ಜಾರ್ಜ್ ಸೋರೋಸ್ ಹೆಸರು ಈಗ ಭಾರತದಲ್ಲಿ ಚರ್ಚೆಯ ವಿಷಯಗಳಲ್ಲೊಂದೆನಿಸಿದೆ. ಜಾರ್ಜ್ ಸೋರೋಸ್ ಫೌಂಡೇಶನ್ನಿಂದ ಫಂಡಿಂಗ್ ಪಡೆದಿರುವ ಎಫ್ಡಿಎಲ್-ಎಪಿ ಫೌಂಡೇಶನ್ನಲ್ಲಿ ಸೋನಿಯಾ ಗಾಂಧಿ ಸಹ-ಅಧ್ಯಕ್ಷೆಯಾಗಿದ್ದಾರೆ ಎಂಬುದು ಆಡಳಿತ ಪಕ್ಷವಾದ ಬಿಜೆಪಿಯ ನಾಯಕರು ಮಾಡುತ್ತಿರುವ ಬಹಿರಂಗ ಆರೋಪ. ಜಾರ್ಜ್ ಸೋರೋಸ್ ಎಂಬ ಉದ್ಯಮಿಯ ನಂಟು ಹೊಂದಿರುವುದು ಯಾಕೆ ವಿವಾದಕ್ಕೆ ಒಳಗಾಗುತ್ತಿದೆ?
ಜಾರ್ಜ್ ಸೋರೋಸ್ ಅವರು ಜಮ್ಮು-ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಾರೆ. ಕೆಲ ವರ್ಷಗಳ ಹಿಂದೆ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಹಾಗೂ ಭಾರತದಲ್ಲಿ ಇರುವ ಅಸಹಿಷ್ಣು ವಾತಾವರಣ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಭಾರತವನ್ನು ಅಸ್ಥಿರಗೊಳಿಸಲು ಸೊರೋಸ್ ಪ್ರಯತ್ನಿಸುತ್ತಿದ್ದಾರೆ ಎಂಬುದು ಆಡಳಿತ ಪಕ್ಷದ ನಾಯಕರುಗಳ ವಾದ. ಅಷ್ಟಕ್ಕೂ ಜಾರ್ಜ್ ಸೋರೋಸ್ ಅವರು ಅಷ್ಟು ದೊಡ್ಡ ಮಟ್ಟದ ಪ್ರಬಲ ವ್ಯಕ್ತಿಯೇ?
1930ರ ಆಗಸ್ಟ್ 12ರಂದು ಹಂಗೆರಿಯ ಬುಡಾಪೆಸ್ಟ್ನಲ್ಲಿ ಯಹೂದಿ ಕುಟುಂಬದೊಳಗೆ ಜನಿಸಿದವರು ಜಾರ್ಜ್ ಸೋರೋಸ್. ಮೂಲ ಹೆಸರು ಜ್ಯಾರ್ಜಿ ಶ್ವಾರ್ಟ್ಜ್. ಆಗ ಹಂಗೆರಿಯು ಜರ್ಮನಿಯ ವಶದಲ್ಲಿತ್ತು. ನಾಜಿಯ ಆರ್ಭಟ ನಡೆಯುತ್ತಿತ್ತು. ಯಹೂದಿಗಳ ನಾಮಾವಶೇಷ ಮಾಡಲು ನಾಜಿಗಳು ಯತ್ನಿಸುತ್ತಿದ್ದ ಕಾಲ ಘಟ್ಟ. ಹೀಗಾಗಿ, ಜ್ಯಾರ್ಜಿ ಶ್ವಾರ್ಟ್ಜ್ ಹೆಸರನ್ನು ಜಾರ್ಜ್ ಸೋರೋಸ್ ಎಂದು ಬದಲಾಯಿಸಿ, ಯಹೂದಿ ಗುರುತನ್ನು ಮರೆ ಮಾಡಿದರು. ಇದು ಜಾರ್ಜ್ ಸೋರೋಸ್ ಅವರ ಆರಂಭಿಕ ಹೆಜ್ಜೆಗಳು.
ಜಾರ್ಜ್ ಸೋರೋಸ್ ಅಪ್ಪಟ ಉದಾರವಾದಿ ಚಿಂತನೆಯವರು. ಮುಕ್ತ ಸಮಾಜ, ಮುಕ್ತ ಪ್ರಜಾತಂತ್ರ ವ್ಯವಸ್ಥೆ ನೆಲಸಬೇಕು ಎಂದು ಬಯಸುವವರು ಎಂದು ಹೇಳಲಾಗುತ್ತದೆ. ಅಂತೆಯೇ ಅವರು ವಿಶ್ವದ ಹಲವೆಡೆ ಬಲಪಂಥೀಯ ಸರ್ಕಾರಗಳನ್ನು ಕಿತ್ತೊಗೆಯಲು ತೆರೆಮರೆಯಲ್ಲಿ ಯತ್ನಿಸುತ್ತಾರೆ ಎನ್ನುವ ಆರೋಪ ಇದೆ.
ಜಾರ್ಜ್ ಸೋರೋಸ್ ಅವರು ‘ಸೋರೋಸ್ ಆನ್ ಸೋರೋಸ್’ ಎನ್ನುವ ಪುಸ್ತಕ ಬರೆದಿದ್ದು, ಅದರಲ್ಲಿ ‘ನಾನು ಬೇರೆಯವರ ನಿಯಮಗಳನ್ನು ಒಪ್ಪೋದಿಲ್ಲ. ಆಡಳಿತ ಬದಲಾಯಿಸುವ ಸಂದರ್ಭದಲ್ಲಿ ಸಾಮಾನ್ಯ ನಿಯಮಗಳು ಅನ್ವಯ ಆಗೊಲ್ಲ,’ ಎಂದು ಬರೆದಿದ್ದಾರೆ. ಹೀಗಾಗಿ, ಅವರನ್ನು ರಿಜೈಮ್ ಚೇಂಜ್ ಮಾಸ್ಟರ್ಮೈಂಡ್ ಎಂದೂ ಕರೆಯಲಾಗುತ್ತದೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡು ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಸ್ಥಾಪನೆಯಾಗುವುದರ ಹಿಂದೆ ಸೋರೋಸ್ ಕೈವಾಡ ಇದೆ ಎನ್ನುವ ಅರೋಪವೂ ಇದೆ.
ಓಪನ್ ಸೊಸೈಟಿ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಈ ಫೌಂಡೇಶನ್ಗಳು 120 ದೇಶಗಳಲ್ಲಿ ಸಕ್ರಿಯವಾಗಿವೆ. ಸ್ಥಳೀಯ ಉದಾರವಾದಿ ಸಂಘಟನೆಗಳನ್ನು ಗುರುತಿಸಿ ಅವುಗಳಿಗೆ ನೆರವಾಗುತ್ತಾರೆ ಎನ್ನಲಾಗಿದೆ. ಜಾರ್ಜ್ ಸೋರೋಸ್ ಅವರು ಮೂರು ವಿವಾಹಗಳಿಂದ ಆರು ಮಕ್ಕಳನ್ನು ಹೊಂದಿದ್ದು, ಕೆಲವರು ಓಪನ್ ಸೊಸೈಟಿ ಫೌಂಡೇಶನ್ ಮತ್ತು ಬೇರೆ ಬೇರೆ ಬಿಸಿನೆಸ್ಗಳಲ್ಲಿ ಸಕ್ರಿಯವಾಗಿದ್ದಾರೆ.
ಇದನ್ನೂ ಓದಿ: ಸಂಜಯ್ ಮಲ್ಹೋತ್ರಾ ಹೊಸ ಆರ್ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ
ಜಾರ್ಜ್ ಸೋರೋಸ್ ಬಳಿ ಇರುವ ಆಸ್ತಿಯ ಮೌಲ್ಯ 6-7 ಬಿಲಿಯನ್ ಡಾಲರ್ ಮಾತ್ರವೇ. ಆದರೆ, ಇವರ ಓಪನ್ ಸೊಸೈಟಿ ಫೌಂಡೇಶನ್ನ ಆಸ್ತಿ 32 ಬಿಲಿಯನ್ ಡಾಲರ್ಗೂ ಹೆಚ್ಚು. ತಮ್ಮ ಹೆಚ್ಚಿನ ಗಳಿಕೆಯನ್ನು ಸೋರೋಸ್ ಅವರು ಫೌಂಡೇಶನ್ಗೆ ದಾನವಾಗಿ ನೀಡುತ್ತಾರೆ. ಹಾಗಾದರೆ, ಸೋರೋಸ್ ಹಣ ಹೇಗೆ ಸಂಪಾದಿಸುತ್ತಾರೆ..?
ಜಾರ್ಜ್ ಸೋರೋಸ್ ಅವರು ಕರೆನ್ಸಿಗಳ ಶಾರ್ಟ್ಸೆಲ್ಲಿಂಗ್ ಮೂಲಕ ಹಣ ಗಳಿಸುತ್ತಾರೆ. ಹಲವು ದೇಶಗಳ ಕರೆನ್ಸಿಗಳ ಮೌಲ್ಯ ಕುಸಿತಕ್ಕೆ ಅವರು ಕಾರಣರು ಎನ್ನಲಾಗಿದೆ. ಇಂಡೋನೇಷ್ಯಾ, ಮಲೇಷ್ಯಾ, ಬ್ರಿಟನ್ ಮೊದಲಾದ ದೇಶಗಳ ಕರೆನ್ಸಿಗಳನ್ನು ಇವರು ಈ ಹಿಂದೆ ಟಾರ್ಗೆಟ್ ಮಾಡಿದ್ದರೆನ್ನಲಾಗಿದೆ. ಕರೆನ್ಸಿ ಮೌಲ್ಯದ ಬಗ್ಗೆ ಸ್ಪೆಕುಲೇಶನ್ ಅಥವಾ ಊಹಾತ್ಮಕ ಧ್ವನಿ ಎತ್ತಿ, ಅವುಗಳ ಮೌಲ್ಯ ಕುಸಿದಾಗ ಇವರು ಖರೀದಿಸುತ್ತಾರೆ.
ಹಿಂಡನ್ಬರ್ಗ್ನಂತಹ ಸಂಸ್ಥೆಗಳು ಷೇರುಗಳನ್ನು ಶಾರ್ಟ್ಸೆಲ್ ಮಾಡುವ ರೀತಿಯಲ್ಲಿ ಸೋರೋಸ್ ಅವರು ಕರೆನ್ಸಿಗಳ ಶಾರ್ಟ್ಸೆಲ್ ಮಾಡುತ್ತಾರೆ. ಈ ರೀತಿ ಗಳಿಸಿದ ಹಣವನ್ನು ಅವರು ಓಪನ್ ಸೊಸೈಟಿ ಫೌಂಡೇಶನ್ನ ಕಾರ್ಯಗಳಿಗೆ ಬಳಸುತ್ತಾರೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ