Holidays: ಮುಂದಿನ ವರ್ಷ ಷೇರುಪೇಟೆಗೆ 15 ದಿನ ರಜೆ; ಇಲ್ಲಿದೆ ರಜಾದಿನಗಳ ಪಟ್ಟಿ
Stock Market holiday calendar 2026: ಎನ್ಎಸ್ಇ ಮತ್ತು ಬಿಎಸ್ಇ ಕ್ಯಾಲಂಡರ್ ಪ್ರಕಾರ 2026ರಲ್ಲಿ ಷೇರು ಮಾರುಕಟ್ಟೆಗೆ 15 ದಿನ ರಜೆ ಇದೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿದ ರಜೆಗಳು ಇವಾಗಿವೆ. ಜನವರಿ 26ರಂದಿನ ಗಣರಾಜ್ಯೋತ್ಸವದಿಂದ ಹಿಡಿದು ಡಿಸೆಂಬರ್ 25ರ ಕ್ರಿಸ್ಮಸ್ವರೆಗೆ ಈ ರಜೆಗಳಿವೆ. ಶ್ರೀರಾಮನವಮಿ, ಬಕ್ರೀದ್, ಮಹಾರಾಷ್ಟ್ರ ದಿನ, ದೀಪಾವಳಿ, ದಸರಾ ಮೊದಲಾದ ಹಲವು ರಜೆಗಳೂ ಇದರಲ್ಲಿ ಸೇರಿವೆ.

ನವದೆಹಲಿ, ಡಿಸೆಂಬರ್ 14: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (National Stock Exchange) 2026ರ ವರ್ಷದ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಮುಂದಿನ ವರ್ಷ 15 ದಿನ ರಜೆಗಳನ್ನು ಘೋಷಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕೂಡ ಇದೇ ರಜಾ ದಿನಗಳನ್ನು (Stock market holidays) ಹೊಂದಿದೆ. ಪ್ರತೀ ವಾರಾಂತ್ಯದ ಎರಡು ದಿನಗಳನ್ನು ಹೊರತುಪಡಿಸಿದ ರಜಾದಿನಗಳು ಇವು. ಹೆಚ್ಚಿನ ಸಾರ್ವತ್ರಿಕ ರಜೆಗಳು ಷೇರು ಮಾರುಕಟ್ಟೆಗೂ ಅನ್ವಯಿಸುತ್ತವೆ.
ಮಾರ್ಚ್ ತಿಂಗಳಲ್ಲಿ 3 ರಜಾ ದಿನಗಳಿವೆ. ಅತಿಹೆಚ್ಚು ರಜೆಗಳಿರುವ ತಿಂಗಳು ಅದು. ಫೆಬ್ರುವರಿ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಜೆಗಳಿಲ್ಲ. ಷೇರು ಮಾರುಕಟ್ಟೆಗೆ ರಜೆ ಇರುವ ದಿನ ಯಾವುದೇ ಟ್ರೇಡಿಂಗ್ ನಡೆಯುವುದಿಲ್ಲ. ಬಿಎಸ್ಇ ಮತ್ತು ಎನ್ಎಸ್ಇ ಕಚೇರಿಗಳು ಬಂದ್ ಆಗಿರುತ್ತವೆ. ಈಕ್ವಿಟಿ, ಡಿರೈವೇಟಿವ್, ಕರೆನ್ಸಿ, ಬುಲಿಯನ್ ಮಾರುಕಟ್ಟೆಗಳು ಬಂದ್ ಆಗಿರುತ್ತವೆ.
2026ರಲ್ಲಿ ಷೇರು ಮಾರುಕಟ್ಟೆಗೆ ರಜಾದಿನಗಳು
- ಜನವರಿ 26, ಸೋಮವಾರ: ಗಣರಾಜ್ಯೋತ್ಸವ
- ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ
- ಮಾರ್ಚ್ 26, ಗುರುವಾರ: ಶ್ರೀರಾಮನವಮಿ
- ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ
- ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ
- ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
- ಮೇ 1, ಶುಕ್ರವಾರ: ಮಹಾರಾಷ್ಟ್ರ ದಿನ
- ಮೇ 28, ಗುರುವಾರ: ಬಕ್ರೀದ್
- ಜೂನ್ 26, ಶುಕ್ರವಾರ: ಮುಹರಂ
- ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ
- ಅಕ್ಟೋಬರ್ 2, ಶುಕ್ರವಾರ: ಗಾಂಧಿ ಜಯಂತಿ
- ಅಕ್ಟೋಬರ್ 20, ಮಂಗಳವಾರ: ದಸರಾ
- ನವೆಂಬರ್ 10, ಮಂಗಳವಾರ: ದೀಪಾವಳಿ
- ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ
- ಡಿಸೆಂಬರ್ 25, ಶುಕ್ರವಾರ: ಕ್ರಿಸ್ಮಸ್
ಇದನ್ನೂ ಓದಿ: ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್ಗಳಿವು…
ಮೇಲಿನ ರಜಾದಿನಗಳಲ್ಲದೇ, ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೂಡ ಮಾರುಕಟ್ಟೆ ಬಂದ್ ಆಗಿರುತ್ತದೆ. ಎನ್ಎಸ್ಇ ಮತ್ತು ಬಿಎಸ್ಇ ಕಚೇರಿಗಳು ಮುಂಬೈನಲ್ಲಿ ಇರುವುದರಿಂದ ಅಲ್ಲಿ ಸ್ಥಳೀಯ ರಜೆಗಳೂ ಅನ್ವಯ ಆಗುತ್ತದೆ. ಹೀಗಾಗಿ, ಮಹಾರಾಷ್ಟ್ರ ದಿನದಂದು ಷೇರು ಮಾರುಕಟ್ಟೆ ಬಾಗಿಲು ಹಾಕುತ್ತದೆ. ಹಾಗೆಯೇ, ಮುಂಬೈ ಮಹಾನಗರಪಾಲಿಕೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಇದ್ದ ದಿನವೂ ಷೇರುಪೇಟೆಗೆ ರಜೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




