ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್ಲೈನ್ಸ್ಗೆ ಮುಳುವಾಯಿತಾ?
Indigo Airlines fall from great success: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾದ ಇಂಡಿಗೋ ಬಿಕ್ಕಟ್ಟಿಗೆ ಸಿಲುಕಿದೆ. ಈ ತಿಂಗಳು 4,000ಕ್ಕೂ ಅಧಿಕ ಫ್ಲೈಟ್ಗಳು ರದ್ದಾಗಿವೆ. 2005ರಲ್ಲಿ ರಾಕೇಶ್ ಗಂಗವಾಲ್ ಮತ್ತು ರಾಹುಲ್ ಭಾಟಿಯಾ ಕಟ್ಟಿ ಬೆಳೆಸಿದ ಇಂಡಿಗೋ ಏರ್ಲೈನ್ಸ್ ಇದೀಗ ರೇಸ್ನಲ್ಲಿ ಸಾಗಲು ಪರದಾಡುತ್ತಿದೆ. 2019ರಲ್ಲಿ ಇಬ್ಬರು ಸಹ-ಸಂಸ್ಥಾಪಕರ ನಡುವೆ ಶುರುವಾದ ಭಿನ್ನಾಭಿಪ್ರಾಯ ಇದೀಗ ಕಂಪನಿಯನ್ನು ಈ ಪರಿಸ್ಥಿತಿಗೆ ತಳ್ಳಿದಂತಿದೆ.

ನವದೆಹಲಿ, ಡಿಸೆಂಬರ್ 14: ಭಾರತದ ವೈಮಾನಿಕ ಕ್ಷೇತ್ರದಲ್ಲಿ ಯಾವೊಂದು ಸಂಸ್ಥೆಯೂ ದೀರ್ಘಾವಧಿಯಲ್ಲಿ ಯಶಸ್ಸಿನ ದಾರಿ ಸವೆದದ್ದಿಲ್ಲ. ಇಂಡಿಗೋ ಏರ್ಲೈನ್ಸ್ (Indigo Airlines) ಇದಕ್ಕೆ ಅಪವಾದವೆಂಬಂತೆ ಭಾಸವಾಗಿತ್ತು. ಭಾರತದ ಅತ್ಯಂತ ಜನಪ್ರಿಯ ಹಾಗೂ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾಗಿ ಬೆಳೆದಿದೆ. ಆದರೆ, ಇತ್ತೀಚೆಗೆ ಇದರ ಯಶಸ್ಸಿನ ಅಂಶವೆಲ್ಲಾ ಗಾಳಿಗೆ ತೂರಿ ಹೋದಂತಾಗುತ್ತಿದೆ. ಈ ತಿಂಗಳ ಮೊದಲೆರಡು ವಾರದಲ್ಲಿ ಇಂಡಿಗೋ ಏರ್ಲೈನ್ಸ್ನ ನಾಲ್ಕು ಸಾವಿರಕ್ಕೂ ಹೆಚ್ಚು ಫ್ಲೈಟ್ಗಳು ರದ್ದಾಗಿವೆ. ಈ ಹಿಂದೆ ಮುರುಟಿಹೋದ ಹಲವು ಏರ್ಲೈನ್ಸ್ ಕಂಪನಿಗಳ ಸಾಲಿಗೆ ಇಂಡಿಗೋ ಕೂಡ ಸೇರ್ಪಡೆಯಾಗಬಹುದೇನೋ ಎನ್ನುವ ಭಯ ಆವರಿಸತೊಡಗಿದೆ.
ರಾಕೇಶ್ ಗಂಗವಾಲ್ ಎನ್ನುವ ಸಹ-ಸಂಸ್ಥಾಪಕರ ಕಥೆ…
ಇಂಡಿಗೋ ಏರ್ಲೈನ್ಸ್ ಸಂಸ್ಥೆಯನ್ನು ಇಬ್ಬರು ಸೇರಿ ಕಟ್ಟಿದ್ದರು. ರಾಕೇಶ್ ಗಂಗವಾಲ್ ಮತ್ತು ರಾಹುಲ್ ಭಾಟಿಯಾ. ಕೆಲ ವರ್ಷಗಳ ಹಿಂದೆ ಈ ಇಬ್ಬರು ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿ, ರಾಕೇಶ್ ಗಂಗವಾಲ್ ಸದ್ದಿಲ್ಲದೇ ಕಂಪನಿಯಿಂದ ಹೊರಬಿದ್ದಿದ್ದರು. ಅವರ ಉಪಸ್ಥಿತಿಯಲ್ಲಿ ಆರ್ಥಿಕವಾಗಿ ಉತ್ತಮವಾಗಿ ಇದ್ದ ಇಂಡಿಗೋ, ಇದೀಗ ಅವರ ಅನುಪಸ್ಥಿತಿಯಲ್ಲಿ ವಿಲ ವಿಲ ಒದ್ದಾಡುವಂತಾಗಿದೆ.
ರಾಕೇಶ್ ಗಂಗವಾಲ್ ಬಿಟ್ಟು ಹೋಗಿದ್ದು ಯಾಕೆ?
ರಾಕೇಶ್ ಗಂಗವಾಲ್ ಕೋಲ್ಕತಾ ಸಂಜಾತರು. ಐಐಟಿ ಕಾನಪುರ್ನಲ್ಲಿ ಬಿಇ ಮಾಡಿ, ಅಮೆರಿಕದ ವಾರ್ಟನ್ ಸ್ಕೂಲ್ನಲ್ಲಿ ಎಂಬಿಎ ಮಾಡಿದ್ದಾರೆ. ಅಮೆರಿಕದಲ್ಲೇ ಇವರದ್ದು ಕಾರ್ಯಕ್ಷೇತ್ರ ಇದ್ದದ್ದು. 2005ರಲ್ಲಿ ಭಾಟಿಯಾ ಜೊತೆ ಸೇರಿ ಇಂಡಿಗೋ ಏರ್ಲೈನ್ಸ್ ಕಟ್ಟುವ ಮುನ್ನ ವಿಮಾನಯಾನ ಕ್ಷೇತ್ರದಲ್ಲಿ ಗಂಗವಾಲ್ ಹೆಸರು ಮಾಡಿದ್ದರು. ಅನುಭವಿ ಎನಿಸಿದ್ದರು. ಯುಎಸ್ ಏರ್ವೇಸ್ನ ಸಿಇಒ ಮತ್ತು ಅಧ್ಯಕ್ಷರಾದ ಅನುಭವ ಇತ್ತು. ವರ್ಲ್ಡ್ಸ್ಪ್ಯಾನ್ ಎನ್ನುವ ಟ್ರಾವಲ್ ಟೆಕ್ನಾಲಜಿ ಸಂಸ್ಥೆಯ ಸಿಇಒ ಕೂಡ ಆಗಿದ್ದರು.
ಇದನ್ನೂ ಓದಿ: Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್ಗೆ 5,000 ಕೋಟಿ ರೂಗೂ ಅಧಿಕ ಬೆಲೆ
ಇಂಡಿಗೋ ಏರ್ಲೈನ್ಸ್ನಲ್ಲಿ ರಾಕೇಶ್ ಗಂಗವಾಲ್ನ ಗೆಲುವಿನ ಮಂತ್ರ…
ಇಂಡಿಗೋ ಏರ್ಲೈನ್ಸ್ ಸ್ಥಾಪಿಸುವ ಮುನ್ನ ರಾಕೇಶ್ ಗಂಗವಾಲ್ ಮೂಲ ಸೂತ್ರವೊಂದನ್ನು ನೆಲೆಗೊಳಿಸಿದ್ದರು. ಐಷಾರಾಮಿ ಸೇವೆಗಳನ್ನು ನೀಡುವ ಫುಲ್ ಸರ್ವಿಸ್ ಏರ್ಲೈನ್ಸ್ಗಳ ಮಾದರಿಯಿಂದ ದೂರ ಉಳಿಯಬೇಕು. ಕಡಿಮೆ ವೆಚ್ಚದ ಮತ್ತು ಉತ್ತಮ ಕಾರ್ಯಾಚರಣೆಯ ಮಾದರಿಯನ್ನು ಅನುಸರಿಸಬೇಕು ಎಂಬುದು ರಾಕೇಶ್ ಗಂಗವಾಲ್ ಅವರ ಸೂತ್ರ. ಇದು ವರ್ಕೌಟ್ ಆಯಿತು.
ನಂತರ ಮಧ್ಯ ಮಧ್ಯೆ ರಾಕೇಶ್ ಗಂಗವಾಲ್ ಅವರ ಚಾಣಾಕ್ಷ್ಯ ಬ್ಯುಸಿನೆಸ್ ನಿರ್ಧಾರಗಳು ಇಂಡಿಗೋ ಏರ್ಲೈನ್ಸ್ನ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಿತು. 2005ರಲ್ಲಿ ನೂರು ಏರ್ಬಸ್ ಎ320 ವಿಮಾನಗಳನ್ನು ಏರ್ಬಸ್ನಿಂದ ಕಡಿಮೆ ಬೆಲೆಗೆ ಖರೀದಿಸಿ, ನಂತರ ಗುತ್ತಿಗೆ ಕಂಪನಿಗಳಿಗೆ ಅವನ್ನು ಹೆಚ್ಚಿನ ಬೆಲೆಗೆ ಮಾರಿದರು. ನಂತರ ಅವೇ ಗುತ್ತಿಗೆ ಕಂಪನಿಗಳಿಂದ ಈ ವಿಮಾನಗಳನ್ನು ಗುತ್ತಿಗೆ ಆಧಾರದ ಮೇಲೆ ಎರವಲು ಪಡೆದರು. ಇದರಿಂದ ಸಂಸ್ಥೆಗೆ ಉತ್ತಮ ಆದಾಯ ಸಿಕ್ಕಿತು.
ಒಂದು ವಿಮಾನದ ಆಯಸ್ಸು ಆರು ವರ್ಷ ಆದ ಬಳಿಕ ಮರಳಿಸಿ, ಅದರ ಬದಲು ಹೊಸ ವಿಮಾನವನ್ನು ಲೀಸ್ಗೆ ಪಡೆಯುತ್ತಿದ್ದರು. ಇದರಿಂದ ಇಂಡಿಗೋ ಏರ್ಲೈನ್ಸ್ ಆಪರೇಟ್ ಮಾಡುವ ವಿಮಾನದ ಕ್ಷಮತೆ ಉತ್ತಮವಾಗಿರುತ್ತಿತ್ತು. ಮೈಲೇಜ್ ಉತ್ತಮವಾಗಿ ಸಿಗುತ್ತಿತ್ತು. ಈ ಕ್ರಮವು ಇಂಡಿಗೋಗೆ ಅನುಕೂಲ ಮಾಡಿಕೊಟ್ಟಿತು.
ಇದನ್ನೂ ಓದಿ: ಕರ್ನಾಟಕದ ಚರ್ಮಕಾರರಿಗೆ ಭರ್ಜರಿ ಆದಾಯ? ಕೊಲ್ಹಾಪುರಿ ಚಪ್ಪಲಿಗಾಗಿ ವಿಶ್ವಖ್ಯಾತ ಫ್ಯಾಷನ್ ಬ್ರ್ಯಾಂಡ್ ಪ್ರದಾ ಡೀಲ್
ರಾಕೇಶ್ ಗಂಗವಾಲ್ ಮತ್ತು ರಾಹುಲ್ ಭಾಟಿಯಾ ನಡುವೆ ಭಿನ್ನಾಭಿಪ್ರಾಯ ಯಾಕೆ ಬಂತು?
ರಾಹುಲ್ ಭಾಟಿಯಾ ಅವರು ನೀತಿ ನಿಯಮಗಳನ್ನು ಮೀರಿ ತಮಗೆ ಬೇಕಾದವರಿಗೆ ಮತ್ತು ತಮ್ಮದೇ ಸಂಸ್ಥೆಗಳಿಗೆ ಗುತ್ತಿಗೆ ಕೊಡುತ್ತಿದ್ದಾರೆ ಎಂಬಿತ್ಯಾದಿ ಹಲವು ಗುರುತರ ಆರೋಪಗಳನ್ನು 2019ರಲ್ಲಿ ರಾಕೇಶ್ ಗಂಗವಾಲ್ ಮಾಡಿದರು. ಇಂಡಿಗೋ ಏರ್ಲೈನ್ಸ್ನ ಪ್ರೊಮೋಟರ್ ಸಂಸ್ಥೆಯಾದ ಇಂಟರ್ಗ್ಲೋಬ್ ಎಂಟರ್ಪ್ರೈಸಸ್ನ ಮುಖ್ಯಸ್ಥರೂ ಆಗಿದ್ದ ರಾಹುಲ್ ಭಾಟಿಯಾ ಅವರು ಗಂಗವಾಲ್ ಆರೋಪಗಳನ್ನು ತಳ್ಳಿಹಾಕಿದ್ದು ಮಾತ್ರವಲ್ಲ, ತನ್ನ ಅಧಿಕಾರವನ್ನು ಸಂಕುಚಿತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಾರೋಪಗಳನ್ನೂ ಮಾಡಿದರು.
ಇದಾದ ಬಳಿಕ ರಾಕೇಶ್ ಗಂಗವಾಲ್ ಅವರು ಸದ್ದಿಲ್ಲದೆ ಹೊರಬೀಳಲು ಆರಂಭಿಸಿದರು. ಹಂತ ಹಂತವಾಗಿ, ಬ್ಲಾಕ್ ಡೀಲ್ಗಳ ಮೂಲಕ ತಮ್ಮ ಇಂಡಿಗೋ ಷೇರುಗಳನ್ನು ಮಾರತೊಡಗಿದರು. ಯಾರಿಗೂ ಕೂಡ ಇದು ಹೆಚ್ಚಿನ ಗಮನೀಯ ಎನಿಸಲಿಲ್ಲ. 2022ರಿಂದ 2025ರವರೆಗೆ ರಾಕೇಶ್ ಗಂಗವಾಲ್ ತಮ್ಮ ಶೇ. 37 ಪಾಲಿನಲ್ಲಿ ಹೆಚ್ಚಿನವನ್ನು ಮಾರಿಬಿಟ್ಟರು. ಇದರಿಂದ 5 ಬಿಲಿಯನ್ ಡಾಲರ್ಗೂ ಅಧಿಕ ಹಣ ಅವರಿಗೆ ಸಿಕ್ಕಿತು. ಅಮೆರಿಕದಲ್ಲಿದ್ದುಕೊಂಡೇ ಇವೆಲ್ಲವನ್ನೂ ಮಾಡಿದರು. ಈಗ ಇಂಡಿಗೋ ಏರ್ಲೈನ್ಸ್ನಲ್ಲಿ ಸ್ವಲ್ಪ ಷೇರುಗಳನ್ನು ಹೊಂದಿರುವ ಗಂಗವಾಲ್ ಪ್ರಸಕ್ತ ಅಮೆರಿಕದಲ್ಲೇ ಇದ್ದಾರೆ.
ರಾಹುಲ್ ಭಾಟಿಯಾ ತಪ್ಪು ಮಾಡಿದರಾ?
ರಾಕೇಶ್ ಗಂಗವಾಲ್ ದೂರ ಹೋಗುತ್ತಿದ್ದಂತೆಯೇ ಇಂಡಿಗೋ ಏರ್ಲೈನ್ಸ್ ತನ್ನ ಕಾರ್ಯನೀತಿಯನ್ನು ಪೂರ್ಣ ಬದಲಿಸಿತು. ವಿಮಾನಗಳ ಸಂಖ್ಯೆ 400 ದಾಟಿತು. ವಿಮಾನಗಳ ಸಂಖ್ಯೆ ಏರಿತೇ ವಿನಃ ಪೈಲಟ್ಗಳು ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಲಿಲ್ಲ. ರಾಕೇಶ್ ಗಂಗವಾಲ್ ಹಾಕಿದ್ದ ಸೂತ್ರದಿಂದ ಇಂಡಿಗೋ ದೂರ ಹೋಯಿತು.
ಪೈಲಟ್ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯ ಕೊಡಬೇಕು ಎಂಬಿತ್ಯಾದಿ ನಿಯಮಗಳನ್ನು ಭಾರತದ ವಿಮಾನಯಾನ ಪ್ರಾಧಿಕಾರವು ರೂಪಿಸಿದೆ. ಇವುಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕಾದಾಗ ಇಂಡಿಗೋ ಮುಗ್ಗುರಿಸಿಮುಗ್ಗುರಿಸಿ ಬೀಳುವಂತಾಗಿದೆ. ಈ ಹೊಸ ನಿಯಮಗಳಿಗೆ ತಾಳೆಯಾಗುವ ಪರಿಸ್ಥಿತಿಯಲ್ಲಿ ಇಂಡಿಗೋ ಇರಲಿಲ್ಲ. ಹೆಚ್ಚಿನ ಪೈಲಟ್ಗಳಿಲ್ಲದ್ದರಿಂದ ಇಂಡಿಗೋ ತನ್ನ ಶೇ 10-20 ಫ್ಲೈಟ್ಗಳನ್ನು ದಿನವೂ ರದ್ದು ಮಾಡಬೇಕಾಗಿ ಬಂತು. ಹೀಗಾಗಿ, ಅದು ಸದ್ಯ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ದೂರದಲ್ಲಿ ಅಮೆರಿಕದಲ್ಲಿದ್ದುಕೊಂಡೇ ಇವೆಲ್ಲವನ್ನೂ ನೋಡುತ್ತಿರುವ ರಾಕೇಶ್ ಗಂಗವಾಲ್ ಏನು ಯೋಚಿಸುತ್ತಿರಬಹುದು?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




