AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ

Govt pushing Bangalore, Delhi and Mumbai Airports as global transit hub: ಕೇಂದ್ರ ಸರ್ಕಾರವು ಭಾರತದ ಕೆಲ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ. ದುಬೈ, ಸಿಂಗಾಪುರ ಏರ್​ಪೋರ್ಟ್​ಗಳ ರೀತಿಯಲ್ಲಿ ದೆಹಲಿ, ಬೆಂಗಳೂರು ಮತ್ತು ಮುಂಬೈ ವಿಮಾನ ನಿಲ್ದಾಣಗಳನ್ನು ಟ್ರಾನ್ಸಿಟ್ ಹಬ್ ಆಗಿ ಮಾಡಲಾಗುತ್ತದೆ. ಇದರಿಂದ ಸಣ್ಣ ನಗರಗಳಿಂದ ಜನರು ಅಂತಾರಾಷ್ಟ್ರೀಯ ಪ್ರಯಾಣ ಮಾಡಲು ಅನುಕೂಲ ಆದಂತಾಗುತ್ತದೆ.

ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ
ಬೆಂಗಳೂರು ಏರ್​ಪೋರ್ಟ್​ನ ಒಂದನೇ ಟರ್ಮಿನಲ್Image Credit source: Wikipedia
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2026 | 12:49 PM

Share

ನವದೆಹಲಿ, ಜೂನ್ 22: ದುಬೈ, ದೋಹಾ ಮತ್ತು ಸಿಂಗಾಪುರದಂತಹ ಜಾಗತಿಕವಾಗಿ ಪ್ರಸಿದ್ಧವಾಗಿರುವ ವಿಮಾನ ನಿಲ್ದಾಣಗಳಿಗೆ ನೇರ ಪೈಪೋಟಿ ನೀಡಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರತದ ಪ್ರಮುಖ ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ ಮತ್ತು ಬೆಂಗಳೂರನ್ನು ಅಂತರರಾಷ್ಟ್ರೀಯ ಸಾರಿಗೆ ಕೇಂದ್ರ ಅಥವಾ ಟ್ರಾನ್ಸಿಟ್ ಹಬ್​ಗಳಾಗಿ (Transit Hubs) ಪರಿವರ್ತಿಸಲು ಸರ್ಕಾರ ಯೋಜಿಸುತ್ತಿದೆ.

ಪ್ರಯಾಣಿಕರ ಪ್ರಯಾಣವನ್ನು ಸುಲಭಗೊಳಿಸಲು ವಲಸೆ ಮತ್ತು ಕಸ್ಟಮ್ಸ್ ನಿಯಮಗಳನ್ನು ಸರಳಗೊಳಿಸಲಾಗುತ್ತಿದೆ. ಸಣ್ಣ ನಗರಗಳಿಂದ ಬರುವ ಪ್ರಯಾಣಿಕರು ಅಂತರರಾಷ್ಟ್ರೀಯ ಪ್ರಯಾಣ ಬೆಳೆಸುವಾಗ, ತಮ್ಮ ಮೊದಲ ನಿರ್ಗಮನದ ನಗರದಲ್ಲೇ (ಉದಾಹರಣೆಗೆ ವಾರಣಾಸಿ) ವಲಸೆ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬಹುದು. ಈ ಮೂಲಕ ಕನೆಕ್ಟಿಂಗ್ ಫ್ಲೈಟ್ ಹಿಡಿಯುವ ಜಾಗದಲ್ಲಿ ಸಮಯ ಉಳಿತಾಯವಾಗುತ್ತದೆ. ಏರ್ ಇಂಡಿಯಾ ಸಂಸ್ಥೆಯು ವಾರಣಾಸಿಯಿಂದ ಅಂತರರಾಷ್ಟ್ರೀಯ ಮಾರ್ಗದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಯನ್ನು (Pilot Program) ಆರಂಭಿಸುತ್ತಿದೆ.

ಟ್ರಾನ್ಸಿಟ್ ಹಬ್ ಹೇಗೆ ಕೆಲಸ ಮಾಡುತ್ತದೆ?

ಟ್ರಾನ್ಸಿಟ್ ಹಬ್ ಎಂದರೆ ಸಣ್ಣ ನಗರಗಳಿಂದ ನೇರವಾಗಿ ಇನ್ನೊಂದು ನಗರಕ್ಕೆ ಫ್ಲೈಟ್ ಇಲ್ಲದಾಗ ಟ್ರಾನ್ಸಿಟ್ ಹಬ್ ಮುಖಾಂತರ ಆ ನಗರ ತಲುಪಬಹುದು. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿರುವ ನಿಮ್ಮ ಏರಿಯಾದಿಂದ ನಿಮ್ಮ ಊರಿಗೆ ನೇರ ಬಸ್ ಇರುವುದಿಲ್ಲ. ನೀವು ಮೆಜೆಸ್ಟಿಕ್​ಗೆ ಹೋಗಿ ಅಲ್ಲಿಂದ ಇನ್ನೊಂದು ಬಸ್​ನಲ್ಲಿ ಊರು ತಲುಪಬಹುದು. ಇಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣವು ಟ್ರಾನ್ಸಿಟ್ ಹಬ್ ಆಗಿರುತ್ತದೆ. ಏವಿಯೇಶನ್ ಹಬ್ ಕೂಡ ಹೀಗೆಯೇ ಕೆಲಸ ಮಾಡುತ್ತದೆ. ಈ ವ್ಯವಸ್ಥೆಯಿಂದ ವೈಮಾನಿಕ ಕಂಪನಿಗಳಿಗೆ ಉಳಿತಾಯ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ

ದೆಹಲಿಯಲ್ಲಿ ‘ಏರ್ ಟ್ರೈನ್’ (Air Train) ಯೋಜನೆ

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DIAL) ಟರ್ಮಿನಲ್ 1, ಟರ್ಮಿನಲ್ 2, ಟರ್ಮಿನಲ್ 3, ಏರೋಸಿಟಿ ಮತ್ತು ಕಾರ್ಗೋ ಸಿಟಿಯನ್ನು ಸಂಪರ್ಕಿಸಲು 7.7 ಕಿಲೋಮೀಟರ್ ಉದ್ದದ ಚಾಲಕ ರಹಿತ ‘ಏರ್ ಟ್ರೈನ್’ (Automated People Mover) ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಅಂದಾಜು ವೆಚ್ಚ 3,000 ರಿಂದ 4,000 ಕೋಟಿ ರೂ. ಆಗಿದ್ದು, ಮುಂದಿನ 30 ತಿಂಗಳುಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸೇವೆಯು ಪ್ರಯಾಣಿಕರಿಗೆ ಉಚಿತವಾಗಿರಲಿದೆ.

ಭಾರತೀಯ ವಿಮಾನ ಪ್ರಯಾಣಿಕರ ವೆಚ್ಚದ ಆದಾಯ ಹೊರಹೋಗುವುದು ತಪ್ಪುತ್ತದೆ

ಪ್ರಸ್ತುತ ಭಾರತದ ಬಹುತೇಕ ಅಂತರರಾಷ್ಟ್ರೀಯ ಪ್ರಯಾಣಿಕರು ವಿದೇಶಿ ವಿಮಾನ ನಿಲ್ದಾಣಗಳ (ದುಬೈ ಅಥವಾ ದೋಹಾ) ಮೂಲಕ ಪ್ರಯಾಣಿಸುತ್ತಾರೆ. ಇದರಿಂದ ಭಾರತಕ್ಕೆ ಸಿಗಬೇಕಾದ ಡ್ಯೂಟಿ-ಫ್ರೀ ಶಾಪಿಂಗ್, ರೀಟೇಲ್ ವ್ಯಾಪಾರ ಮತ್ತು ವಿಮಾನ ನಿಲ್ದಾಣದ ಆದಾಯಗಳು ವಿದೇಶಗಳ ಪಾಲಾಗುತ್ತಿವೆ. ಭಾರತದಲ್ಲೇ ಹಬ್‌ಗಳನ್ನು ನಿರ್ಮಿಸುವುದರಿಂದ ಜಿಎಂಆರ್ ಏರ್‌ಪೋರ್ಟ್ಸ್ (GMR Airports) ಮತ್ತು ಅದಾನಿ ಏರ್‌ಪೋರ್ಟ್ಸ್ (Adani Airports) ನಂತಹ ದೇಶೀಯ ಆಪರೇಟರ್‌ಗಳ ಆದಾಯ ಗಣನೀಯವಾಗಿ ಹೆಚ್ಚಾಗಲಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

ಎದುರಾಗಲಿರುವ ಸವಾಲುಗಳು

ಭಾರತದ ಕೆಲ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಮಾಡುವ ಕಾರ್ಯದಲ್ಲಿ ಬಹಳ ಸವಾಲುಗಳಿವೆ. ಗಲ್ಫ್ ದೇಶಗಳ ವಿಮಾನ ನಿಲ್ದಾಣಗಳು ದಶಕಗಳಿಂದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಂತ ವೇಗದ ಕನೆಕ್ಟಿಂಗ್ ಫ್ಲೈಟ್ ವ್ಯವಸ್ಥೆಯನ್ನು ಹೊಂದಿವೆ. ಅವುಗಳ ದಕ್ಷತೆಗೆ ಸಾಟಿಯಾಗುವಂತೆ ಭಾರತೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಬೇಕಾಗುತ್ತದೆ.

ದೆಹಲಿಯ ಏರ್ ಟ್ರೈನ್‌ನಂತಹ ಬೃಹತ್ ಯೋಜನೆಗಳು ನಿಗದಿತ 30 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೆ, ವೆಚ್ಚ ಹೆಚ್ಚಾಗುವ ಮತ್ತು ಹೂಡಿಕೆಯ ಮೇಲಿನ ಲಾಭ ಕಡಿಮೆಯಾಗುವ ಅಪಾಯವಿರುತ್ತದೆ.

ಒಟ್ಟಾರೆಯಾಗಿ, ಭಾರತವು ತನ್ನದೇ ಆದ ವಿಮಾನ ನಿಲ್ದಾಣಗಳನ್ನು ಜಾಗತಿಕ ಮಟ್ಟದ ಸಂಪರ್ಕ ಕೊಂಡಿಯನ್ನಾಗಿ ಮಾಡಲು ಮತ್ತು ವಿದೇಶಿ ಆಪರೇಟರ್‌ಗಳ ಕೈಯಲ್ಲಿರುವ ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳಲು ಹಮ್ಮಿಕೊಂಡಿರುವ ಈ ಬೃಹತ್ ಯೋಜನೆ ಎಷ್ಟು ಯಶಸ್ವಿಗೊಳ್ಳುತ್ತದೆ ಕಾದು ನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us