ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಮಾರಲು ನಿರ್ಧಾರ; 2,048 ಕೋಟಿ ರೂಗೆ ಡೀಲ್
Zomato to acquire Paytm entertainment ticketing business: ಪೇಟಿಎಂ ಎಂಟರ್ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಅನ್ನು ಜೊಮಾಟೊ ಖರೀದಿಸುತ್ತಿದೆ. ಜೊಮಾಟೊ ಮತ್ತು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗಳು ಈ ಬೆಳವಣಿಗೆಯನ್ನು ಖಚಿತಪಡಿಸಿವೆ. 2,048 ಕೋಟಿ ರೂಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸಿನಿಮಾ ಟಿಕೆಟ್, ಕ್ರೀಡಾ ಇವೆಂಟ್ಗಳ ಟಿಕೆಟ್ ಇತ್ಯಾದಿ ಟಿಕೆಟಿಂಗ್ ಬಿಸಿನೆಸ್ಗಳು ಜೊಮಾಟೊಗೆ ಮಾರಾಟವಾಗಲಿದೆ.
ನವದೆಹಲಿ, ಆಗಸ್ಟ್ 22: ಪೇಟಿಎಂನ ಎಂಟರ್ಟೈನ್ಮೆಂಟ್ ವ್ಯವಹಾರಗಳನ್ನು ಜೊಮಾಟೊಗೆ ಮಾರಲಿದೆ. ಪೇಟಿಎಂನ ಮಾಲೀಕ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್ ಈ ವಿಷಯವನ್ನು ದೃಢಪಡಿಸಿದೆ. 2,048 ಕೋಟಿ ರೂ ಮೊತ್ತಕ್ಕೆ ಇದರ ಡೀಲ್ ನಡೆದಿರುವುದು ತಿಳಿದುಬಂದಿದೆ. ‘ಸಿನಿಮಾ, ಕ್ರೀಡೆ, ಲೈವ್ ಇವೆಂಟ್ಗಳನ್ನೂ ಒಳಗೊಂಡಂತೆ ಎಂಟರ್ಟೈನ್ಮೆಂಟ್ ಟಿಕೆಟಿಂಗ್ ಬಿಸಿನೆಸ್ ಅನ್ನು ಜೊಮಾಟೊ ಲಿ ಸಂಸ್ಥೆಗೆ ಮಾರಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಒನ್97 ಕಮ್ಯೂನಿಕೇಸನ್ಸ್ ಲಿ ಸಂಸ್ಥೆ ನಿನ್ನೆ (ಆ. 21) ಪ್ರಕಟಿಸಿದೆ.
ಪೇಟಿಎಂ ಸಂಸ್ಥೆ ತನ್ನ ಎಂಟರ್ಟೈನ್ಮೆಂಟ್ ಟಿಕೆಟಿಂಗ್ ಬಿಸಿನಸ್ ಅನ್ನು ಬಹಳ ಅಗಾಧವಾಗಿ ಬೆಳೆಸಿದೆ. ಕೋಟ್ಯಂತರ ಜನರಿಗೆ ಉಪಯುಕ್ತ ಸೇವೆ ಒದಗಿಸಿದೆ. ಈ ಬಿಸಿನೆಸ್ ಎಷ್ಟು ಅಮೂಲ್ಯ ಎಂಬುದು 2,048 ಕೋಟಿ ರೂಗೆ ಆಗಿರುವ ಈ ಒಪ್ಪಂದವೇ ಸಾಕ್ಷಿಯಾಗಿದೆ ಎಂದು ಒನ್97 ಕಮ್ಯೂನಿಕೇಶನ್ಸ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಉತ್ತಮ ಆಡಳಿತಕ್ಕಾಗಿ ಪೇಟಿಎಂ ಮಹತ್ವದ ನಿರ್ಧಾರ; ಮಂಡಳಿಯ ಸದಸ್ಯರ ಸಂಬಳ ಕಡಿಮೆ ಮಾಡಲು ಪ್ರಸ್ತಾಪ
ಜೊಮಾಟೋ ಕೂಡ ತನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಈ ಬೆಳವಣಿಗೆಯನ್ನು ಖಚಿತಪಡಿಸಿದೆ. ಪೇಟಿಎಂ ಮಾಲಕತ್ವದ ವೇಸ್ಟ್ಲ್ಯಾಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ (ಡಬ್ಲ್ಯುಇಪಿಎಲ್) ಮತ್ತು ಆರ್ಬ್ಜೆನ್ ಟೆಕ್ನಾಲಜೀಸ್ ಪ್ರೈ ಲಿ (ಒಟಿಪಿಎಲ್) ಸಂಸ್ಥೆಗಳು ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟಿಂಗ್ ಬಿಸಿನೆಸ್ ಅನ್ನು ನಿರ್ವಹಿಸುತ್ತವೆ. ಈ ಎರಡು ಸಂಸ್ಥೆಗಳು ಜೊಮಾಟೊ ಪಾಲಾಗಲಿವೆ. ಅಲ್ಲಿ ಕೆಲಸ ಮಾಡುವ 280 ಉದ್ಯೋಗಿಗಳೂ ಕೂಡ ಜೊಮಾಟೋ ಸುಪರ್ದಿಗೆ ಸೇರಲಿದ್ದಾರೆ.
ಡೀಲ್ಗೆ ಸಹಿ ಹಾಕಲಾದ 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎಂಟರ್ಟೈನ್ಮೆಂಟ್ ಟಿಕೆಟಿಂಗ್ ಸೇವೆಗಳು ಜೊಮಾಟೋಗೆ ವರ್ಗಾವಣೆ ಆಗಲು 12 ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಇವು ಪೇಟಿಎಂ ಆ್ಯಪ್ನಲ್ಲೇ ಲಭ್ಯ ಇರಲಿದೆ ಎನ್ನುವುದು ಗೊತ್ತಾಗಿದೆ.
ಈ ಡೀಲ್ ಬಳಿಕ ಪೇಟಿಎಂ ಷೇರುಬೆಲೆ ತುಸು ಹೆಚ್ಚಳವಾದರೆ, ಜೊಮಾಟೋ ಷೇರುಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ