ನವದೆಹಲಿ, ಆಗಸ್ಟ್ 22: ಭಾರತದ ಆರ್ಥಿಕತೆ ಸ್ಥಿರವಾಗಿ ಮುನ್ನಡೆಯುತ್ತಿದೆ. ಮುಂಗಾರು ಮಳೆ ತುಸು ಆಚೆ ಈಚೆ ಆಗಬಹುದಾದರೂ ಒಟ್ಟಾರೆ ಆರ್ಥಿಕತೆ ಸುಗಮವಾಗಿ ಸಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ (2024-25) ಶೇ. 6.5ರಿಂದ 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾದ ಅಂದಾಜು ನಿಜವಾಗಬಹುದು ಎಂದು ಹಣಕಾಸು ಸಚಿವಾಲಯ ತನ್ನ ಜುಲೈನ ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಭಾರತ ಹಿಂದಿನ ಹಣಕಾಸು ವರ್ಷದಲ್ಲಿ (2023-24) ಶೇ. 8.2ರಷ್ಟು ಜಿಡಿಪಿ ಬೆಳವಣಿಗೆ ಹೊಂದಿತ್ತು. ಅದಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಬೆಳವಣಿಗೆ ತುಸು ಮಂದಗೊಳ್ಳಬಹುದು.
ಆದಾಗ್ಯೂ ಬೇರೆ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಓಟ ವೇಗವಾಗಿ ಇದೆ. ಹಣಕಾಸು ಸಚಿವಾಲಯವು ಉತ್ಪಾದನಾ ವಲಯದ ಸಾಧನೆ ಮತ್ತು ಸರ್ವಿಸ್ ಸೆಕ್ಟರ್ನ ಮುನ್ನಡೆಯನ್ನು ಉಲ್ಲೇಖಿಸಿ ಆರ್ಥಿಕ ವೃದ್ಧಿ ಬಗ್ಗೆ ಆಶಾದಾಯಕವಾಗಿದೆ.
ಇದನ್ನೂ ಓದಿ: ತನಿಖಾ ಸಂಸ್ಥೆಗಳ ಉಪಟಳ; ಭಾರತದಿಂದ ಕಾಲ್ಕಿತ್ತು ಸಿಂಗಾಪುರ, ದುಬೈಗೆ ಹೋಗುತ್ತಿರುವ ಉದ್ಯಮಿಗಳು: ರುಚಿರ್ ಶರ್ಮಾ
ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ (ಏಪ್ರಿಲ್ನಿಂದ ಜುಲೈವರೆಗೆ) ಸಂಗ್ರಹವಾದ ಜಿಎಸ್ಟಿ ಮೊತ್ತವು ದೇಶದಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿರುವುದನ್ನು ಮತ್ತು ಟ್ಯಾಕ್ಸ್ ಬೇಸ್ ವಿಸ್ತರಣೆ ಆಗಿರುವುದನ್ನು ಸೂಚಿಸುತ್ತದೆ ಎಂದು ಸಚಿವಾಲಯವು ತನ್ನ ವರದಿಯಲ್ಲಿ ಹೇಳಿದೆ.
ಇದೇ ವೇಳೆ ರೇಟಿಂಗ್ ಏಜೆನ್ಸಿಯಾದ ಐಸಿಆರ್ಎ ಪ್ರಕಾರ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ (2024ರ ಎಪ್ರಿಲ್ನಿಂದ ಜೂನ್) ಭಾರತದ ಆರ್ಥಿಕ ಬೆಳವಣಿಗೆ ಶೇ. 6ಕ್ಕೆ ಸೀಮಿತವಾಗಬಹುದು. ಇದು ಕಳೆದ ಆರು ಕ್ವಾರ್ಟರ್ಗಳಲ್ಲೇ ಭಾರತ ಕಾಣಲಿರುವ ಅತ್ಯಂತ ಕಡಿಮೆ ಬೆಳವಣಿಗೆ ಆಗುತ್ತದೆ.
ಸರ್ಕಾರದಿಂದ ಬಂಡವಾಳ ವೆಚ್ಚ ಕಡಿಮೆ ಆಗಿರುವುದು, ನಗರ ಭಾಗದ ಗ್ರಾಹಕ ಬೇಡಿಕೆ ಇಳಿಮುಖವಾಗಿರುವುದು ಈ ಮಂದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಐಸಿಆರ್ಎ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಮಾರಲು ನಿರ್ಧಾರ; 2,048 ಕೋಟಿ ರೂಗೆ ಡೀಲ್
ಆದರೆ, ಇಡೀ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.8ರಷ್ಟು ಇರಬಹುದು ಎಂದು ಐಸಿಆರ್ಎ ಹೇಳಿರುವುದು ಗಮನಾರ್ಹ. ಇದು ಆರ್ಥಿಕ ಸಮೀಕ್ಷೆ ಮತ್ತು ಹಣಕಾಸು ಸಚಿವಾಲಯ ಮಾಡಿರುವ ಅಂದಾಜಿನ ವ್ಯಾಪ್ತಿಯಲ್ಲೇ ಬರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ