LIC Record: ಎಲ್ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ
Public Sector Companies with largest Market Cap: ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ ಅತಿಹೆಚ್ಚು ಷೇರುಸಂಪತ್ತು ಎಲ್ಐಸಿಯದ್ದಾಗಿದೆ. ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಎಲ್ಐಸಿ ಹಿಂದಿಕ್ಕಿದೆ. ಎಲ್ಐಸಿಯ ಷೇರುಸಂಪತ್ತು 5.8 ಲಕ್ಷ ಕೋಟಿಯಾದರೆ, ಎಸ್ಬಿಐನ ಷೇರುಸಂಪತ್ತು 5.62 ಲಕ್ಷ ಕೋಟಿ ರೂ ಆಗಿದೆ.
ನವದೆಹಲಿ, ಜನವರಿ 17: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ ಎಲ್ಐಸಿ ನಂಬರ್ ಒನ್ ಎನಿಸಿದೆ. ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಅಥವಾ ಮಾರ್ಕೆಟ್ ಕ್ಯಾಪಿಟಲ್ (market capital) ಇರುವ ಸರ್ಕಾರಿ ಸಂಸ್ಥೆಗಳ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಎಲ್ಐಸಿ ಹಿಂದಿಕ್ಕಿ ನಂ. 1 ಎನಿಸಿದೆ. ಇಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಎಲ್ಐಸಿ ಷೇರುಮೌಲ್ಯ 919.45 ರೂಗೆ ಏರಿತು. ಇದರ ಪರಿಣಾಮವಾಗಿ ಅದರ ಮಾರ್ಕೆಟ್ ಕ್ಯಾಪ್ ಮೊತ್ತ 5.8 ಲಕ್ಷ ಕೋಟಿ ರೂ ಆಯಿತು. ಅದೇ ವೇಳೆ ಎಸ್ಬಿಐನ ಷೇರುಬೆಲೆ ಇಂದು ಶೇ. 1ರಷ್ಟು ಕಡಿಮೆ ಆದ ಪರಿಣಾಮ ಅದರ ಷೇರು ಸಂಪತ್ತು 5.62 ಲಕ್ಷ ಕೋಟಿ ರೂಗೆ ಇಳಿದಿತ್ತು. ಹೀಗಾಗಿ, ಎಲ್ಐಸಿ ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಸರ್ಕಾರಿ ಸಂಸ್ಥೆ ಎಂಬ ದಾಖಲೆ ಬರೆಯಿತು.
ಜ. 17ರ ಮಧ್ಯಾಹ್ನದ ವೇಳೆಗೆ ಎಲ್ಐಸಿ ಷೇರು ಬೆಲೆ 919 ರೂನಿಂದ 896 ರುಪಾಯಿಗೆ ಇಳಿದಿದೆ. ಅದರ ಷೇರುಸಂಪತ್ತು 5.67 ಲಕ್ಷ ಕೋಟಿ ರೂಗೆ ಇಳಿಯಿತು. ಆದರೆ ಎಸ್ಬಿಐನ 5.61 ಲಕ್ಷ ಕೋಟಿ ರೂ ಷೇರುಸಂಪತ್ತಿಗಿಂತ ಎಲ್ಐಸಿಯದ್ದು ಹೆಚ್ಚೇ ಇದೆ.
ಮೊದಲ ಬಾರಿಗೆ ಐಪಿಒ ಬೆಲೆ ದಾಟಿದ ಎಲ್ಐಸಿ ಷೇರು
ಭಾರತದಲ್ಲಿ ಅತಿ ನಿರೀಕ್ಷೆ ಮೂಡಿಸಿ ನಿರಾಸೆ ತಂದಿತ್ತ ಷೇರುಗಳಲ್ಲಿ ಎಲ್ಐಸಿಯದ್ದೂ ಒಂದು. 2022ರ ಮೇ 4ರಂದು ಎಲ್ಐಸಿ ಐಪಿಒ ಆರಂಭವಾಗಿತ್ತು. 902 ರೂನಂತೆ ಷೇರುಗಳು ಬಿಕರಿಯಾದವು. ರೀಟೇಲ್ ಐಪಿಒ ದರ 904 ರೂ ಆಗಿತ್ತು. ಅದಾದ ಬಳಿಕ ಎಲ್ಐಸಿ ಷೇರು ಮೌಲ್ಯ ಸತತವಾಗಿ ಕಡಿಮೆ ಆಗುತ್ತಾ ಹೋಗಿದೆ. ಒಂದು ಹಂತದಲ್ಲಿ ಅದರ ಷೇರುಬೆಲೆ 534 ರುಪಾಯಿಗೆ ಕುಸಿದುಹೋಗಿತ್ತು.
2023ರ ಮಾರ್ಚ್ ತಿಂಗಳ ಬಳಿಕ ಎಲ್ಐಸಿಗೆ ಶುಕ್ರದೆಸೆ ಬಂದಿದೆ. ಅದರಲ್ಲೂ ನವೆಂಬರ್ ಮೂರನೇ ವಾರದಿಂದ ಎಲ್ಐಸಿ ಷೇರುಬೆಲೆ ನಾಗಾಲೋಟ ನಡೆಸಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆದ ಬಳಿಕ ಮೊದಲ ಬಾರಿಗೆ 904 ರುಗಳ ಐಪಿಒ ಬೆಲೆಯನ್ನು ಇಂದು (ಜ. 17) ಮೊದಲ ಬಾರಿಗೆ ದಾಟಿತು.
ಇದನ್ನೂ ಓದಿ: MS Dhoni: ಕ್ರಿಕೆಟಿಗ ಎಂಎಸ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಬಿಸಿನೆಸ್ ಪಾರ್ಟ್ನರ್ಸ್; ಏನಿದು ಕೇಸ್?
ಎಲ್ಐಸಿ ಲಾಭದಲ್ಲಿ ಹೆಚ್ಚಳ
ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯಾದ ಎಲ್ಐಸಿಯ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. 2023-24ರ ಹಣಕಾಸು ವರ್ಷದ ಮೊದಲ ಆರು ತಿಂಗಳು (ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ) 17,469 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಹೊಸ ವೈಯಕ್ತಿಕ ಪಾಲಿಸಿ ಪ್ರೀಮಿಯಮ್ ಮೊತ್ತವೇ ಅವಧಿಯಲ್ಲಿ ಶೇ. 2.65ರಷ್ಟು ಹೆಚ್ಚಾಗಿ 25,184 ಕೋಟಿ ರೂ ಆಗಿದೆ. ಹೊಸ ವೈಯಕ್ತಿಕ ಪಾಲಿಸಿ ಪ್ರೀಮಿಯಮ್ ಎಂದರೆ ಪಾಲಿಸಿ ಪಡೆದ ವ್ಯಕ್ತಿಗಳು ಪಾವತಿಸುವ ಮೊದಲ ಪ್ರೀಮಿಯಮ್ ಆಗಿದೆ. ಅಂದರೆ, ಹೊಸ ಪಾಲಿಸಿಗಳು ಸೇಲ್ ಆಗಿರುವುದರ ಸೂಚಕ ಇದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ