ದೇಶ ಬಿಟ್ಟುಹೋಗುವವರಿಗೆ ಟ್ಯಾಕ್ಸ್ ಕ್ಲಿಯರೆನ್ಸ್ ನಿಯಮ; ಇದು ಎಲ್ಲರಿಗೂ ಕಡ್ಡಾಯವಲ್ಲ ಎಂದ ಸಿಬಿಡಿಟಿ
Mandatory tax clearance certificate: ಈ ಬಾರಿಯ ಬಜೆಟ್ನಲ್ಲಿ, ದೇಶದಿಂದ ಹೊರಹೋಗಿ ನೆಲಸುವವರು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ಘೋಷಿಸಲಾಗಿತ್ತು. ಬ್ಲ್ಯಾಕ್ ಮನಿ ಹೊರಹೋಗುವುದನ್ನು ತಡೆಯಲು ಸರ್ಕಾರ ಕೈಗೊಂಡ ಈ ಕ್ರಮದ ಬಗ್ಗೆ ಹಲವರಿಗೆ ಗೊಂದಲ ಇದೆ. ಆದರೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 230 ಪ್ರಕಾರ ಕೆಲ ವಿಶೇಷ ಪ್ರಕರಣಗಳಲ್ಲಿ ವ್ಯಕ್ತಿಗಳು ಟಿಸಿಎಸ್ ಪಡೆಯುವುದು ಕಡ್ಡಾಯ ಎಂದಿದೆ. ಎಲ್ಲರೂ ಪಡೆಯಬೇಕಿಲ್ಲ.
ನವದೆಹಲಿ, ಜುಲೈ 28: ಕಪ್ಪು ಹಣ ಹೊರನುಸುಳುವುದನ್ನು ತಪ್ಪಿಸಲು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನಿಯಮ ಇದೆ. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 230ರ ಅಡಿಯಲ್ಲಿ, ದೇಶ ಬಿಟ್ಟು ಹೋಗುವವರು ಟ್ಯಾಕ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯಬೇಕು ಎನ್ನುವ ಕಾನೂನು ಇದೆ. ಜುಲೈ 23ರಂದು ಮಂಡಿಸಲಾದ ಬಜೆಟ್ನಲ್ಲಿ ಇದರ ಪ್ರಸ್ತಾಪ ಇದ್ದು, 2015ರ ಕಪ್ಪು ಹಣ ಕಾಯ್ದೆ ಅಡಿ ವಿದೇಶಕ್ಕೆ ಹೋಗಿ ನೆಲಸುವವರು ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು ಎಂದಿದೆ.
ಈ ವಿಚಾರ ಈಗ ಕೆಲವರಿಗೆ ಗೊಂದಲ ಮೂಡಿಸಿದೆ. ಬೇರೆ ದೇಶಕ್ಕೆ ಹೋಗಿ ನೆಲಸಬೇಕೆನ್ನುವವರೆಲ್ಲರೂ ಆತಂಕಗೊಂಡಿದ್ದಾರೆನ್ನುವ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ನೇರ ತರಿಗೆಗಳ ಮಂಡಳಿಯಾದ ಸಿಬಿಡಿಟಿ ಈ ಕಾನೂನು ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ಪ್ರತಿಯೊಬ್ಬರೂ ಟಿಸಿಎಸ್ ಅನ್ನು ಕಡ್ಡಾಯವಾಗಿ ಪಡೆಯಬೇಕೆಂದು ನಿಯಮದಲ್ಲಿ ಇಲ್ಲ ಎಂದು ಹೇಳಿದೆ. ಇದಕ್ಕಾಗಿ 1961ರ ಆದಾಯ ತೆರಿಗೆ ಸೆಕ್ಷನ್ 230 ಅನ್ನು ಉಲ್ಲೇಖಿಸಿದೆ.
ಸಿಬಿಡಿಟಿ ಸ್ಪಷ್ಟನೆ ಇದು…
1961ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 230 ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಮತ್ತು ಪ್ರಕರಣಗಳಲ್ಲಿ ವ್ಯಕ್ತಿಗಳು ತೆರಿಗೆ ಬಾಧ್ಯತೆ ಇಲ್ಲವೆಂದು ಪ್ರಮಾಣ ಪತ್ರ ಪಡೆಯಬೇಕಾಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಜೆಟ್ನಲ್ಲಿ ಕರ್ನಾಟಕಕ್ಕೆ ಚೊಂಬು ಆರೋಪಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು
ಈ ಎರಡು ಸಂದರ್ಭಗಳಲ್ಲಿ ಟಿಸಿಎಸ್ ಅವಶ್ಯಕ
- ಗಂಭೀರ ಸ್ವರೂಪದ ಹಣಕಾಸು ಅಕ್ರಮಗಳನ್ನು ಮಾಡಿರುವ ಆರೋಪದ ಪ್ರಕರಣದಲ್ಲಿ ಸಿಲುಕಿರುವವರು, ಆದಾಯ ತೆರಿಗೆ ಕಾಯ್ದೆ ಅಥವಾ ಆಸ್ತಿ ತೆರಿಗೆ ಕಾಯ್ದೆ ಅಡಿಯಲ್ಲಿ ನಡೆಯುವ ತನಿಖೆಯಲ್ಲಿ ಉಪಸ್ಥಿತರಿರಬೇಕಾಗುತ್ತದೆ. ಇವರ ವಿರುದ್ಧ ಟ್ಯಾಕ್ಸ್ ಡಿಮ್ಯಾಂಡ್ ಸೃಷ್ಟಿಸಬಹುದು.
- ಹತ್ತು ಲಕ್ಷ ರೂಗಿಂತ ಹೆಚ್ಚು ನೇರ ತೆರಿಗೆ ಬಾಕಿ ಉಳಿಸಿಕೊಂಡ ವ್ಯಕ್ತಿಗಳು…
ಈ ಮೇಲಿನ ಪ್ರಕರಣಗಳಲ್ಲಿ ವ್ಯಕ್ತಿಯಿಂದ ಸ್ಪಷ್ಟೀಕರಣ ಅಥವಾ ಕಾರಣಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಆ ಬಳಿಕ ಆದಾಯ ತೆರಿಗೆ ಮುಖ್ಯ ಕಮಿಷನರ್ ಅವರಿಂದ ಅನುಮೋದನೆ ಪಡೆಯಬೇಕು. ಆ ನಂತರವಷ್ಟೇ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಲಾಗುತ್ತದೆ.
ಇದನ್ನೂ ಓದಿ: ಹುಲ್ಲು ಬೆಳೆಯಿರಿ..! ನೂರಕ್ಕೆ ನೂರು ತೆರಿಗೆ ಉಳಿಸಲು ಉಡುಪಿಯ ಈ ವ್ಯಕ್ತಿಯ ಐಡಿಯಾ
ಈ ಎರಡು ವಿಶೇಷ ಸಂದರ್ಭಗಳಲ್ಲಿ ಆರೋಪಿತ ವ್ಯಕ್ತಿಗಳು ಟಿಸಿಎಸ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಉಳಿದವರಿಗೆ ಈ ನಿಯಮ ಅನ್ವಯ ಆಗದೇ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ