
ನವದೆಹಲಿ, ಡಿಸೆಂಬರ್ 15: ಎಜಿಆರ್ ಬಾಕಿ ಕಟ್ಟದೆ, ಹಾಗೂ ಹೊಸ ಬಂಡವಾಳ ಪಡೆಯಲಾಗದೆ ಪರದಾಡುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆಗೆ (Vodafone Idea) ಸರ್ಕಾರ ನೆರವಿನ ಹಸ್ತ ಚಾಚಿದೆ ಎನ್ನುವಂತಹ ಸುದ್ದಿ ಇದೆ. ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ವಿಐ ಸಂಸ್ಥೆ ಟೆಲಿಕಾಂ ಇಲಾಖೆಗೆ ಕೊಡಬೇಕಿರುವ 83,000 ಕೋಟಿ ರೂ ಎಜಿಆರ್ ಬಾಕಿ ಹಣವನ್ನು ಪಾವತಿಸಲು 4-5 ವರ್ಷ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ ಅವಧಿ ಅಥವಾ ಮೊರಾಟರೋರಿಯಂ ಅವಧಿಯಲ್ಲಿ ಬಾಕಿ ಹಣದ ಮೇಲೆ ಯಾವುದೇ ಬಡ್ಡಿ ಸೇರ್ಪಡೆಯಾಗುವುದಿಲ್ಲ.
ಅಷ್ಟೇ ಅಲ್ಲ, ಈ ಅವಧಿ ಮುಗಿದ ಬಳಿಕ ಆರು ಕಂತುಗಳಲ್ಲಿ ಹಣ ಪಾವತಿಸಲು ವೊಡಾಫೋನ್ ಐಡಿಯಾಗೆ ಅವಕಾಶ ನೀಡಲಾಗಬಹುದು. ಅದಕ್ಕಿಂತ ಹೆಚ್ಚಾಗಿ, ಎಜಿಆರ್ ಬಾಕಿ ಹಣದಲ್ಲಿ ಅರ್ಧದಷ್ಟನ್ನು ಮನ್ನಾ ಮಾಡುವ ಸಾಧ್ಯತೆ ಇದೆ. ಸಂಸ್ಥೆಯ ಋಣಭಾರಗಳನ್ನು ಪರಿಗಣಿಸಿ ಎಜಿಆರ್ ಹೊರೆಯನ್ನು ತಗ್ಗಿಸಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?
ಎಜಿಆರ್ ಎಂದರೆ ಅಡ್ಜಸ್ಟೆಡ್ ಗ್ರಾಸ್ ರೆವಿನ್ಯೂ. ಸ್ಪೆಕ್ಟ್ರಂ ಇತ್ಯಾದಿ ಬಳಸುವ ಟೆಲಿಕಾಂ ಕಂಪನಿಗಳು ತಮ್ಮ ಸಮಗ್ರ ಆದಾಯದಲ್ಲಿ ಒಂದಷ್ಟು ಪಾಲನ್ನು ಸರ್ಕಾರಕ್ಕೆ ನೀಡಬೇಕು. ಅದೇ ಎಜಿಆರ್. ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಭಾರೀ ಮೊತ್ತದ ಎಜಿಆರ್ ಬಾಕಿ ಉಳಿಸಿಕೊಂಡಿವೆ.
ಎಜಿಆರ್ ಬಾಕಿ ತೀರಿಸುವಷ್ಟು ಹಣಕಾಸು ಸಾಮರ್ಥ್ಯ ಮತ್ತು ಆದಾಯ ತನ್ನಲ್ಲಿ ಇಲ್ಲ. ಸರ್ಕಾರ ಮಧ್ಯಪ್ರವೇಶಿಸದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ವೊಡಾಫೋನ್ ಐಡಿಯಾ ಸಂಸ್ಥೆ ವರ್ಷಗಳ ಹಿಂದಿನಿಂದಲೂ ಹೇಳುತ್ತಾ ಬಂದಿದೆ. ಈಗ ಸರ್ಕಾರವೇನಾದರೂ ನೆರವಿನ ಹಸ್ತ ಚಾಚಿದರೆ ವಿಐಗೆ ಮರುಜೀವ ಸಿಕ್ಕಂತಾಗುತ್ತದೆ. ಇವೆಲ್ಲವೂ ಕೂಡ ಕಾರ್ಯದರ್ಶಿ ಮಟ್ಟದ ಅಧಿಕಾರಿ ನೇತೃತ್ವದ ಸಮಿತಿಯೊಂದರ ಪರಾಮರ್ಶೆ ಮತ್ತು ತೀರ್ಮಾನದ ಮೇಲೆ ನಿಂತಿದೆ. ಎಜಿಆರ್ ಬಾಕಿ ಬರಬೇಕಿರುವ ವಿಚಾರವಾಗಿ ದೂರ ಸಂಪರ್ಕ ಇಲಾಖೆ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆ ಸಲ್ಲಿಸುವ ಅಭಿಪ್ರಾಯಗಳನ್ನು ಅಥವಾ ವಾದಗಳನ್ನು ಪರಾಮರ್ಶಿಸಿ ಸಮಿತಿ ಒಂದು ತೀರ್ಮಾನ ಕೈಗೊಳ್ಳಲಿದೆ.
ಇದನ್ನೂ ಓದಿ: ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್ಲೈನ್ಸ್ಗೆ ಮುಳುವಾಯಿತಾ?
ಇಂಥದ್ದೊಂದು ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿದೆ. ಇದಕ್ಕೆ ಸಂಪುಟದ ಅನುಮೋದನೆ ಸಿಕ್ಕ ಬಳಿಕ ಪ್ರಕ್ರಿಯೆ ಚಾಲನೆಗೆ ಬರುತ್ತದೆ. ಒಂದು ವೇಳೆ, ಸರ್ಕಾರದಿಂದ ಈ ಬಾರಿ ಯಾವುದೇ ನೆರವು ಬಾರದೇ ಹೋದಲ್ಲಿ, ವಿಐ ಸಂಸ್ಥೆಯು 83,000 ರೂಗಳ ಎಜಿಆರ್ ಬಾಕಿಯನ್ನು ಕಂತುಗಳಲ್ಲಿ ಕಟ್ಟಲು ಆರಂಭಿಸಬೇಕಾಗುತ್ತದೆ. 2026ರ ಮಾರ್ಚ್ ತಿಂಗಳಲ್ಲಿ 18,000 ರೂಗಳ ಮೊದಲ ಕಂತಿನ ಹಣವನ್ನು ಕಟ್ಟಬೇಕಾಗುತ್ತದೆ.
ವೊಡಾಫೋನ್ ಐಡಿಯಾದಲ್ಲಿ ಸರ್ಕಾರದ ಪಾಲು ಬರೋಬ್ಬರಿ ಶೇ. 48.99ರಷ್ಟಿದೆ. ಹೀಗಾಗಿ, ವಿಐ ಉಳಿಸಿಕೊಳ್ಳಲು ಯತ್ನಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಬಹುದು. ಒಂದು ವೇಳೆ ವಿಐಗೆ ಐದು ವರ್ಷ ಮೊರಾಟೋರಿಯಂ ಅವಧಿಯ ಅವಕಾಶ ಕೊಟ್ಟಲ್ಲಿ ಅದು ಹೊಸ ಬಂಡವಾಳ ಪಡೆಯಲು ಅವಕಾಶ ಸಿಗುತ್ತದೆ. ಸರ್ಕಾರ ಕೂಡ ಹೆಚ್ಚುವರಿ ಬಾಕಿ ಹಣವನ್ನು ಈಕ್ವಿಟಿಗಳಾಗಿ ಪರಿವರ್ತಿಸಿಕೊಳ್ಳಬಹುದು. ಇದರಿಂದ ಸರ್ಕಾರ ಹಾಗೂ ವಿಐ ಇಬ್ಬರಿಗೂ ಲಾಭ ಎಂದು ತಜ್ಞರು ಹೇಳುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ