HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ

|

Updated on: Jan 17, 2024 | 5:23 PM

HSBC new branch in Whitefield, Bengaluru: ಜಾಗತಿಕ ಬ್ಯಾಂಕಿಂಗ್ ದಿಗ್ಗಜ ಎಚ್​ಎಸ್​ಬಿಸಿ ಬ್ಯಾಂಕ್ ಜನವರಿ 17ರಂದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ನೂತನ ಶಾಖಾ ಕಚೇರಿಯನ್ನು ಆರಂಭಿಸಿದೆ. 8,300 ಚದರಡಿ ವಿಸ್ತೀರ್ಣದಲ್ಲಿರುವ ಈ ಕಚೇರಿ ಭಾರತದಲ್ಲಿ ಎಚ್​​ಎಸ್​ಬಿಸಿಯ ಅತಿದೊಡ್ಡ ಶಾಖಾ ಕಛೇರಿ ಎನ್ನಲಾಗಿದೆ. ವೈಟ್​ಫೀಲ್ಡ್ ಬೆಂಗಳೂರಿನ ಟೆಕ್ ಹಬ್ ಆಗಿದೆ, ಸಿರಿವಂತ ಬೆಂಗಳೂರು ದಕ್ಷಿಣ ಪ್ರದೇಶವೂ ಸಮೀಪದಲ್ಲಿದೆ.

HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ
ಎಚ್​ಎಸ್​ಬಿಸಿ ಬ್ಯಾಂಕ್
Follow us on

ಬೆಂಗಳೂರು, ಜನವರಿ 17: ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ದೈತ್ಯ ಎಚ್​ಎಸ್​ಬಿಸಿ ಬ್ಯಾಂಕ್ (HSBC India) ಬೆಂಗಳೂರಿನಲ್ಲಿ ಇಂದು ಬುಧವಾರ (ಜ. 17) ಹೊಸ ಶಾಖಾ ಕಚೇರಿಯೊಂದನ್ನು ತೆರೆದಿದೆ. ವೈಟ್​ಫೀಲ್ಡ್​ನಲ್ಲಿರುವ ಈ ಕಚೇರಿ 8,300 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವರದಿ ಪ್ರಕಾರ ಎಚ್​ಎಸ್​ಬಿಸಿಯ ಭಾರತದ ಶಾಖಾ ಕಚೇರಿಗಳ ಪೈಕಿ ವೈಟ್​ಫೀಲ್ಡ್​ನಲ್ಲಿರುವ ಕಚೇರಿ ಅತಿದೊಡ್ಡದು ಎನ್ನಲಾಗಿದೆ. ವೈಟ್​ಫೀಲ್ಡ್​ನಲ್ಲಿ ಶಾಖಾ ಕಚೇರಿ ತೆರೆಯಲಾಗಿರುವ ಸಂಗತಿಯನ್ನು ಎಚ್​ಎಸ್​ಬಿಸಿ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದ ಅತಿದೊಡ್ಡ ಹಾಗೂ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಎಚ್​ಎಸ್​ಬಿಸಿ ಭಾರತಕ್ಕೆ ವ್ಯವಹಾರ ಆರಂಭಿಸಿ 170 ವರ್ಷವೇ ಆಗಿದೆ. 14 ನಗರಗಳಲ್ಲಿ 25ಕ್ಕೂ ಹೆಚ್ಚು ಶಾಖಾ ಕಚೇರಿಗಳನ್ನು ಹೊಂದಿದೆ. ಈಗ ವೈಟ್​ಫೀಲ್ಡ್​ನಲ್ಲಿ ಹೊಸ ಕಚೇರಿ ತೆರೆದಿರುವುದರಿಂದ ಭಾರತದಲ್ಲಿ ಬ್ಯಾಂಕ್​ನ ಉಪಸ್ಥಿತಿ ಇನ್ನೂ ಪ್ರಬಲಗೊಳ್ಳಲಿದೆ ಎಂಬುದು ಎಚ್​ಎಸ್​ಬಿಸಿ ಇಂಡಿಯಾದ ಅನಿಸಿಕೆ.

ಇದನ್ನೂ ಓದಿ: LIC Record: ಎಲ್​ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್​ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ

ವೈಟ್​ಫೀಲ್ಡ್​ಗೆ ಸುಲಭ ಕನೆಕ್ಟಿವಿಟಿ ಹೊಂದಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ತಲಾದಾಯ 9.37 ಲಕ್ಷ ರೂ ಇದೆ. ಅತಿಹೆಚ್ಚು ತಲಾದಾಯ ಇರುವ ಪ್ರದೇಶಗಳ ಪೈಕಿ ಬೆಂಗಳೂರು ದಕ್ಷಿಣ ಇದೆ. ಭಾರತದ ಸರಾಸರಿ ತಲಾದಾಯವಾದ 2.16 ಲಕ್ಷ ರೂಗಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂದು ಎಚ್​ಎಸ್​ಬಿಸಿ ಸಂಸ್ಥೆ ವೈಟ್​ಫೀಲ್ಡ್​ನಲ್ಲಿ ಕಚೇರಿ ಆರಂಭಿಸಿದ್ದರಿಂದ ಆಗುವ ಅನುಕೂಲದ ಬಗ್ಗೆ ವಿವರಣೆ ನೀಡಿದೆ.

ಭಾರತದ ಹೆಚ್ಚಿನ ಐಟಿ ಕಂಪನಿಗಳು ವೈಟ್​ಫೀಲ್ಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೇಂದ್ರಿತವಾಗಿವೆ. ಇದು ಟೆಕ್ನಾಲಜಿ ಹಬ್ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ಶಾಖಾ ಕಚೇರಿ ತೆರೆಯುವುದರಿಂದ ಟೆಕ್ ಸಮುದಾಯಗಳ ಹಣಕಾಸು ಬೇಡಿಕೆಗಳನ್ನು ಪೂರೈಸಲು ಸುಲಭವಾಗಬಹುದು ಎಂದು ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

ಭಾರತದಲ್ಲಿ ಮೂರನೇ ಅತಿಹೆಚ್ಚು ಟೆಕ್ ಯೂನಿಕಾರ್ನ್ ಕಂಪನಿಗಳಿವೆ. ವಿಶ್ವದ ಅತಿದೊಡ್ಡ 100 ಟೆಕ್ ಯೂನಿಕಾರ್ನ್​ಗಳ ಪೈಕಿ 50ಕ್ಕೆ ನಾವು ಬ್ಯಾಂಕಿಂಗ್ ಸರ್ವಿಸ್ ನೀಡುತ್ತಿದ್ದೇವೆ ಎಂದು ಅದು ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ