ಬ್ರೆಂಟ್ ಕಚ್ಚಾ ತೈಲವು ಅಂತಾರಾಷ್ಟ್ರೀಯ ಸೂಚ್ಯಂಕದಲ್ಲಿ ಬ್ಯಾರೆಲ್ಗೆ 110 ಯುಎಸ್ಡಿ ಆಗಿದ್ದು, ಇದು ಎಂಟು ವರ್ಷದಲ್ಲೇ ಗರಿಷ್ಠ ಮಟ್ಟವಾಗಿದೆ. ಅಂದ ಹಾಗೆ ಒಂದು ಬ್ಯಾರೆಲ್ಗೆ 158.987 ಲೀಟರ್ ಇರುತ್ತದೆ. ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿಗಳ ಸದಸ್ಯರು ತುರ್ತು ದಾಸ್ತಾನಿನಿಂದ 60 ಮಿಲಿಯನ್ ಬ್ಯಾರೆಲ್ ಬಿಡುಗಡೆ ಮಾಡಲು ಒಪ್ಪಿದ ಮೇಲೆ ತೈಲ ಬೆಲೆ ತೀಕ್ಷ್ಣವಾಗಿ ಏರಿಕೆ ಕಂಡಿದೆ. ಆದರೆ ಇದರಿಂದ ಕಚ್ಚಾ ಫ್ಯೂಚರ್ಸ್ ಏರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಕಚ್ಚಾ ಫ್ಯೂಚರ್ಸ್ ಬ್ಯಾರೆಲ್ಗೆ 109 ಯುಎಸ್ಡಿ ಸಮೀಪ ಏರಿಕೆ ಆಗಿದೆ. ವಿಶ್ವದಾದ್ಯಂತ ಎರಡನೇ ಅತಿ ದೊಡ್ಡ ತೈಲ ರಫ್ತುದಾರ ದೇಶ ರಷ್ಯಾ. 2014ರ ಜುಲೈ ನಂತರ ಮೊದಲ ಬಾರಿಗೆ ತೈಲ ದರ ಬ್ಯಾರೆಲ್ಗೆ 100 ಯುಎಸ್ಡಿ ದಾಟಿದೆ. ಉಕ್ರೇನ್ ವಿರುದ್ಧ ರಷ್ಯಾದಿಂದ “ಸೇನಾ ಕಾರ್ಯಾಚರಣೆ” (Russia- Ukraine War) ಆರಂಭಿಸಿದ ಮೇಲೆ ಈ ಬೆಳವಣಿಗೆ ಆಗಿದೆ. ಪುಟಿನ್ ಆಕ್ರಮಣವನ್ನು ತಡೆಯಲು ಪಾಶ್ಚಾತ್ಯ ರಾಷ್ಟ್ರಗಳು ರಷ್ಯನ್ ಕಂಪೆನಿಗಳು ನಿರ್ಬಂಧ ಹೇರಿದ್ದರೂ ತೈಲ ವ್ಯಾಪಾರಕ್ಕೆ ನಿರ್ಬಂಧದಿಂದ ವಿನಾಯಿತಿ ಇದೆ. ಆದರೆ ಏರಿಳಿತದ ಸನ್ನಿವೇಶವನ್ನು ತಡೆಯಲು ಖರೀದಿದಾರರು ರಷ್ಯನ್ ತೈಲವನ್ನು ತಿರಸ್ಕರಿಸಿದ್ದಾರೆ.
ತೈಲ ಬೆಲೆ ಏರಿಕೆ ಮುಂದುವರಿಕೆ
ಅಮೆರಿಕ ಮತ್ತು 30 ಇತರ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (IEA) ಮಂಗಳವಾರದಂದು 60 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿದೆ. ರಷ್ಯಾ- ಉಕ್ರೇನ್ ಯುದ್ಧದಿಂದ ಉಂಟಾಗಿರುವ ತೈಲ ಬಿಕ್ಕಟ್ಟನ್ನು ನಿವಾರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. “ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರ ನಿರ್ಧಾರದಿಂದಾಗಿ ಆಗಿರುವ ಜಾಗತಿಕವಾಗಿ ಇಂಧನ ಪೂರೈಕೆ ವ್ಯತ್ಯಯವನ್ನು ಮಿತಿಗೊಳಿಸಲು ನಮಗೆ ಲಭ್ಯ ಇರುವ ಎಲ್ಲ ಸಾಧನವನ್ನು ಬಳಸುವುದಕ್ಕೆ ನಾವು ಸಿದ್ಧವಾಗಿದ್ದೇವೆ,” ಎಂದು ಅಮೆರಿಕ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಐಇಎ ಸಭೆಯ ನಂತರ ಹೇಳಿದ್ದಾರೆ.
ಐಇಎ ಕಾರ್ಯ ನಿರ್ವಾಹಕ ನಿರ್ದೇಶ ಫತಿಹ್ ಬಿರೊಲ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಮಾರುಕಟ್ಟೆ “ಬಹಳ ಗಂಭೀರ ಮತ್ತು ನಮ್ಮ ಪೂರ್ಣ ಗಮನವನ್ನು” ಬೇಡುತ್ತಿದೆ. “ಜಾಗತಿಕ ಇಂಧನ ಭದ್ರತೆ ಆತಂಕದಲ್ಲಿ ಇದೆ. ವಿಶ್ವದ ಆರ್ಥಿಕತೆಯು ಚೇತರಿಕೆ ಹಂತದಲ್ಲಿ ಇರುವಾಗ ಅಪಾಯ ಎದುರಾಗಿದೆ,” ಎಂದು ಬಿರೊಲ್ ಸೇರಿಸಿದ್ದಾರೆ.
ರಷ್ಯಾ- ಉಕ್ರೇನ್ ಯುದ್ಧ ಭಾರತ ತೈಲ ಬೆಲೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ದೇಶಗಳಲ್ಲಿ ರಷ್ಯಾವೂ ಒಂದು. ಜಾಗತಿಕ ತೈಲ ಉತ್ಪಾದನೆಯ ಶೇ 10ರಷ್ಟು ರಷ್ಯಾದಿಂದಲೇ ಆಗುತ್ತದೆ. ಕೊವಿಡ್-19 ಬಿಕ್ಕಟ್ಟಿನಿಂದ ಚೇತರಿಸಿಕೊಂಡು ಅಗತ್ಯ ಪ್ರಮಾಣದಲ್ಲಿ ಬೇಡಿಕೆಗೆ ತಕ್ಕಷ್ಟು ತೈಲ ಪೂರೈಕೆಗೆ ಜಾಗತಿಕವಾಗಿಯೇ ಸಾಧ್ಯವಾಗುತ್ತಿಲ್ಲ. ರಾಜಕೀಯ ಮೇಲಾಟದ ಮಧ್ಯೆ ಪೂರೈಕೆ ವ್ಯತ್ಯಯವು ಭಾರತದ ಆತಂಕಕ್ಕೆ ಕಾರಣ ಆಗಬಾರದು. 2021ನೇ ಇಸವಿಯಲ್ಲಿ ಒಟ್ಟಾರೆ ಆಮದಿನ ಪೈಕಿ ಶೇ 1ರಷ್ಟು ರಷ್ಯಾದಿಂದಲೇ ಬಂದಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ತೀಕ್ಷ್ಣ ಹೆಚ್ಚಳವು ದೇಶೀ ತೈಲ ದರದ ಮೇಲೆ ಪ್ರಭಾವ ಬೀರುತ್ತದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಒಟ್ಟಾರೆ ಸೇರಿ ದೇಶೀ ಮಾರುಕಟ್ಟೆಯ ಶೇ 90ಕ್ಕೂ ಹೆಚ್ಚು ನಿಯಂತ್ರಣ ಮಾಡುತ್ತವೆ. ಅವುಗಳು ಪ್ರತಿ ದಿನ ದರ ಪರಿಷ್ಕರಣೆ ಮಾಡಬೇಕು. ಕಳೆದ ಮೂರು ತಿಂಗಳಿಂದ ಅವುಗಳ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.
ತಜ್ಞರು ಹೇಳುವಂತೆ, ಐದು ರಾಜ್ಯಗಳ ಚುನಾವಣೆ ಮುಗಿದ ಮೇಲೆ ಮತ್ತೆ ದರ ಪರಿಷ್ಕರಣೆ ಶುರು ಆಗಲಿದೆ. ಈ ಹಿಂದೆ ಕೂಡ ವಿಧಾನಸಭೆ ಚುನಾವಣೆಗಳಿಗೂ ಮುನ್ನ ದರ ಪರಿಷ್ಕರಣೆ ನಿಲ್ಲುತ್ತಿತ್ತು. ರಾಜಕೀಯ ಮೇಲಾಟ ಮತ್ತು ರಷ್ಯಾ- ಉಕ್ರೇನ್ ಭಾಗದಲ್ಲಿನ ಪೂರೈಕೆ ವ್ಯತ್ಯಯ ಈ ಕಾರಣಗಳಿಗಾಗಿ ವಿಧಾನಸಭೆ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್- ಡೀಸೆಲ್ ಬೆಲೆಯು ಭಾರತದಲ್ಲಿ ಏರಿಕೆ ಆಗಲಿದೆ.
ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್ಗೆ ಎಂಥ ಘಾತ!