Goldman Sachs: ತಿಂಗಳಿಗೆ ಬಾಡಿಗೆ ಬರೋಬ್ಬರಿ 4 ಕೋಟಿಗೂ ಹೆಚ್ಚು; ಭಾರತದಲ್ಲಿ ಗೋಲ್ಡ್​ಮನ್ ಸ್ಯಾಕ್ಸ್ ದುಬಾರಿ ಕಚೇರಿ

Monthly Rent of Over Rs 4 Cr: ಜಾಗತಿಕ ಬ್ಯಾಂಕಿಂಗ್ ದೈತ್ಯ ಗೋಲ್ಡ್​ಮನ್ ಸ್ಯಾಕ್ಸ್ ಸರ್ವಿಸಸ್ ಪ್ರೈ ಲಿ ಸಂಸ್ಥೆ ಹೈದರಾಬಾದ್​ನ ನಾಲೆಡ್ಜ್ ಸಿಟಿಯಲ್ಲಿ 12 ಅಂತಸ್ತುಗಳ ಕಟ್ಟಡದಲ್ಲಿ 9 ಮಹಡಿಗಳನ್ನು ಬಾಡಿಗೆ ಪಡೆದುಕೊಂಡಿದೆ. ತಿಂಗಳಿಗೆ ರೆಂಟ್ ಬರೋಬ್ಬರಿ 4.14 ಕೋಟಿ ರೂ.

Goldman Sachs: ತಿಂಗಳಿಗೆ ಬಾಡಿಗೆ ಬರೋಬ್ಬರಿ 4 ಕೋಟಿಗೂ ಹೆಚ್ಚು; ಭಾರತದಲ್ಲಿ ಗೋಲ್ಡ್​ಮನ್ ಸ್ಯಾಕ್ಸ್ ದುಬಾರಿ ಕಚೇರಿ
ಗೋಲ್ಡ್​ಮನ್ ಸ್ಯಾಕ್ಸ್

Updated on: Jul 13, 2023 | 4:09 PM

ಹೈದರಾಬಾದ್: ಅಮೆರಿಕದ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ದೈತ್ಯ ಗೊಲ್ಡ್​ಮನ್ ಸ್ಯಾಕ್ಸ್ ಸರ್ವಿಸಸ್ (Goldman Sachs Services Pvt Ltd) ಸಂಸ್ಥೆ ಹೈದರಾಬಾದ್​ನಲ್ಲಿ ಕಟ್ಟಡ ಬಾಡಿಗೆಗೆ ಪಡೆದುಕೊಂಡಿದೆ. ಗೋಲ್ಡ್​ಮನ್ ಸ್ಯಾಕ್ಸ್ ಸಂಸ್ಥೆ 9 ಅಂತಸ್ತು ಇರುವ 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡವನ್ನು 117 ತಿಂಗಳಿಗೆ ಬಾಡಿಗೆಗೆ ಪಡೆದಿದೆ. ಅಂದರೆ ಸುಮಾರು 10 ವರ್ಷ ಈ ಕಟ್ಟಡವನ್ನು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಬಳಸಲಿದೆ. ತಿಂಗಳಿಗೆ ಬಾಡಿಗೆ ಬರೋಬ್ಬರಿ 4.14 ಕೋಟಿ ರೂ ಎಂದು ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಹೈದರಾಬಾದ್​ನ ನಾಲೆಜ್ ಸಿಟಿಯಲ್ಲಿರುವ 12 ಮಹಡಿಯ ಕಟ್ಟಡದಲ್ಲಿ ಗ್ರೌಂಡ್ ಫ್ಲೋರ್ ಸೇರಿದಂತೆ 8 ಅಂತಸ್ತಿನವರೆಗೂ 9 ಫ್ಲೋರ್​ಗಳನ್ನು ಗೋಲ್ಡ್​ಮನ್ ಸ್ಯಾಕ್ಸ್ ಪಡೆದುಕೊಂಡಿದೆ. ದೇವಭೂಮಿ ರಿಯಾಲ್ಟರ್ಸ್ ಪ್ರೈ ಲಿ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡ ಒಟ್ಟು 5.09 ಲಕ್ಷ ಚದರ ಅಡಿ ವಿಸ್ತೀರ್ಣದ್ದಾಗಿದೆ. ಇದರಲ್ಲಿ ಗೊಲ್ಡ್​ಮ್ಯಾನ್ ಸ್ಯಾಕ್ಸ್ ಕಂಪನಿ ಪಡೆದಿರುವ 9 ಅಂತಸ್ತುಗಳ ಒಟ್ಟು ವಿಸ್ತೀರ್ಣ 3,51,109 ಚದರ ಅಡಿ ಎನ್ನಲಾಗಿದೆ.

ಇದನ್ನೂ ಓದಿHDFC: ಯುಪಿಐ ಕ್ಯೂಅರ್ ಕೋಡ್​ಗೆ ಡಿಜಿಟಲ್ ರುಪಾಯಿ ಲಿಂಕ್ ಮಾಡಿದ ಮೊದಲ ಬ್ಯಾಂಕ್ ಎಚ್​ಡಿಎಫ್​ಸಿ

ಚದರಡಿ ಲೆಕ್ಕದಲ್ಲಿ ಬಾಡಿಗೆ ನಿಗದಿಯಾಗಿದೆ. ಮೊದಲ 36 ತಿಂಗಳಿಗೆ ಒಂದು ಚದರಡಿ ಜಾಗಕ್ಕೆ 118 ರು ಮಾಸಿಕ ಬಾಡಿಗೆ ಇರುತ್ತದೆ. ಮುಂದಿನ 36 ತಿಂಗಳಿಗೆ ಇದು 128.2 ರೂಗೆ ಏರುತ್ತದೆ. ನಂತರದ 36 ತಿಂಗಳಿಗೆ 139.9 ರೂ ಹಾಗೂ ಕೊನೆಯ 9 ತಿಂಗಳಿಗೆ 103.4 ರೂನಂತೆ ಬಾಡಿಗೆ ನಿಗದಿಯಾಗಿದೆ. ಅದರಂತೆ ಸದ್ಯ ಮೊದಲ 3 ವರ್ಷ ಗೋಲ್ಡ್​ಮನ್ ಸ್ಯಾಕ್ಸ್ ಸರ್ವಿಸಸ್ ತಿಂಗಳಿಗೆ 4.14 ಕೋಟಿ ರೂನಷ್ಟು ಬಾಡಿಗೆ ಪಾವತಿಸುತ್ತದೆ.

ಈ ಕಟ್ಟಡ ನಿರ್ಮಿಸಿದ ದೇವಭೂಮಿ ರಿಯಾಲ್ಟರ್ಸ್ ಸಂಸ್ಥೆ ಸತ್ವ ಗ್ರೂಪ್​ಗೆ ಸೇರಿದ್ದು. ಸಲಾರ್​ಪುರಿಯಾ ಸತ್ವ ಹೈದರಾಬಾದ್, ಬೆಂಗಳೂರು ಮೊದಲಾದೆಡೆ ಪ್ರಮುಖ ಜಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದೆ.

ಇದನ್ನೂ ಓದಿDeepavali Train: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಬೇಕಾ? ರೈಲು ಟಿಕೆಟ್ ಬುಕಿಂಗ್ ಈಗಲೇ ಶುರು

ಭಾರತದ ಅತ್ಯಂತ ದುಬಾರಿ ವಾಣಿಜ್ಯ ಕಟ್ಟಡಗಳು

ಇತ್ತೀಚೆಗೆ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್​ಗಳು ಶುರುವಾಗಿದ್ದವು. ಎರಡೂ ಕೂಡ ಸುಮಾರು 40 ಲಕ್ಷ ರೂ ಆಸುಪಾಸಿನ ಮಾಸಿಕ ಬಾಡಿಗೆ ಹೊಂದಿವೆ. ಈಗ ಹೈದರಾಬಾದ್​ನಲ್ಲಿ ಗೋಲ್ಡ್​ಮನ್ ಸ್ಯಾಕ್ಸ್ ಸಂಸ್ಥೆ 4 ಕೋಟಿಗೂ ಹೆಚ್ಚು ಬಾಡಿಗೆಗೆ ಕಟ್ಟಡವನ್ನು ಪಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us