ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್ಗೂ ತಿವಿದ ಸಚಿವ
Piyush Goyal not happy with e-commerce industry: ಇಕಾಮರ್ಸ್ ಉದ್ಯಮದ ಬೆಳವಣಿಗೆ ರೀತಿ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೇಜಾನ್, ಆ್ಯಪಲ್ ಸಂಸ್ಥೆಗಳ ಹೆಸರನ್ನು ಎತ್ತಿ, ಭಾರತದ ಸಣ್ಣ ವರ್ತಕರಿಗೆ ಆಗಿರುವ ಹಿನ್ನಡೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಇಕಾಮರ್ಸ್ ಕಂಪನಿಗಳಿಂದಾಗಿ ಜನರು ಮನೆಯಿಂದ ಹೊರಗೆ ಕಾಲಿಡುವುದು ಕಡಿಮೆ ಆಗಿದೆ ಎಂದಿದ್ದಾರೆ.
ನವದೆಹಲಿ, ಆಗಸ್ಟ್ 21: ಇಕಾಮರ್ಸ್ ಕಂಪನಿಗಳು ಬಂದ ಮೇಲೆ ಜನಸಾಮಾನ್ಯರಿಗೆ ಶಾಪಿಂಗ್ ಸುಲಭವಾಗಿದೆ. ಕೂತಲ್ಲೇ ಎಲ್ಲವನ್ನೂ ತರಿಸಿಕೊಳ್ಳಬಹುದು. ಅಮೇಜಾನ್, ಫ್ಲಿಪ್ಕಾರ್ಟ್, ಜೆಪ್ಟೋ ಇತ್ಯಾದಿಗಳು ನಗರ ನಿವಾಸಿಗಳ ದೈನಂದಿನ ಟ್ಯಾಸ್ಕ್ಗಳ ಭಾಗವಾಗಿ ಹೋಗಿವೆ. ಭಾರತದಲ್ಲಿ ಇಕಾಮರ್ಸ್ ಸಂಸ್ಥೆಗಳು ನಾಯಿಕೊಡೆಗಳಂತೆ ಒಂದೊಂದಾಗಿ ಆರಂಭವಾಗುತ್ತಿವೆ. ಆದರೆ, ಕೇಂದ್ರ ಸಚಿವ ಪೀಯುಶ್ ಗೋಯಲ್ ಇಕಾಮರ್ಸ್ ಕಂಪನಿಗಳ ಬೆಳವಣಿಗೆಯಿಂದ ವ್ಯಾಕುಲಗೊಂಡಿದ್ದಾರೆ. ಈ ಕ್ಷೇತ್ರದ ವಿಸ್ತರಣೆಯು ಖುಷಿಪಡುವ ವಿಚಾರವಲ್ಲ, ಆತಂಕ ತರುವ ಸಂಗತಿ ಎಂದಿದ್ದಾರೆ.
‘ಭಾರತದಲ್ಲಿ ಉದ್ಯೋಗ ಮತ್ತು ಗ್ರಾಹಕ ಕಲ್ಯಾಣದ ಮೇಲೆ ಇಕಾಮರ್ಸ್ನ ಪರಿಣಾಮ’ ಎಂಬ ವರದಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇಕಾಮರ್ಸ್ ಬೆಳವಣಿಗೆಯಿಂದ ಸಾಮಾಜಿಕವಾಗಿ ಆಗುವ ವಿಚಲನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇಕಾಮರ್ಸ್ ಬಳಕೆ ಹೆಚ್ಚಳವಾಗುವುದರಿಂದ ಜನರ ಜೀವನಶೈಲಿ ಇನ್ನಷ್ಟು ಚಟುವಟಿಕೆ ಕಳೆದುಕೊಳ್ಳಬಹುದು. ಒಂದೆಡೆ ಒಟಿಟಿ ಪ್ಲಾಟ್ಫಾರ್ಮ್ಗಳ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಆನ್ಲೈನ್ ಶಾಪಿಂಗ್ ಟ್ರೆಂಡ್ ಹೆಚ್ಚುತ್ತಿದೆ. ಈ ಎರಡೂ ಅಂಶಗಳು ಜನರನ್ನು ಮನೆಯಿಂದ ಹೊರಗೆ ಕಾಲಿಡುವ ಅಗತ್ಯತೆ ಬೀಳದಂತೆ ಮಾಡುತ್ತವೆ. ಜನರ ಸಾಮಾಜಿಕ ಸಂಪರ್ಕವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಪಿಯೂಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಐದು ವರ್ಷಕ್ಕೆ ಮಾತ್ರ ಹೂಡಿಕೆ ಮಾಡಬೇಕಾ? ಇಲ್ಲಿವೆ ಕೆಲ ಉತ್ತಮ ಆಯ್ಕೆಗಳು
ಅಮೇಜಾನ್ನಿಂದ ಭಾರತದ ಆರ್ಥಿಕತೆಗೆ ಏನು ಲಾಭ?
ಭಾರತದ ಇಕಾಮರ್ಸ್ ಬಿಸಿನೆಸ್ನಲ್ಲಿ ಭರ್ಜರಿ ಪಾಲು ಹೊಂದಿರುವ ಅಮೇಜಾನ್ನ ಬಿಸಿನೆಸ್ ಸ್ಟ್ರಾಟಿಜಿಯನ್ನು ಸಚಿವ ಗೋಯಲ್ ಗುಮಾನಿಯಿಂದ ನೋಡಿದ್ದಾರೆ. ‘ಇಕಾಮರ್ಸ್ ಉದ್ಯಮ ಬೇಡ ಎನ್ನುತ್ತಿಲ್ಲ. ಅದು ಇರಬೇಕು. ಆದರೆ, ಆ ಉದ್ಯಮ ಸರಿಯಾದ ರೀತಿಯಲ್ಲಿ ರೂಪಿತವಾಗಬೇಕು’ ಎಂದಿದ್ದಾರೆ.
ಅಮೇಜಾನ್ನಂತಹ ಕಂಪನಿಗಳು ತೀರಾ ಕಡಿಮೆ ಬೆಲೆಗೆ ವಸ್ತುಗಳನ್ನು ಆಫರ್ ಮಾಡುತ್ತವೆ. ಈ ರೀತಿಯ ಬೆಲೆ ತಂತ್ರ ಯಾರಿಗೆ ಉಪಯೋಗ? ಅಮೇಜಾನ್ ಸಾವಿರಾರು ಕೋಟಿ ರೂ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಖುಷಿ ಪಡುವುದು ಹೇಗೆ? ಅಮೇಜಾನ್ನಂತಹ ಇಕಾಮರ್ಸ್ ಕಂಪನಿಗಳಿಂದಾಗಿ ಜನರು ಶಾಪಿಂಗ್ ಮಾಡಲು ಹೊರಗೆ ಹೋಗುವುದು ಕಡಿಮೆ ಆಗಿದೆ. ಸಣ್ಣ ಅಂಗಡಿಗಳು ತತ್ತರಿಸುತ್ತಿವೆ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.
ಆ್ಯಪಲ್ ಉದಾಹರಣೆಯನ್ನೂ ಸಚಿವರು ನೀಡಿದ್ದಾರೆ. ‘ನೀವು ಈಗ ಎಷ್ಟು ಮೊಬೈಲ್ ಸ್ಟೋರ್ಗಳನ್ನು ನೋಡುತ್ತಿದ್ದೀರಿ? ಹತ್ತು ವರ್ಷದ ಹಿಂದೆ ಎಷ್ಟು ಇತ್ತು? ಎಲ್ಲಿ ಹೋದವು ಅಷ್ಟು ಮೊಬೈಲ್ ಸ್ಟೋರ್ಗಳು? ಆ್ಯಪಲ್ ಅಥವಾ ದೊಡ್ಡ ರೀಟೇಲ್ ಮಳಿಗೆಗಳು ಮಾತ್ರವೇ ಮೊಬೈಲ್ ಫೋನ್ ಇತ್ಯಾದಿಯನ್ನು ಮಾರಬೇಕಾ?’ ಎಂದು ಅವರು ಕೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ