AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನುಫ್ಯಾಕ್ಚರಿಂಗ್​ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ

Know why India's new service sector production index is important: ಕೇಂದ್ರ ಸರ್ಕಾರ ಸೇವಾ ಕ್ಷೇತ್ರದಲ್ಲಿ ನಡೆಯುವ ಉತ್ಪಾದನೆಯನ್ನು ದಾಖಲಿಸಲು ಹೊಸ ಸೂಚ್ಯಂಕ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಐಎಸ್​ಪಿ ಸೂಚ್ಯಂಕ ಭರ್ಜರಿ ಬೆಳವಣಿಗೆ ದಾಖಲಿಸಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಸೂಚ್ಯಂಕವು ಅಧಿಕೃತ ಸೇವಾ ಕ್ಷೇತ್ರವನ್ನು ಟ್ರ್ಯಾಕ್ ಮಾಡುತ್ತದೆ. ಮುಂದಿನ ದಿನಗಳಲ್ಲಿ ಸಮಗ್ರವಾಗಿ ಟ್ರ್ಯಾಕ್ ಮಾಡಲಿದೆ.

ಮ್ಯಾನುಫ್ಯಾಕ್ಚರಿಂಗ್​ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ
ಉದ್ಯೋಗಿಗಳ ಸಾಂದರ್ಭಿಕ ಚಿತ್ರImage Credit source: Ezra Bailey/Stone/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 14, 2026 | 7:08 PM

Share

ನವದೆಹಲಿ, ಜುಲೈ 14: ಭಾರತದ ಆರ್ಥಿಕ ಚಿತ್ರಣವನ್ನು ಹೆಚ್ಚು ನಿಖರವಾಗಿ ತೆರೆದಿಡುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಪ್ರಮುಖ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೇವಾ ವಲಯದ ಉತ್ಪಾದನಾ ಸೂಚ್ಯಂಕವನ್ನು (Index of Services Production – ISP) ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ಉಪ-ವಲಯ ಪ್ರಾಯೋಗಿಕ ‘ಸೇವಾ ವಲಯದ ಉತ್ಪಾದನಾ ಸೂಚ್ಯಂಕ’ ಆಗಿದೆ. 2024-25ನೇ ಸಾಲನ್ನು ಮೂಲ ವರ್ಷವನ್ನಾಗಿ (Base Year) ಇಟ್ಟುಕೊಂಡು, ಮೊದಲ ಹಂತವಾಗಿ 2026ರ ಏಪ್ರಿಲ್ ತಿಂಗಳ ಇಎಸ್‌ಪಿ ದತ್ತಾಂಶಗಳನ್ನು 19 ಉಪ-ವಲಯಗಳಿಗೆ ಬಿಡುಗಡೆ ಮಾಡಲಾಗಿದೆ.

ಏನಿದು ‘ISP’ ಸೂಚ್ಯಂಕ?

ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಬೆಳವಣಿಗೆ ಅಳೆಯಲು ಐಐಪಿ (ಕೈಗಾರಿಕಾ ಉತ್ಪಾದನಾ ಸೂಚ್ಯಂಕ) ಸೂಚ್ಯಂಕ ಇದೆ. ಭಾರತದ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚು ಕೊಡುಗೆ ಸರ್ವಿಸ್ ಸೆಕ್ಟರ್​ನಿಂದ ಬರುತ್ತದೆ. ಈ ಕ್ಷೇತ್ರದ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಅಳೆಯಲು ಈ ಹೊಸ ಸೂಚ್ಯಂಕ ರೂಪಿಸಲಾಗಿದೆ. ಪ್ರಸ್ತುತ ಬಿಡುಗಡೆ ಮಾಡಲಾದ 19 ಉಪ-ವಲಯಗಳು ಒಟ್ಟಾರೆ ಸೇವಾ ವಲಯದ ಸುಮಾರು ಶೇಕಡಾ 60 ರಷ್ಟು ಭಾಗವನ್ನು ಒಳಗೊಂಡಿವೆ. ಇನ್ನು ಮುಂದೆ ಪ್ರತಿ ತಿಂಗಳ 29 ರಂದು ಈ ಸೂಚ್ಯಂಕವನ್ನು ಸರಣಿಯಾಗಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

2025ರ ಮೇ ತಿಂಗಳಲ್ಲಿ ರಚಿಸಲಾಗಿದ್ದ ತಾಂತ್ರಿಕ ಸಲಹಾ ಸಮಿತಿಯ (TAC-ISP) ಮಾರ್ಗದರ್ಶನದನ್ವಯ ಜಿಎಸ್‌ಟಿ (GST) ದತ್ತಾಂಶ ಮತ್ತು ಇತರೆ ಆಡಳಿತಾತ್ಮಕ ದಾಖಲೆಗಳ ಆಧಾರದ ಮೇಲೆ ಕೇವಲ ‘ಔಪಚಾರಿಕ ಸೇವಾ ವಲಯವನ್ನು’ (Formal Sector) ಮಾತ್ರ ಈ ಸೂಚ್ಯಂಕಕ್ಕೆ ಪರಿಗಣಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ

2026ರ ಏಪ್ರಿಲ್​ನಲ್ಲಿ ಐಎಸ್​ಪಿ ಸೂಚ್ಯಂಕದ ಮುಖ್ಯಾಂಶಗಳು

ಕಳೆದ ವರ್ಷದ (ಏಪ್ರಿಲ್ 2025) ಪ್ರಾಯೋಗಿಕ ದತ್ತಾಂಶಕ್ಕೆ ಹೋಲಿಸಿದರೆ, ಏಪ್ರಿಲ್ 2026 ರಲ್ಲಿ ಭಾರತದ ಸೇವಾ ವಲಯವು ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟು 19 ಉಪ-ವಲಯಗಳ ಪೈಕಿ 14 ವಲಯಗಳು ಎರಡಂಕಿ (Double-digit) ಪ್ರಗತಿಯನ್ನು ಕಂಡಿವೆ.

ಅತಿ ಹೆಚ್ಚು ಬೆಳವಣಿಗೆ ಕಂಡ ವಲಯಗಳು: ವಸತಿ ಮತ್ತು ಆಹಾರ ಸೇವೆಗಳು (Accommodation and Food) ಶೇ. 37.2, ಚಿಲ್ಲರೆ ವ್ಯಾಪಾರ (Retail Trade) ಶೇ. 30.8, ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು ಶೇ. 28.7 ಹಾಗೂ ರಿಯಲ್ ಎಸ್ಟೇಟ್ ವಲಯವು ಶೇ. 27.7 ರಷ್ಟು ಭರ್ಜರಿ ಪ್ರಗತಿ ಸಾಧಿಸಿವೆ.

ಕುಸಿತ ಕಂಡ ವಲಯಗಳು: ವಾಯು ಸಾರಿಗೆ (Air Transport) ವಲಯವು ಶೇ. -13.9 ರಷ್ಟು ಮತ್ತು ರೈಲ್ವೆ ಸಾರಿಗೆಯು ಶೇ. -0.4 ರಷ್ಟು ಇಳಿಕೆ ದಾಖಲಿಸಿವೆ.

ಸೇವಾ ಕ್ಷೇತ್ರದ ವಿವಿಧ ಉಪ-ವಲಯಗಳ ಪ್ರಗತಿ (ಏಪ್ರಿಲ್ 2025 ಕ್ಕೆ ಹೋಲಿಕೆ)

ಕ್ರ. ಸಂ. ಸೇವಾ ಉಪ-ವಲಯ (Sub-Sector) ಪ್ರಗತಿ (%)
1) ವಸತಿ ಮತ್ತು ಆಹಾರ ಸೇವೆಗಳು (Accommodation & Food) 37.2%
2) ಚಿಲ್ಲರೆ ವ್ಯಾಪಾರ (Retail Trade) 30.8%
3) ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು (Administrative and Support service) 28.7%
4) ದೂರಸಂಪರ್ಕ (Telecommunications) 22.8%
5) ರಿಪೇರಿ ಸೇವೆಗಳು (Repair Services) 19.2%
6) ರಸ್ತೆ ಸಾರಿಗೆ (Road Transport) 18.5%
7) ಕಲೆ, ಮನರಂಜನೆ ಸೇವೆ (Arts, Entertainment and Recreation) 16.4
8) ಇನ್ಶೂರೆನ್ಸ್ / ವಿಮೆ (Insurance) 15.6%
9) ಐಟಿ ಮತ್ತು ಕಂಪ್ಯೂಟರ್ ಸೇವೆಗಳು (IT Services) 15.2%
10) ಬ್ಯಾಂಕಿಂಗ್ (Banking) 12.2%

ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ

ಈ ಐಎಸ್​ಪಿ ಸೂಚ್ಯಂಕ ಏಕೆ ಮುಖ್ಯ?

ಇಲ್ಲಿಯವರೆಗೆ ಭಾರತದಲ್ಲಿ ಕೈಗಾರಿಕಾ ಪ್ರಗತಿಯನ್ನು ಅಳೆಯಲು ‘ಐಐಪಿ’ (IIP) ಸೂಚ್ಯಂಕ ಇತ್ತಾದರೂ, ಸೇವಾ ವಲಯದ ಅಲ್ಪಾವಧಿಯ ಚಲನವಲನಗಳನ್ನು ಮಾಸಿಕವಾಗಿ ನಿಖರವಾಗಿ ಅಳೆಯುವ ವ್ಯವಸ್ಥೆ ಇರಲಿಲ್ಲ. ಈ ಹೊಸ ಸೂಚ್ಯಂಕವು ದೇಶದ ಆರ್ಥಿಕತೆಯ ನಿಜವಾದ ಚಿತ್ರಣವನ್ನು ನೀಡಲು ಸಹಾಯ ಮಾಡುತ್ತದೆ. ಇದು ಸರ್ಕಾರದ ಆರ್ಥಿಕ ನೀತಿ ನಿರೂಪಣೆಗೆ, ಹೂಡಿಕೆದಾರರಿಗೆ ಮತ್ತು ಮಾರುಕಟ್ಟೆಯ ವಿಶ್ಲೇಷಣೆಗೆ ದಿಕ್ಸೂಚಿಯಾಗಲಿದೆ.

ಪ್ರಸ್ತುತ ಇದನ್ನು ಪ್ರಾಯೋಗಿಕ ಹಂತದಲ್ಲಿ (Experimental basis) ಬಿಡುಗಡೆ ಮಾಡಲಾಗಿದ್ದು, ದತ್ತಾಂಶಗಳ ಸ್ಥಿರತೆಯನ್ನು ಅಧ್ಯಯನ ಮಾಡಿದ ಬಳಿಕ ಒಟ್ಟಾರೆ ಸಮಗ್ರ ಜಾಗತಿಕ ಸೂಚ್ಯಂಕವನ್ನು ಹೊರತರಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Tue, 14 July 26

Follow Us