ನವದೆಹಲಿ, ಫೆಬ್ರುವರಿ 13: ಸಾಮಾನ್ಯವಾಗಿ ನಾವು ನೀವು ಹಾಗು ಹೆಚ್ಚಿನ ಮಂದಿ ಬೆಳಗ್ಗೆ ಎದ್ದ ಬಳಿಕ ಪೇಪರ್ ಓದುವುದೋ, ಮೊಬೈಲ್ ನೋಡುವುದೋ, ವಾಕಿಂಗ್ ಹೋಗುವುದೋ ಇನ್ನೇನಾದರೂ ಮಾಡುತ್ತೇವೆ. ದೊಡ್ಡ ಮಂದಿ ಏನು ಮಾಡ್ತಾರೆ? ದಿನವಿಡೀ ಬ್ಯುಸಿ ಇರುವ ಗೂಗಲ್ ಇತ್ಯಾದಿ ಟೆಕ್ ಕಂಪನಿಗಳ ಹಿರಿಯರು ಏನು ಮಾಡಬಹುದು? ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಅವರು ಬೆಳಗ್ಗೆ ಎದ್ದು ಮಾಡುವ ಮೊದಲ ಕೆಲಸಗಳಲ್ಲಿ ಟೆಕ್ಮೀಮ್ (Techmeme) ಎಂಬ ಟೆಕ್ ಸುದ್ದಿಗಳ ವೆಬ್ಸೈಟ್ ಅನ್ನು ನೋಡುವುದೂ ಒಂದು. 51 ವರ್ಷದ ಸುಂದರ್ ಪಿಚೈ ಅವರ ದಿನಚರಿಯಲ್ಲಿ ಪೇಪರ್ ಕೂಡ ಪ್ರಮುಖವಾದುದು.
ಸುಂದರ್ ಪಿಚೈ ಏಳೆಂಟು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಬೆಳಗಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದರು. ಆಗ ಗೂಗಲ್ ಸಿಇಒ ಅವರು ಬೆಳಗ್ಗೆ 6:30 ಅಥವಾ 7 ಗಂಟೆಗೆ ಏಳುತ್ತಿದ್ದರು. ಮನೆಗೆ ವಾಲ್ ಸ್ಟ್ರೀಟ್ ಜರ್ನಲ್ ದಿನಪತ್ರಿಕೆ ಬರುತ್ತಿತ್ತು. ಚಹಾ ಕುಡಿಯುತ್ತಾ ಅದನ್ನು ಓದುತ್ತಿದ್ದರು. ಬಳಿಕ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಆನ್ಲೈನ್ ಆವೃತ್ತಿಯನ್ನು ಓದುತ್ತಿದ್ದರು. ಬೆಳಗಿನ ತಿಂಡಿಗೆ ಅವರು ಬ್ರೆಡ್ ಟೋಸ್ಟ್ ಮತ್ತು ಆಮ್ಲೆಟ್ ಸೇವಿಸುತ್ತಿದ್ದರು.
ಇದನ್ನೂ ಓದಿ: ವಾಟ್ಸ್ಆ್ಯಪ್ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ
ಇತ್ತೀಚೆಗೆ ಅವರು ತಮ್ಮ ಬೆಳಗಿನ ಓದಿಗೆ ಟೆಕ್ಮೀಮ್ ಅನ್ನು ಸೇರಿಸಿಕೊಂಡಂತಿದೆ. ಟೆಕ್ಮೀಮ್ ಅನ್ನು ಗೂಗಲ್ ಸಿಇಒ ಸುಂದರ್ ಪಿಚೈ ಮಾತ್ರವಲ್ಲ, ಹಲವು ದೊಡ್ಡದೊಡ್ಡ ಮಂದಿಗೂ ಇದು ಓದಿನ ಸರಕಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ, ಟ್ವಿಟ್ಟರ್ನ ಮಾಜಿ ಸಿಇಒ ಡಿಕ್ ಕಾಸ್ಟೊಲೊ ಮೊದಲಾದ ಕೆಲ ಪ್ರಮುಖ ಎಕ್ಸಿಕ್ಯೂಟಿವ್ಗಳು ತಾವು ಟೆಕ್ ಮೀಮ್ ವೆಬ್ಸೈಟ್ ನೋಡುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ.
ಟೆಕ್ಮೀಮ್ ಎಂಬುದು ಟೆಕ್ ಸುದ್ದಿಗಳ ಅಗ್ರಿಗೇಟರ್ ವೆಬ್ಸೈಟ್. ಗೂಗಲ್ ನ್ಯೂಸ್ನಲ್ಲಿ ವಿವಿಧ ವೆಬ್ಸೈಟ್ಗಳ ಸುದ್ದಿಗಳು ಬರುವಂತೆ ಟೆಕ್ಮೀಮ್ನಲ್ಲಿ ಪ್ರಮುಖ ಟೆಕ್ ವೆಬ್ಸೈಟ್ಗಳಿಂದ ಸುದ್ದಿಗಳನ್ನು ಹೆಕ್ಕಿ ನೀಡಲಾಗಿರುತ್ತದೆ. ಆಳವಾದ ವಿವರಣೆ, ಸ್ಪಷ್ಟ ನಿರೂಪಣೆ ಇರುವ ಸುದ್ದಿಗಳ ಸಂಗ್ರಹ ಇದರಲ್ಲಿರುತ್ತದೆ.
ಇದನ್ನೂ ಓದಿ: ಚೀನಾ ಕಂಪನಿಗಳನ್ನು ಹೀಗೆ ಗುರಿ ಮಾಡಿದರೆ ಸರಬರಾಜುದಾರರು ಭಾರತಕ್ಕೆ ಬರಲು ಭಯಬೀಳಬಹುದು: ಶಿಯೋಮಿ ಕಳವಳ
ಇಂಟೆಲ್ನ ಮಾಜಿ ಎಂಜಿನಿಯರ್ ಗೇಬ್ ರಿವೆರಾ ಎಂಬುವವರು ಈ ವೆಬ್ಸೈಟ್ನ ಸಂಸ್ಥಾಪಕ. ಟ್ರೆಂಡಿಂಗ್ ಟೆಕ್ ಸುದ್ದಿಗಳನ್ನು ಪ್ರಸ್ತುತಪಡಿಸುವುದು ಟೆಕ್ಮೀಮ್ನ ವೈಶಿಷ್ಟ್ಯ. ಇದರ ಸಂಪಾದಕೀಯ ಬಳಗದಲ್ಲಿ ಭಾರತೀಯರು ಇದ್ದಾರೆ. ಬೆಂಗಳೂರಿನ ಶ್ರೀಕರ್ ದನಕೋಟಿ, ಆದರ್ಶ್ ಮಾಥಮ್, ಮಹೆಂದ್ರ ಪಾಲ್ಸುಲೆ ಅವರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ