ITCC for Travel Abroad: ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಎಲ್ಲರಿಗೂ ಬೇಕಿಲ್ಲ: ಮತ್ತೆ ಸ್ಪಷ್ಟನೆ ನೀಡಿದ ಸಿಬಿಡಿಟಿ
Income Tax Clearance Certificate: ದೇಶ ಬಿಟ್ಟು ಹೋಗುವವರೆಲ್ಲರೂ ಇನ್ಕಮ್ ಟ್ಯಾಕ್ಸ್ ಸರ್ಟಿಫಿಕೇಟ್ ಸಲ್ಲಿಸಬೇಕೆನ್ನುವುದು ತಪ್ಪು ಮಾಹಿತಿ ಎಂದು ಸಿಬಿಡಿಟಿ ಹೇಳಿದೆ. ಗಂಭೀರ ಹಣಕಾಸು ಅಕ್ರಮಗಳಲ್ಲಿ ಪಾಲ್ಗೊಂಡ ಆರೋಪ ಹೊಂದಿರುವವರು ಮತ್ತು 10 ಲಕ್ಷ ರೂಗೂ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡವರು ಮಾತ್ರವೇ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ನವದೆಹಲಿ, ಆಗಸ್ಟ್ 21: ಎಲ್ಲಾ ಭಾರತೀಯ ಪ್ರಜೆಗಳು ದೇಶ ತೊರೆದು ಹೋಗುವಾಗ ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಲ್ಲಿಸಿಯೇ ಹೋಗಬೇಕು ಎನ್ನುವಂತಹ ವರದಿಗಳನ್ನು ಹಣಕಾಸು ಸಚಿವಾಲಯ ಮತ್ತೊಮ್ಮೆ ನಿರಾಕರಿಸಿದೆ. ದೇಶ ಬಿಟ್ಟು ಹೋಗುವವರೆಲ್ಲರೂ ಟ್ಯಾಕ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ (ಐಟಿಸಿಸಿ) ಪಡೆಯುವುದು ಕಡ್ಡಾಯವೇನಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಂಗಳವಾರ (ಆ. 20) ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಕಳೆದ ತಿಂಗಳಲ್ಲೂ (ಜುಲೈ) ಸಿಬಿಡಿಟಿ ಈ ಸಂಬಂಧ ಸ್ಪಷ್ಟನೆ ನೀಡಿತ್ತು. ಆದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕೆಲ ಸುದ್ದಿ ಮಾಧ್ಯಮಗಳಲ್ಲಿ ಆದಾಯ ತೆರಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ವಿಚಾರದಲ್ಲಿ ಗೊಂದಲಕಾರಿ ವರದಿಗಳು ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಬಿಡಿಟಿ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದೆ.
‘ದೇಶ ಬಿಟ್ಟುಹೋಗುವ ಮುನ್ನ ಎಲ್ಲಾ ಭಾರತೀಯ ಪ್ರಜೆಗಳೂ ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ತಪ್ಪಾಗಿ ಹೇಳುವ ವರದಿಗಳು ಪ್ರಕಟವಾಗುತ್ತಿವೆ. ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಹಳ ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಇರುವುದು..’ ಎಂದು ಸಿಬಿಡಿಟಿ ಎರಡು ಸಂದರ್ಭಗಳನ್ನು ಪಟ್ಟಿ ಮಾಡಿದೆ.
- ವ್ಯಕ್ತಿ ಗಂಭೀರವಾದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿದ್ದರೆ, ಮತ್ತು ತನಿಖೆಯಲ್ಲಿ ಅವರ ಉಪಸ್ಥಿತಿ ಅಗತ್ಯ ಇದ್ದರೆ…
- ವ್ಯಕ್ತಿಯು 10 ಲಕ್ಷ ರೂಗಿಂತ ಹೆಚ್ಚು ತೆರಿಗೆ ಬಾಕಿ ಇದೆ ಎಂದು ಟ್ಯಾಕ್ಸ್ ಡಿಮ್ಯಾಂಡ್ ಪಡೆದಿದ್ದರೆ ಮತ್ತು ಅದಕ್ಕೆ ಯಾವುದೇ ಪ್ರಾಧಿಕಾರ ತಡೆ ನೀಡದೇ ಇದ್ದರೆ.
ಈ ಸಂದರ್ಭಗಳಲ್ಲಿ ವ್ಯಕ್ತಿಯು ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದು ಅದನ್ನು ಸಲ್ಲಿಸಿದ ಬಳಿಕವೇ ಹೊರ ದೇಶಕ್ಕೆ ಹೋಗಲು ಸಾಧ್ಯ ಎಂದು ನಿಯಮಗಳು ಹೇಳುತ್ತಿವೆ.
CBDT issues clarification in respect of Income-tax clearance certificate (ITCC).
It is being erroneously reported that all Indian citizens must obtain ITCC before leaving the country. This position is factually incorrect.
Vide Finance (No.2) Act, 2024, Black Money… pic.twitter.com/tadFVQr99F
— Income Tax India (@IncomeTaxIndia) August 20, 2024
1961ರ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದು ಅದರಲ್ಲಿ ಬ್ಲ್ಯಾಕ್ ಮನಿ ಕಾಯ್ದೆಯನ್ನು ಸೇರಿಸಲಾಗಿದೆ. ಕಪ್ಪು ಹಣ ಕಾಯ್ದೆಯು ಕೆಲ ನಿರ್ದಿಷ್ಟ ಸಂದರ್ಭಗಳಿಗೆ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯುವ ಅಗತ್ಯವನ್ನು ಹೇರುತ್ತದೆ. ಇದು ಬಹಳಷ್ಟು ಜನರಿಗೆ ಗೊಂದಲ ಮೂಡಿಸಿದೆ. ಇದು ತಪ್ಪು ಅನಿಸಿಕೆ ಎಂಬದು ಹಣಕಾಸು ಸಚಿವಾಲಯದ ಸ್ಪಷ್ಟನೆಯಾಗಿದೆ.
ಇದನ್ನೂ ಓದಿ: ದೇಶ ಬಿಟ್ಟುಹೋಗುವವರಿಗೆ ಟ್ಯಾಕ್ಸ್ ಕ್ಲಿಯರೆನ್ಸ್ ನಿಯಮ; ಇದು ಎಲ್ಲರಿಗೂ ಕಡ್ಡಾಯವಲ್ಲ ಎಂದ ಸಿಬಿಡಿಟಿ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230 ಪ್ರಕಾರ ಎಲ್ಲಾ ವ್ಯಕ್ತಿಗಳೂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಇದು ಅವಶ್ಯಕ. 2003ರಿಂದಲೂ ಈ ನಿಯಮ ಜಾರಿಯಲ್ಲಿದೆ. 2024ರಲ್ಲಿ ಮಾಡಲಾದ ತಿದ್ದುಪಡಿ ಬಳಿಕವೂ ಇದರಲ್ಲಿ ಬದಲಾವಣೆ ಇಲ್ಲ ಎಂದು ಪತ್ರಿಕಾ ಬಿಡುಗಡೆಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ