Adani Trainman: ಅದಾನಿಯಿಂದ ಟ್ರೈನ್​ಮ್ಯಾನ್ ಖರೀದಿ; ರೈಲ್ವೆ ಇಲಾಖೆ ಆದಾಯಕ್ಕೆ ಹೊಡೆತ ಬೀಳುತ್ತಾ? ಛೇ ಇಲ್ಲ ಎನ್ನುತ್ತಿದೆ ಐಆರ್​ಸಿಟಿಸಿ

IRCTC's Unbreakable Monopoly: ಟ್ರೈನ್​ಮ್ಯಾನ್ ಆ್ಯಪ್ ಅನ್ನು ಖರೀದಿಸುವ ಮೂಲಕ ಉದ್ಯಮಿ ಗೌತಮ್ ಅದಾನಿ ಐಆರ್​ಸಿಟಿಸಿಯ ಆದಾಯಕ್ಕೆ ಕೊಕ್ಕೆ ಹಾಕುತ್ತಿದ್ದಾರೆ ಎಂಬ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಇದನ್ನು ಸ್ವತಃ ಐಆರ್​ಸಿಟಿಸಿ ನಿರಾಕರಿಸಿ, ಕಾರಣವನ್ನೂ ಕೊಟ್ಟಿದೆ...

Adani Trainman: ಅದಾನಿಯಿಂದ ಟ್ರೈನ್​ಮ್ಯಾನ್ ಖರೀದಿ; ರೈಲ್ವೆ ಇಲಾಖೆ ಆದಾಯಕ್ಕೆ ಹೊಡೆತ ಬೀಳುತ್ತಾ? ಛೇ ಇಲ್ಲ ಎನ್ನುತ್ತಿದೆ ಐಆರ್​ಸಿಟಿಸಿ
ಭಾರತೀಯ ರೈಲ್ವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2023 | 2:47 PM

ನವದೆಹಲಿ: ರೈಲ್ವೆ ಟಿಕೆಟ್ ಬುಕಿಂಗ್ ಮಾಡುವ ಟ್ರೈನ್​ಮ್ಯಾನ್ ಆ್ಯಪ್ (Trainman) ಅನ್ನು ಅದಾನಿ ಗ್ರೂಪ್ ಖರೀದಿಸಲು ಹೊರಟಿರುವ ಸುದ್ದಿ ಬಹಳಷ್ಟು ರಾಜಕೀಯ ಸಂಚನಲಕ್ಕೂ ಕಾರಣವಾಗಿದೆ. ಟ್ರೈನ್​ಮ್ಯಾನ್ ಆ್ಯಪ್​ನ ಮಾಲೀಕಸಂಸ್ಥೆ ಸ್ಪಾರ್ಕ್ ಎಂಟರ್ಪ್ರೈಸಸ್​ನ ಶೇ. 100ರಷ್ಟು ಪಾಲನ್ನು ತಾನು ಖರೀದಿಸುತ್ತಿರುವುದಾಗಿ ಅದಾನಿ ಗ್ರೂಪ್ ಜೂನ್ 16ರಂದು ಹೇಳಿತ್ತು. ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯ ಅಧೀನದಲ್ಲಿರುವ ಅದಾನಿ ಡಿಜಿಟಲ್ ಲ್ಯಾಬ್ಸ್ ಸಂಸ್ಥೆ ಸ್ಪಾರ್ಕ್ ಎಂಟರ್ಪ್ರೈಸಸ್ (Spark Enterprises) ಅನ್ನು ಖರೀದಿಸುತ್ತಿದೆ. ಟ್ರೈನ್​ಮ್ಯಾನ್ ಆ್ಯಪ್ ಅನ್ನು ಖರೀದಿಸುವ ಮೂಲಕ ಉದ್ಯಮಿ ಗೌತಮ್ ಅದಾನಿ ರೈಲ್ವೆ ಇಲಾಖೆಗೆ ಸೇರಿದ ಐಆರ್​ಸಿಟಿಸಿಯ ಆದಾಯಕ್ಕೆ ಕೊಕ್ಕೆ ಹಾಕುತ್ತಿದ್ದಾರೆ ಎಂಬ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಆದರೆ, ಈ ಬಗ್ಗೆ ಐಆರ್​ಸಿಟಿಸಿ ಸ್ಪಷ್ಟನೆ ನೀಡಿದ್ದು, ಅದಾನಿಯಿಂದಾಗಲೀ, ಟ್ರೈನ್​ಮ್ಯಾನ್​ನಿಂದಲಾಗಲೀ ಐಆರ್​ಸಿಟಿಸಿಗೆ ಏನೂ ಹಾನಿ ಆಗುವುದಿಲ್ಲ ಎಂದಿದೆ.

ಟ್ರೈನ್​ಮ್ಯಾನ್ ಆ್ಯಪ್​ನಿಂದ ಐಆರ್​ಸಿಟಿಸಿಗೆ ನಷ್ಟ ಆಗುವುದಿಲ್ಲವೇ?

ಐಆರ್​ಸಿಟಿಸಿ ಎಂಬುದು ಭಾರತೀಯ ರೈಲ್ವೆಗೆ ಸೇರಿದ ಒಂದು ಸಂಸ್ಥೆ. ಟಿಕೆಟ್ ಬುಕಿಂಗ್​ನಿಂದ ಹಿಡಿದು ವಿವಿಧ ಪ್ರವಾಸಗಳನ್ನು ಇದು ಆಫರ್ ಮಾಡುತ್ತದೆ. ರೈಲ್ವೆ ಟಿಕೆಟ್ ಬುಕಿಂಗ್​ನಲ್ಲಿ ಇದು ನೂರು ಪ್ರತಿಶತದಷ್ಟು ಸ್ವಾಮ್ಯ ಇರುವ ಸಂಸ್ಥೆ. ಟ್ರೈನ್​ಮ್ಯಾನ್, ಪೇಟಿಎಂ, ಮೈಕ್ ಮೈ ಟ್ರಿಪ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡಬಹುದಾದರೂ ಎಲ್ಲವೂ ಕೂಡ ಐಆರ್​ಸಿಟಿಸಿ ಪ್ಲಾಟ್​ಫಾರ್ಮ್ ಮೂಲಕವೇ ಸಾಗಬೇಕು. ಐಆರ್​ಸಿಟಿಸಿ ಒಟ್ಟು 32 ಕಂಪನಿಗಳಿಗೆ ಎಪಿಐ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಒದಗಿಸಿದೆ. ಇದರಲ್ಲಿ ಪೇಟಿಎಂ, ಟ್ರೈನ್​ಮ್ಯಾನ್ ಇತ್ಯಾದಿಯೂ ಸೇರಿವೆ.

ಇದನ್ನೂ ಓದಿiPhone Exports: ಏಪ್ರಿಲ್ ಮೇ, ಎರಡು ತಿಂಗಳಲ್ಲಿ ಭಾರತದಿಂದ ಆ್ಯಪಲ್ ಐಫೋನ್ ರಫ್ತು 20,000 ಕೋಟಿ ರೂ

ಈ ಪ್ಲಾಟ್​ಫಾರ್ಮ್​ಗಳಲ್ಲಿ ಬುಕ್ ಆಗುವ ಒಂದು ಟಿಕೆಟ್​ಗೆ ಐಆರ್​ಸಿಟಿಸಿ ನಿರ್ದಿಷ್ಟ ಕಮಿಷನನ್ ಪಡೆಯುತ್ತದೆ. 2021-22ರ ಹಣಕಾಸು ವರ್ಷದಲ್ಲಿ ಪೇಟಿಎಂನಲ್ಲಿ ಬುಕ್ ಆದ ರೈಲ್ವೆ ಟಿಕೆಟ್​ಗಳಿಂದ ಐಆರ್​ಸಿಟಿಸಿಗೆ ಸಿಕ್ಕ ಕಮಿಷನ್ ಹಣವೇ ಬರೋಬ್ಬರಿ 70 ಕೋಟಿ ರೂ.

32 ಕಂಪನಿಗಳಿಗೆ ಎಪಿಐ ನೀಡಲಾಗಿದ್ದರೂ ಐಆರ್​ಸಿಟಿಸಿಯ ಅಧಿಕೃತ ಪ್ಲಾಟ್​ಫಾರ್ಮ್ ಮೂಲಕವೇ ಶೇ. 81ರಷ್ಟು ರೈಲ್ವೆ ಟಿಕೆಟ್​ಗಳು ಬುಕ್ ಆಗುತ್ತವೆ. ಇನ್ನು ಟ್ರೈನ್​ಮ್ಯಾನ್ ಆ್ಯಪ್​ನಲ್ಲಿ ಬುಕ್ ಆಗುವ ರೈಲ್ವೆ ಟಿಕೆಟ್ ಕೇವಲ ಶೇ. 0.13 ಮಾತ್ರ. ಅಂದರೆ ಆನ್​ಲೈನ್​ನಲ್ಲಿ ಬುಕ್ ಆಗುವ ಪ್ರತೀ 10,000 ರೈಲ್ವೆ ಟಿಕೆಟ್​ಗಳಲ್ಲಿ ಟ್ರೈನ್​ಮ್ಯಾನ್ ಮೂಲಕ ಬುಕ್ ಆಗುವುದು 13 ಟಿಕೆಟ್ ಮಾತ್ರವೇ.

ಹೀಗಾಗಿ, ಐಆರ್​ಸಿಟಿಸಿ ಇತ್ತೀಚೆಗೆ ನಷ್ಟ ಕಂಡಿದ್ದೇ ಇಲ್ಲ. 2022-23ರ ಹಣಕಾಸು ವರ್ಷದಲ್ಲಿ ಐಆರ್​ಸಿಟಿಸಿಯ ಆದಾಯ ಶೇ. 87ರಷ್ಟು ಹೆಚ್ಚಾಗಿ 3,661 ಕೋಟಿ ರೂ ಆಗಿತ್ತು. ನಿವ್ವಳ ಲಾಭ ಬರೋಬ್ಬರಿ 1,005 ರೂ ಆಗಿತ್ತು. ಐಆರ್​ಸಿಟಿಸಿ ಷೇರುಪೇಟೆಯಲ್ಲೂ ಗಣನೀಯವಾಗಿ ವೃದ್ಧಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ