Coal India: ಕೋಲ್ ಇಂಡಿಯಾದ 92 ಲಕ್ಷ ಷೇರುಗಳ ಮಾರಾಟ; ಉದ್ಯೋಗಿಗಳಿಗೆ ಆಫರ್; ಇಲ್ಲಿದೆ ಡೀಟೇಲ್ಸ್

|

Updated on: Jun 19, 2023 | 3:41 PM

Government Selling Coal India Shares to Employees: ಕೋಲ್ ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಪಾಲಿನಲ್ಲಿ ಶೇ. 0.15ರಷ್ಟಿರುವ 92.44 ಲಕ್ಷ ಷೇರುಗಳನ್ನು ಉದ್ಯೋಗಿಗಳಿಗೆ ಮಾರಾಟ ಮಾಡಲಾಗುತ್ತಿದೆ. 226.10 ರೂ ಬೆಲೆಗೆ ಈ ಷೇರುಗಳ ಬಿಕರಿಯಾಗುತ್ತಿದೆ.

Coal India: ಕೋಲ್ ಇಂಡಿಯಾದ 92 ಲಕ್ಷ ಷೇರುಗಳ ಮಾರಾಟ; ಉದ್ಯೋಗಿಗಳಿಗೆ ಆಫರ್; ಇಲ್ಲಿದೆ ಡೀಟೇಲ್ಸ್
ಕೋಲ್ ಇಂಡಿಯಾ
Follow us on

ನವದೆಹಲಿ: ಒಳ್ಳೆಯ ಆರೋಗ್ಯದಲ್ಲಿರುವ ಸರ್ಕಾರಿ ಸಂಸ್ಥೆಗಳ ಪೈಕಿ ಒಂದೆನಿಸಿದ ಕೋಲ್ ಇಂಡಿಯಾ(Coal India) 92.44 ಲಕ್ಷ ಷೇರುಗಳನ್ನು ಸರ್ಕಾರ ಬಿಕರಿ ಮಾಡುತ್ತಿದೆ. ಕೋಲ್ ಇಂಡಿಯಾ ಸಂಸ್ಥೆಯ ಉದ್ಯೋಗಿಗಳಿಗೇ ಈ ಷೇರುಗಳನ್ನು ಆಫರ್ ಮಾಡಲಾಗುತ್ತಿದೆ. ಕೋಲ್ ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಪಾಲಿನಲ್ಲಿ 92.44 ಲಕ್ಷ ಷೇರುಗಳು ಶೇ. 0.15ರಷ್ಟು ಆಗುತ್ತವೆ. ಇಷ್ಟೂ ಷೇರುಗಳನ್ನು ಕೆಲ ಆಯ್ದ ಉದ್ಯೋಗಿಗಳಿಗೆ (Eligible Employees) ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

ಆಫರ್ ಫಾರ್ ಸೇಲ್ (OFS) ಮೂಲಕ ಈ ಷೇರುಗಳನ್ನು ಕೋಲ್ ಇಂಡಿಯಾ ಉದ್ಯೋಗಿಗಳಿಗೆ ಮಾರಲಾಗುತ್ತಿದೆ. 10 ರೂ ಫೇಸ್ ವ್ಯಾಲ್ಯೂ ಇರುವ 92,44,092 ಈಕ್ವಿಟಿ ಷೇರುಗಳನ್ನು 226.10 ರೂ ಬೆಲೆಗೆ ಅರ್ಹ ಉದ್ಯೋಗಿಗಳಿಗೆ ಮಾರಲು ಆಫರ್ ಕೊಡಲಾಗಿದೆ. ಜೂನ್ 21ರಿಂದ ಜೂನ್ 23ರವರೆಗೆ, ಇದೇ ಬುಧವಾರದಿಂದ ಶುಕ್ರವಾರದವರೆಗೆ ಒಎಫ್​ಎಸ್ ಆಫರ್ ಇರಲಿದೆ.

ಇದನ್ನೂ ಓದಿAdani Trainman: ಅದಾನಿಯಿಂದ ಟ್ರೈನ್​ಮ್ಯಾನ್ ಖರೀದಿ; ರೈಲ್ವೆ ಇಲಾಖೆ ಆದಾಯಕ್ಕೆ ಹೊಡೆತ ಬೀಳುತ್ತಾ? ಛೇ ಇಲ್ಲ ಎನ್ನುತ್ತಿದೆ ಐಆರ್​ಸಿಟಿಸಿ

ಕೋಲ್ ಇಂಡಿಯಾ ಸಂಸ್ಥೆಯಲ್ಲಿ ಸರ್ಕಾರದ ಪಾಲು ಶೇ. 66.13ರಷ್ಟಿದ್ದು, ಸಾರ್ವಜನಿಕರಿಗೆ ಉಳಿದ ಪಾಲು ಹಂಚಿಕೆ ಆಗಿದೆ. ಈಗ ಶೇ. 0.15ರಷ್ಟು ಷೇರುಗಳನ್ನು ಮಾರಿದರೆ ಸರ್ಕಾರದ ಪಾಲು ಶೇ. 66ಕ್ಕಿಂತಲೂ ತುಸು ಕಡಿಮೆ ಆಗಬಹುದು.

ಕೋಲ್ ಇಂಡಿಯಾಗೆ ಒಳ್ಳೆಯ ಆದಾಯ

ಕೋಲ್ ಇಂಡಿಯಾ ಸಂಸ್ಥೆ 2022-23ರ ಹಣಕಾಸು ವರ್ಷದಲ್ಲಿ ಭರ್ಜರಿ ಆದಾಯ ಪಡೆದಿದೆ. ಆ ವರ್ಷ ಅದರ ನಿವ್ವಳ ಲಾಭ 28,125 ಕೋಟಿ ರೂ ಆಗಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟದ ಲಾಭ ಎನಿಸಿದೆ. ಹಿಂದಿನ ವರ್ಷ (2021-22) ಅದಕ್ಕೆ ಸಿಕ್ಕ ನಿವ್ವಳ ಲಾಭ 17,378ಕ್ಕೆ ಹೋಲಿಸಿದರೆ 2023ರ ಹಣಕಾಸು ವರ್ಷದಲ್ಲಿ ಶೇ. 62ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿತ್ತು.

ಇದನ್ನೂ ಓದಿಯಾವುದೇ ಗ್ಯಾರಂಟಿ ಇಲ್ಲದೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ಪಡೆಯಬೇಕಾ? ನೋಂದಣಿ ಪ್ರಕ್ರಿಯೆ ವಿವರಗಳು ಇಲ್ಲಿವೆ ಓದಿ

ಆದರೆ, 11ನೇ ರಾಷ್ಟ್ರೀಯ ಕಲ್ಲಿದ್ದಲು ವೇತನ ಒಪ್ಪಂದದ (NCWA XI- National Coal Wage Agreement) ಶಿಫಾರಸು ಜಾರಿಯಾಗದೇ ಹೋಗಿದ್ದರೆ ಕೋಲ್ ಇಂಡಿಯಾದ ಲಾಭ ಇನ್ನೂ ಭರ್ಜರಿಯಾಗಿರುತ್ತಿತ್ತು. ಹೊಸ ವೇತನದಿಂದಾಗಿ 2023ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ (ಜನವರಿಯಿಂದ ಮಾರ್ಚ್) ಲಾಭದಲ್ಲಿ ಶೇ. 18ರಷ್ಟು ಕಡಿಮೆ ಆಗಿತ್ತು.

ಇನ್ನು, ಕೋಲ್ ಇಂಡಿಯಾ ಕಂಪನಿಯ ಷೇರುಬೆಲೆ ಕೂಡ ಕಳೆದ ಒಂದು ವರ್ಷದಲ್ಲಿ ಶೇ. 24ರಷ್ಟು ಏರಿಕೆ ಕಂಡಿದೆ. ಸದ್ಯ ಇದರ ಒಂದು ಷೇರು ಬೆಲೆ ಇಂದು (ಜೂನ್ 19) ಬೆಳಗಿನ ವಹಿವಾಟಿನಲ್ಲಿ 229 ರೂ ಸಮೀಪಕ್ಕೆ ಏರಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Mon, 19 June 23