ಮೊಬೈಲ್, ಬೈಕ್, ಕಾರ್, ಟಿವಿ, ಫ್ರಿಡ್ಜ್ ಮಾಲಕತ್ವದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ತಗ್ಗುತ್ತಿದೆಯಾ?
Mobile, fridge, motor vehicles, television ownership: ಕುಟುಂಬಗಳಿಗೆ ಈಗ ಅಗತ್ಯ ಸೌಕರ್ಯಗಳಾದ ಮೊಬೈಲು, ಟಿವಿ, ಮೋಟಾರು ವಾಹನ, ಫ್ರಿಡ್ಜ್ ಇತ್ಯಾದಿಗಳು ಬಡವರಿಗೆ ಕೈಗೆಟುಕುತ್ತಿವೆಯಾ? 2011-12 ಮತ್ತು 2023-24ರಲ್ಲಿ ಪಡೆಯಲಾದ ಸಮೀಕ್ಷಾ ಮಾಹಿತಿ ಕೆಲ ಅಚ್ಚರಿಯ ಅಂಶಗಳನ್ನು ಹೊರಗೆಡವಿದೆ. ಅತೀ ಶ್ರೀಮಂತ ಶೇ. 20 ಕುಟುಂಬಗಳು ಹಾಗೂ ಅತೀ ಬಡ ಶೇ. 40ರಷ್ಟು ಕುಟುಂಬಗಳ ನಡುವೆ ಅಂತರ ಕಡಿಮೆ ಆಗಿದೆ.

ನವದೆಹಲಿ, ಡಿಸೆಂಬರ್ 14: ಭಾರತದಲ್ಲಿ ಆರ್ಥಿಕತೆ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಆದರೆ, ತಲಾದಾಯ ಹೆಚ್ಚುತ್ತಿಲ್ಲ ಎನ್ನುವ ದೂರು ಕೂಡ ಇದೆ. ಬಡವ ಮತ್ತಷ್ಟು ಬಡವನಾಗುತ್ತಿದ್ದಾನೆ, ಶ್ರೀಮಂತ ಮತ್ತಷ್ಟು ಶ್ರೀಮಂತನಾಗುತ್ತಿದ್ದಾನೆ ಎಂಬ ಟೀಕೆಗಳೂ ಕೇಳಿಬರುತ್ತವೆ. ಆದರೆ, ವಿವಿಧ ಸಮೀಕ್ಷೆಗಳ ದತ್ತಾಂಶಗಳು ಬೇರೆಯೇ ವಾಸ್ತವ ಚಿತ್ರಣ ನೀಡುತ್ತವೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಚಾ ಘೋಷ್ ಅವರು ಕೆಲ ಕುತೂಹಲಕಾರಿ ಮಾಹಿತಿಯನ್ನು ಹೆಕ್ಕಿ ನೀಡಿದ್ದಾರೆ. ಕಳೆದ 10 ವರ್ಷದಲ್ಲಿ ಭಾರತದಲ್ಲಿರುವ ಒಬ್ಬ ಕಡುಬಡವನ ಜೀವನ ಮತ್ತು ಸೌಲಭ್ಯ (Owning the key assets) ಹೇಗೆ ಬದಲಾಗಿದೆ ಎಂಬುದನ್ನು ಈ ದತ್ತಾಂಶಗಳು ನಿವೇದಿಸುತ್ತವೆ.
ಹತ್ತು ವರ್ಷದ ಹಿಂದೆ ಭಾರತದ ಗ್ರಾಮೀಣ ಭಾಗದಲ್ಲಿರುವ ಪ್ರತೀ ಹತ್ತು ಮನೆಗಳಲ್ಲಿ ಬೈಕ್ ಅಥವಾ ಕಾರ್ ಇದ್ದ ಮನೆ ಒಂದಕ್ಕಿಂತ ಕಡಿಮೆ ಇತ್ತು. ಈಗ (2023-24) ಪ್ರತೀ ಹತ್ತರಲ್ಲಿ ಐದು ಮನೆಗಳಲ್ಲಿ ಬೈಕು ಅಥವಾ ಕಾರು ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆ ವರದಿ ಪ್ರಕಾರ, ಕೆಲ ಪ್ರಮುಖ ಆಸ್ತಿಗಳ ಮಾಲಕತ್ವದ ವಿಚಾರಕ್ಕೆ ಬಂದರೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಆಗುತ್ತಿದೆ.
ಬೈಕ್ ಮಾಲಕತ್ವ ಎಷ್ಟೆಷ್ಟಿದೆ ನೋಡಿ…
ಗ್ರಾಮೀಣ ಭಾಗಗಳಲ್ಲ 2011-12ರಲ್ಲಿ ಅಗ್ರ ಶ್ರೀಮಂತ ಶೇ. 20ರಷ್ಟು ಮನೆಗಳಲ್ಲಿ ಬೈಕ್ಗಳನ್ನು ಹೊಂದಿದ್ದವರು ಶೇ. 38.2 ಇತ್ತು. ಆ ಅವಧಿಯಲ್ಲಿ ಕೆಳಗಿನ ಶೇ. 40ರಷ್ಟು ಮನೆಗಳಲ್ಲಿ ಮೋಟಾರು ವಾಹನ ಹೊಂದಿದ್ದವರ ಸಂಖ್ಯೆ ಶೇ. 6.2 ಮಾತ್ರ. ಅಂದರೆ ಹತ್ತು ವರ್ಷದ ಹಿಂದೆ ಶೇ. 38.2 ವರ್ಸಸ್ 6 ಇತ್ತು.
ಇದನ್ನೂ ಓದಿ: ಇಂಡಿಗೋ ಕುಸಿಯಲು ಏನು ಕಾರಣ? ಇಬ್ಬರು ಸಂಸ್ಥಾಪಕರ ನಡುವಿನ ಭಿನ್ನಾಭಿಪ್ರಾಯವೇ ಏರ್ಲೈನ್ಸ್ಗೆ ಮುಳುವಾಯಿತಾ?
2023-24ರಲ್ಲಿ ಇದು ಶೇ. 69.7 ವರ್ಸಸ್ 47.1 ಆಗಿದೆ. ಹತ್ತು ವರ್ಷದಲ್ಲಿ ಈ ಅಂತರ ಸ್ಪಷ್ಟವಾಗಿ ತಗ್ಗಿರುವುದು ಗೊತ್ತಾಗುತ್ತದೆ. ಗ್ರಾಮೀಣ ಭಾಗದಲ್ಲಿ ಅತೀ ಬಡವರು 10 ವರ್ಷದಲ್ಲಿ ಅತೀಹೆಚ್ಚು ಮೋಟಾರು ವಾಹನ ಹೊಂದಿರುವ ವಿಚಾರದಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಪಂಜಾಬ್ ರಾಜ್ಯಗಳು ಮೊದಲ ಮೂರು ಸ್ಥಾನ ಪಡೆಯುತ್ತವೆ. ತೆಲಂಗಾಣದಲ್ಲಿ ಈ ಪ್ರಮಾಣವು 10 ವರ್ಷದಲ್ಲಿ ಶೇ. 4.6ರಿಂದ ಶೇ. 67.1ಕ್ಕೆ ಏರಿದೆ. ಕರ್ನಾಟಕದಲ್ಲಿ ಶೇ. 7.2ರಿಂದ ಶೇ. 69.1; ಪಂಜಾಬ್ನಲ್ಲಿ ಶೇ. 22.1ರಿಂದ ಶೇ. 76.6ಕ್ಕೆ ಏರಿದೆ. ನಗರ ಭಾಗಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡದಲ್ಲಿ ಅತಿಹೆಚ್ಚಳ ಆಗಿದೆ.
ಮೊಬೈಲ್ ಫೋನ್ಗಳೇ ಇಲ್ಲದ ಮನೆ ಬಹಳ ವಿರಳ
ಹಿಂದೆ ಮೊಬೈಲ್ ಫೋನ್ಗಳು ಉಳ್ಳವರ ಲಕ್ಷುರಿ ಆಗಿತ್ತು. ಈಗ ಬಹುತೇಕ ಪ್ರತಿಯೊಂದು ಮನೆಯಲ್ಲೂ ಒಬ್ಬರ ಬಳಿಯಾದರೂ ಮೊಬೈಲ್ ಫೋನ್ಗಳಿವೆ. ದತ್ತಾಂಶದ ಪ್ರಕಾರ 2011-12ರಲ್ಲಿ ಟಾಪ್-20 ಶ್ರೀಮಂತರಲ್ಲಿ ಶೇ. 87.9 ಮಂದಿಗೆ ಮೊಬೈಲ್ ಫೋನ್ ಇತ್ತು. ಕೆಳಗಿನ ಶೇ. 40 ಮನೆಗಳಲ್ಲಿ ಮೊಬೈಲ್ ಫೋನ್ ಇದ್ದದ್ದು ಶೇ. 66.5 ಮಾತ್ರ. ಇವತ್ತು (2023-24) ಈ ಪ್ರಮಾಣವು ಶೇ. 97.9 ಮತ್ತು ಶೇ 94.3 ಆಗಿದೆ.
ಫ್ರಿಡ್ಜ್ ಕೂಡ ಹೆಚ್ಚಿನ ಮನೆಗಳಲ್ಲಿ
ರೆಫ್ರಿಜರೇಟರ್ ಇತ್ತೀಚಿನವರೆಗೂ ಲಕ್ಷುರಿ ಸರಕಾಗಿತ್ತು. ಈಗ ಕೆಳಗಿನ ಶೇ. 40ರಷ್ಟು ಮನೆಗಳಲ್ಲಿ ಫ್ರಿಡ್ಜ್ ಸಾಮಾನ್ಯ ಬಳಕೆಯ ವಸ್ತುವಾಗಿದೆ. 2011-12ರಲ್ಲಿ ಗ್ರಾಮೀಣ ಭಾಗದಲ್ಲಿ ಅಗ್ರ-20 ಮತ್ತು ಕೆಳಗಿನ 40 ಪ್ರತಿಶತ ಮನೆಗಳಲ್ಲಿ ಫ್ರಿಡ್ಜ್ ಹೊಂದಿರುವ ಪ್ರಮಾಣ ಶೇ. 46.3 ಮತ್ತು ಶೇ. 22.5 ಇತ್ತು. 2023-24ರಲ್ಲಿ ಈ ಅಂತರವು ಶೇ. 46.3 ಮತ್ತು ಶೇ. 22.5ಕ್ಕೆ ಇಳಿದಿದೆ. ಇನ್ನು, ನಗರ ಭಾಗದಲ್ಲಿ ಈ ಅಂತರ ಶೇ 70.2 ಮತ್ತು ಶೇ. 57.9ಕ್ಕೆ ಇಳಿದಿದೆ.
ಇದನ್ನೂ ಓದಿ: Shahrukhz Tower: ಶಾರುಕ್ ಖಾನ್ ಎಂದ್ರೆ ದುಬೈನಲ್ಲಿ ಬಲು ಕ್ರೇಜ್; ಅವರ ಹೆಸರಿನ ಟವರ್ಗೆ 5,000 ಕೋಟಿ ರೂಗೂ ಅಧಿಕ ಬೆಲೆ
ಟಿವಿ ಮಾಲಕತ್ವ ಬಡವರಲ್ಲೇ ಹೆಚ್ಚು
ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಪ್ರಕಾರ, ನಗರ ಭಾಗದ ಟಾಪ್20 ಶ್ರೀಮಂತ ಕುಟುಂಬಗಳು ಟಿವಿ ಹೊಂದಿರುವುದು ಶೇ. 72.1 ಮಾತ್ರ. ಆದರೆ, ಕೆಳಗಿನ ಶೇ 40ರಷ್ಟು ಕುಟುಂಬಗಳು ಟಿವಿ ಹೊಂದಿರುವ ಪ್ರಮಾಣ ಶೇ. 77.4. ಅಂದರೆ, ಶ್ರೀಮಂತರಿಗಿಂತ ಬಡವರ ಬಳಿಯೇ ಟಿವಿ ಹೆಚ್ಚು ಇದೆ ಎಂದಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




