬ? ಬಯಲಾಯ್ತು ಕಾರಣ
ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಕೃತಕವಾಗಿ ಉಬ್ಬುವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದು ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಮಾಡಲಾಗಿದ್ದ ಒಂದು ಗಂಭೀರ ಆರೋಪ. ಆದರೆ, ಅಂತಹ ಯಾವುದೇ ಪ್ಯಾಟರ್ನ್ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಪ್ಯಾನಲ್. ಹಾಗೆಯೇ, ಕನಿಷ್ಠ ಸಾರ್ವಜನಿಕ ಷೇರುದಾರಿಕೆ ವಿಚಾರವಾಗಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಹೂಡಿಕೆ ವಿಚಾರದಲ್ಲೂ ಅಕ್ರಮ ಕಂಡುಬಂದಿಲ್ಲ ಎಂದು ಸಮಿತಿ ಕ್ಲೀನ್ ಚಿಟ್ ಕೊಟ್ಟಿದೆ.
ಈ ಪ್ರಕರಣವನ್ನು ಸೆಬಿ ತನಿಖೆ ನಡೆಸುತ್ತಿದೆ. ಸೆಬಿ ನಡೆಸುತ್ತಿರುವ ತನಿಖೆಯನ್ನು ಈ ಸಮಿತಿ ಅವಲೋಕಿಸುತ್ತಿದೆ. 2020ರಿಂದಲೂ ಅದಾನಿ ಗ್ರೂಪ್ನೊಂದಿಗೆ ವ್ಯವಹಾರ ಹೊಂದಿದ 13 ವಿದೇಶೀ ಸಂಸ್ಥೆಗಳ ಮಾಲೀಕತ್ವ ಯಾರದ್ದು ಎಂಬುದನ್ನು ಸೆಬಿಗೆ ಕಂಡುಹಿಡಿಯಲು ಅಗಿಲ್ಲ ಎಂಬ ಸಂಗತಿಯನ್ನು ಈ ಸಮಿತಿ ತಿಳಿಸಿದೆ.
ಇದನ್ನೂ ಓದಿ: TCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು
ಹಾಗೆಯೇ, ಅದಾನಿ ಷೇರುಗಳಿಗೆ ಸಂಬಂಧಿಸಿದಂತೆ 849 ಸ್ವಯಂಚಾಲಿತ ಹಾಗೂ ಶಂಕಿತ ಅಲರ್ಟ್ಗಳು ಜನರೇಟ್ ಆಗಿದ್ದವು. ಸೆಬಿ ಮುಂದೆ 4 ರಿಪೋರ್ಟ್ಗಳು ಫೈಲ್ ಆಗಿದ್ದವು. ಇದರಲ್ಲಿ 2 ರಿಪೋರ್ಟ್ಗಳು ಹಿಂಡನ್ಬರ್ಗ್ ವರದಿ ಪ್ರಕಟವಾಗುವ ಮೊದಲು ಸಲ್ಲಿಕೆಯಾದರೆ, ಇನ್ನೆರಡು ಆ ನಂತರ ಫೈಲ್ ಆಗಿದ್ದವು ಎಂಬ ಅಂಶವನ್ನು ಸುಪ್ರೀಂಕೋರ್ಟ್ ಪ್ಯಾನಲ್ ತನ್ನ ವರದಿಯಲ್ಲಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Fri, 19 May 23