ಷೇರುಗಳ ಮೇಲಿನ ಎಲ್​ಟಿಸಿಜಿ ತೆರಿಗೆ ದರ ಪರಿಷ್ಕರಣೆಗೆ ಕೇಂದ್ರ ಆಲೋಚನೆ; ಬಜೆಟ್​ನೊಳಗೆ ನಿರ್ಧಾರ ಸಾಧ್ಯತೆ

ಭಾರತೀಯ ಷೇರುಪೇಟೆಯನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ವಿದೇಶಿ ಹೂಡಿಕೆದಾರರನ್ನು ಸೆಳೆಯಲು, ಷೇರುಗಳ ಮೇಲಿನ ಎಲ್‌ಟಿಸಿಜಿ (LTCG) ತೆರಿಗೆ ರಚನೆಯನ್ನು ಮುಂಬರುವ ವಾರಗಳಲ್ಲಿ ಕೇಂದ್ರ ಸರ್ಕಾರವು ಮರುಪರಿಶೀಲಿಸುವ ಸಾಧ್ಯತೆಯಿದೆ. ಸದ್ಯ, ಷೇರುಗಳ ಮಾರಾಟದಿಂದ ಬರುವ ಲಾಭದ ಮೇಲೆ ಶೇ. 12.5ರಷ್ಟು ಎಲ್​ಟಿಸಿಜಿ ತೆರಿಗೆ ವಿಧಿಸಲಾಗುತ್ತಿದೆ.

ಷೇರುಗಳ ಮೇಲಿನ ಎಲ್​ಟಿಸಿಜಿ ತೆರಿಗೆ ದರ ಪರಿಷ್ಕರಣೆಗೆ ಕೇಂದ್ರ ಆಲೋಚನೆ; ಬಜೆಟ್​ನೊಳಗೆ ನಿರ್ಧಾರ ಸಾಧ್ಯತೆ
ತೆರಿಗೆ
Image Credit source: Getty Images

Updated on: Oct 26, 2026 | 7:16 PM

ನವದೆಹಲಿ, ಅಕ್ಟೋಬರ್ 26: ಭಾರತೀಯ ಷೇರು ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿಸಲು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FPIs) ನಿರಂತರ ಹೊರಹರಿವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಪ್ರಮುಖ ಹೆಜ್ಜೆಯೊಂದನ್ನು ಇಡುವ ಸಾಧ್ಯತೆಯಿದೆ. ಷೇರುಗಳ ಮಾರಾಟದಿಂದ ಬರುವ ದೀರ್ಘಕಾಲೀನ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು (LTCG Tax) ಮುಂಬರುವ ವಾರಗಳಲ್ಲಿ ಮರುಪರಿಶೀಲಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಪ್ರಸ್ತುತ, ಲಿಸ್ಟೆಡ್ ಷೇರುಗಳ ಮಾರಾಟದ ಮೇಲಿನ ದೀರ್ಘಕಾಲೀನ ಬಂಡವಾಳ ಲಾಭಕ್ಕೆ ಇಂಡೆಕ್ಸೇಶನ್ ಬೆನಿಫಿಟ್ ರಹಿತವಾಗಿ ಶೇ. 12.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹಣಕಾಸು ವರ್ಷದಲ್ಲಿ ₹1.25 ಲಕ್ಷಕ್ಕಿಂತ ಹೆಚ್ಚಿನ ಲಾಭಕ್ಕೆ ಈ ನಿಯಮ ಅನ್ವಯಿಸುತ್ತದೆ. ಲಿಸ್ಟ್ ಆಗಿಲ್ಲದ ಷೇರುಗಳಿಗೆ ಈ ವಿನಾಯಿತಿ ಮಿತಿ ಇರುವುದಿಲ್ಲ. ಅಂದರೆ, ಅನ್​ಲಿಸ್ಟೆಡ್ ಷೇರುಗಳ ಮಾರಾಟದಿಂದ ಒಂದು ವರ್ಷದಲ್ಲಿ ₹1.25 ಲಕ್ಷಕ್ಕಿಂತ ಕಡಿಮೆ ಲಾಭ ಬಂದರೂ ಅದಕ್ಕೆ ಎಲ್​ಟಿಸಿಜಿ ತೆರಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: ಇ100 ಇಂಧನ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್; ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸರ್ಕಾರದ ತಿದ್ದುಪಡಿ

ಇನ್ನು, ಇಂಡೆಕ್ಸೇಶನ್ ಬೆನಿಫಿಟ್ ಎಂದರೆ, ಮೌಲ್ಯ ಸವಕಳಿಯನ್ನು ಪರಿಗಣಿಸುವುದು. ಅದರೆ, ಹಣದುಬ್ಬರವನ್ನು ಕಳೆದು ಉಳಿಯುವ ಲಾಭಕ್ಕೆ ತೆರಿಗೆ ಹಾಕಲಾಗುತ್ತದೆ. ಷೇರುಗಳ ಮಾರಾಟದಿಂದ ಬರುವ ಲಾಭದ ಮೇಲೆ ಈ ಇಂಡೆಕ್ಸೇಶನ್ ಬೆನಿಫಿಟ್ ಇರುವುದಿಲ್ಲ. ಸರ್ಕಾರವು ಈ ಬಜೆಟ್​ಗೆ ಮುನ್ನ ಎಲ್​ಟಿಸಿಜಿ ತೆರಿಗೆ ದರ ಪರಿಷ್ಕರಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ತೆರಿಗೆ ಎಷ್ಟು ಇಳಿಯಬಹುದು, ಇಂಡೆಕ್ಸೇಶನ್ ಬೆನಿಫಿಟ್ ಅನ್ನೂ ಒಳಗೊಳ್ಳಲಾಗುತ್ತದಾ, ವಾರ್ಷಿಕ ವಿನಾಯಿತಿ ಮಿತಿ ₹1.25 ಲಕ್ಷಕ್ಕಿಂತ ಹೆಚ್ಚಿಸಲಾಗುತ್ತದಾ ಎಂಬುದು ಸದ್ಯಕ್ಕಿರುವ ಪ್ರಶ್ನೆಗಳಾಗಿವೆ.

ಎಲ್​ಟಿಸಿಜಿ ತೆರಿಗೆ ಪರಾಮರ್ಶೆಗೆ ಕಾರಣವೇನು?

ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸ್ಪರ್ಧಿಸಲು ತೆರಿಗೆ ರಚನೆಯನ್ನು ಸರಳಗೊಳಿಸುವ ಅಗತ್ಯತೆಯ ಕುರಿತು ಉದ್ಯಮದ ಪರಿಣಿತರು, ಸೆಬಿ (SEBI) ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳ ನಡುವೆ ಸಭೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ತೆರಿಗೆ ದರಗಳ ಕುರಿತು ಮರುಪರಿಶೀಲನಾ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಲೆ ಪರಿಷ್ಕರಣೆ, ಕಡ್ಡಾಯ ಇಕೆವೈಸಿ ಸೇರಿದಂತೆ ನವೆಂಬರ್ 1ರಿಂದ ಹೊಸ ಎಲ್​ಪಿಜಿ ನಿಯಮಗಳು

ಕಳೆದ ಅಕ್ಟೋಬರ್ 13ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್‌ಟಿಸಿಜಿ ತೆರಿಗೆಯನ್ನು ತೆಗೆದುಹಾಕುವ ಕುರಿತಾದ ಅಭಿಪ್ರಾಯಗಳನ್ನು ಆಲಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರು. ಆದಾಗ್ಯೂ, ಈ ಕುರಿತು ಅಂತಿಮ ಅಧಿಕೃತ ನಿರ್ಧಾರ ಇನ್ನೂ ಹೊರಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us