ನವದೆಹಲಿ: ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶ (GDP Data) ಬಿಡುಗಡೆ ಆಗಿದ್ದು, ಈ ಸಮಯದಲ್ಲಿ ಶೇ. 6.1ರಷ್ಟು ಬೆಳವಣಿಗೆ ಆಗಿರುವುದು ಗೊತ್ತಾಗಿದೆ. ಇದು ಕೊನೆಯ ತ್ರೈಮಾಸಿಕವಾಗಿರುವುದರಿಂದ 2022-23ರ ಇಡೀ ಹಣಕಾಸು ವರ್ಷದ (Financial Year) ಜಿಡಿಪಿ ಬೆಳವಣಿಗೆಯ ಲೆಕ್ಕ ಸಿಕ್ಕಂತಾಗಿದೆ. ಹಿಂದಿನ ಮೂರು ಕ್ವಾರ್ಟರ್ಗಳ ಜಿಡಿಪಿ ಬೆಳವಣಿಗೆಯನ್ನೂ ಸೇರಿಸಿದರೆ 23ರ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಆರ್ಥಿಕ ಅಭಿವೃದ್ಧಿ ಆಗಿರುವುದು ಕಂಡುಬರುತ್ತದೆ.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (Statistics and Programme Implementation Ministry) ಮೇ 31ರಂದು ಜಿಡಿಪಿ ದತ್ತಾಂಶದ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ 2022-23ರ ಹಣಕಾಸು ವರ್ಷದಲ್ಲಿ ಜಿಡಿಪಿ 43.62 ಲಕ್ಷ ಕೋಟಿ ರೂ ಆಗಿದ್ದಿರಬಹುದು. ಇದು 2011-12ರ ದರಗಳನ್ನು ಬೇಸ್ ಆಗಿರಿಸಿ ಮಾಡಿದ ಲೆಕ್ಕಾಚಾರ. ಹಿಂದಿನ ಹಣಕಾಸು ವರ್ಷದ ಇದೇ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ 2022ರ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ 41.12 ಲಕ್ಷ ಕೋಟಿ ರೂನಷ್ಟು ಜಿಡಿಪಿ ಇತ್ತು. ಅದಕ್ಕೆ ಹೋಲಿಸಿದರೆ ಜಿಡಿಪಿ ಶೇ. 6.1ರಷ್ಟು ಬೆಳೆದಿದೆ. ಈಗಿನ ಬೆಲೆಗಳನ್ನು ಆಧಾರವಾಗಿ ಇಟ್ಟುಕೊಂಡರೆ ಈ ಕ್ವಾರ್ಟರ್ನಲ್ಲಿ ಜಿಡಿಪಿ 71.82 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10.4ರಷ್ಟು ಜಿಡಿಪಿ ವೃದ್ಧಿಯಾಗಿದೆ.
ಇದನ್ನೂ ಓದಿ: Fiscal Deficit: ವಿತ್ತೀಯ ಕೊರತೆ ಶೇ. 6.4: 2022-23ರ ಗುರಿ ಮುಟ್ಟಿದ ಸರ್ಕಾರ; ಅನುಕೂಲವಾದ ಅಂಶಗಳೇನು?
2022-23ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ, ಅಂದರೆ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಬೆಳವಣಿಗೆ ಕಂಡಿತ್ತು. ಅದಾದ ನಂತರದ ಮೂರು ಕ್ವಾರ್ಟರ್ಗಳಲ್ಲಿ ಕ್ರಮವಾಗಿ ಶೇ. 6.2, ಶೇ. 4.5 ಮತ್ತು ಶೇ. 6.1ರಷ್ಟು ಜಿಡಿಪಿ ವೃದ್ಧಿ ಕಂಡಿದೆ.
ಕೊನೆಯ ಕ್ವಾರ್ಟರ್ನಲ್ಲಿ ಹಲವು ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಮಾಡಿದ್ದ ಅಂದಾಜಿಗಿಂತ ಹೆಚ್ಚು ಬೆಳವಣಿಗೆಯಾಗಿದೆ ನಾಲ್ಕನೇ ಕ್ವಾರ್ಟರ್ನ ಜಿಡಿಪಿ. 2023ರ ಜನವರಿಯಿಂದ ಮಾರ್ಚ್ವರೆಗಿನ ಆ ಕ್ವಾರ್ಟರ್ನಲ್ಲಿ ಜಿಡಿಪಿ ವೃದ್ಧಿ ಶೇ. 5.1 ಇರಬಹುದು ಎಂದು ಆರ್ಬಿಐ ಅಂದಾಜು ಮಾಡಿತ್ತು. ಎಸ್ಬಿಐ ಪ್ರಕಾರ ಶೇ. 5.5, ರಾಯ್ಟರ್ಸ್ ಅಭಿಮತದ ಪ್ರಕಾರ ಶೇ. 5 ಮಾತ್ರ ಇರಬಹುದು ಎಂದು ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ನಿರೀಕ್ಷೆಮೀರಿದಷ್ಟು ಪ್ರಗತಿಯನ್ನು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಭಾರತ ಕಂಡಿದೆ.