ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ತೆರಿಗೆ ವಿನಾಯಿತಿ; ಸೈಕಲ್, ನೋಟ್​ಬುಕ್​ಗೆ ಜಿಎಸ್​ಟಿ ಇಳಿಕೆ; ದುಬಾರಿ ವಾಚು, ಶೂಗಳಿಗೆ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾಪ

GoM meeting decide on GST exemption for insurance premium: ಟರ್ಮ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್​ಗೆ ಜಿಎಸ್​ಟಿ ರದ್ದುಗೊಳಿಸಲು ಸಚಿವರ ಸಮಿತಿ ಪ್ರಸ್ತಾಪ ಮಾಡಿದೆ. 5 ಲಕ್ಷ ರೂವರೆಗಿನ ಕವರೇಜ್ ಇರುವ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್​ಗೂ ಜಿಎಸ್​ಟಿ ವಿನಾಯಿತಿ ಕೊಡಬೇಕು, ಹಿರಿಯ ನಾಗರಿಕರ ಇನ್ಷೂರೆನ್ಸ್ ಪ್ರೀಮಿಯಮ್​ಗೂ ವಿನಾಯಿತಿ ಕೊಡಬೇಕು ಎಂದು ಜಿಒಎಂ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಒಎಂ ತನ್ನ ವರದಿಯನ್ನು ಜಿಎಸ್​ಟಿ ಮಂಡಳಿಗೆ ಸಲ್ಲಿಸಲಿದೆ.

ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ತೆರಿಗೆ ವಿನಾಯಿತಿ; ಸೈಕಲ್, ನೋಟ್​ಬುಕ್​ಗೆ ಜಿಎಸ್​ಟಿ ಇಳಿಕೆ; ದುಬಾರಿ ವಾಚು, ಶೂಗಳಿಗೆ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾಪ
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2024 | 11:35 AM

ನವದೆಹಲಿ, ಅಕ್ಟೋಬರ್ 20: ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಸಮಿತಿ ವಿವಿಧ ಜಿಎಸ್​ಟಿ ದರಗಳಲ್ಲಿ ಬದಲಾವಣೆ ಮಾಡಲು ಶಿಫಾರಸು ಮಾಡಿದೆ. ಕೆಲ ವಸ್ತುಗಳಿಗೆ ಶೇ. 28ರಷ್ಟು ಅಧಿಕ ಜಿಎಸ್​ಟಿ ವಿಧಿಸುವ ಪ್ರಸ್ತಾಪ ಮಾಡಿದೆ. ಹಾಗೆಯೇ ಕೆಲ ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ತೆರಿಗೆ ವಿನಾಯಿತಿ ಕೊಡುವ ನಿರ್ಧಾರಕ್ಕೂ ಸಮಿತಿ ಸಭೆಯಲ್ಲಿ ಬರಲಾಗಿದೆ. ಒಟ್ಟಾರೆ ಸಚಿವರ ಸಮಿತಿಯ ಶಿಫಾರಸು ಜಾರಿಗೆ ಬಂದರೆ ಸರ್ಕಾರಕ್ಕೆ ಬರೋಬ್ಬರಿ 20,000 ಕೋಟಿ ರೂಗೂ ಅಧಿಕ ಮೊತ್ತದ ಹೆಚ್ಚುವರಿ ಆದಾಯ ಸಿಗುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ಗುಜರಾತ್, ಗೋವಾ, ತೆಲಂಗಾಣ ಮೊದಲಾದ ವಿವಿಧ ರಾಜ್ಯಗಳ ಸಚಿವರುಗಳು ಈ ಜಿಒಎಂ ಸಮಿತಿಯಲ್ಲಿ ಇದ್ದಾರೆ. ಈ ತಿಂಗಳ ಅಂತ್ಯದೊಳಗೆ ಸಚಿವರ ಸಮಿತಿಯು ಜಿಎಸ್​ಟಿ ಮಂಡಳಿಗೆ ತನ್ನ ವರದಿ ಸಲ್ಲಿಸಬೇಕಾಗಿದೆ.

ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಜಿಎಸ್​ಟಿಯಿಂದ ವಿನಾಯಿತಿ?

ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಮೇಲೆ ಜಿಎಸ್​ಟಿ ತೆರಿಗೆಯಿಂದ ವಿನಾಯಿತಿ ನೀಡಬೇಕಾ ಬೇಡವಾ ಎಂದು ನಿರ್ಧರಿಸಲೆಂದೇ ನಿನ್ನೆ ಶನಿವಾರ ಸಚಿವರ ಸಮಿತಿ ಸಭೆ ನಡೆಸಲಾಗಿತ್ತು. ಸದ್ಯ ಇನ್ಷೂರೆನ್ಸ್ ಪ್ರೀಮಿಯಮ್​ಗಳ ಮೇಲೆ ಶೇ. 18ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿದೆ. ಕೆಲ ಮಿತಿಗಳ ನಡುವೆ ಈಗ ವಿನಾಯಿತಿ ನೀಡಬಹುದು ಎಂದು ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: ಓಲಾ, ಸ್ವಿಗ್ಗಿ ಇತ್ಯಾದಿಯಲ್ಲಿ ಪ್ರತಿ ವಹಿವಾಟಿಗೆ ಶುಲ್ಕ ವಸೂಲಿ ಮಾಡಲು ಕರ್ನಾಟಕ ಸರ್ಕಾರ ಯೋಜನೆ

ಅಂದರೆ, ಟರ್ಮ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್​ಗೆ ಪೂರ್ಣ ಜಿಎಸ್​ಟಿ ವಿನಾಯಿತಿ ಕೊಡುವ ಪ್ರಸ್ತಾಪ ಮಾಡಲಾಗಿದೆ. ಹಿರಿಯ ನಾಗರಿಕರ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್​ಗೂ ವಿನಾಯಿತಿ ಕೊಡಬಹುದು. ಹಿರಿಯ ನಾಗರಿಕರಲ್ಲದ ಇತರ ಸಾಮಾನ್ಯ ವ್ಯಕ್ತಿಗಳ 5 ಲಕ್ಷ ರೂವರೆಗಿನ ಕವರೇಜ್ ಇರುವ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ ಹಣಕ್ಕೂ ತೆರಿಗೆ ವಿನಾಯಿತಿ ಕೊಡಬಹುದು ಎಂದು ಜಿಒಎಂ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಶೂ, ವಾಚುಗಳಿಗೆ ಜಿಎಸ್​ಟಿ ಶೇ. 18ರಿಂದ ಶೇ. 28ಕ್ಕೆ ಏರಿಸಲು ಸಲಹೆ

ಹದಿನೈದು ಸಾವಿರ ರೂಗೂ ಹೆಚ್ಚು ಬೆಲೆ ಇರುವ ಶೂಗಳ ಮೇಲೆ ಶೇ. 18ರಷ್ಟಿರುವ ಜಿಎಸ್​ಟಿಯನ್ನು ಶೇ. 28ಕ್ಕೆ ಏರಿಸಬೇಕೆಂದು ಸಚಿವರ ಸಮಿತಿ ಪ್ರಸ್ತಾಪಿಸಿದೆ. ಹಾಗೆಯೇ, 25,000 ರೂಗೂ ಹೆಚ್ಚು ಮೌಲ್ಯದ ವಾಚುಗಳಿಗೂ ಜಿಎಸ್​ಟಿಯನ್ನು ಶೇ. 28ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಲಿದೆ.

20 ಲೀಟರ್​ನ ಕುಡಿಯುವ ನೀರಿನ ಡಬ್ಬಕ್ಕೆ ಜಿಎಸ್​ಟಿ ಶೇ. 5ರಿಂದ ಶೇ. 18ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ: ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ 21 ದಿನದೊಳಗೆ ಪರಿಹಾರ: ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದ ಸರ್ಕಾರ

ಬೈಸಿಕಲ್, ನೋಟ್​​ಬುಕ್​ಗಳಿಗೆ ತೆರಿಗೆ ಇಳಿಕೆ

10,000 ರೂಗಿಂತ ಕಡಿಮೆ ಮೌಲ್ಯದ ಬೈಸಿಕಲ್ ಮೇಲೆ ಶೇ. 12ರಷ್ಟಿರುವ ಜಿಎಸ್​ಟಿಯನ್ನು ಶೇ 5ಕ್ಕೆ ಇಳಿಸಬಹುದು; ಎಕ್ಸೈಸ್ ನೋಟ್​ಬುಕ್​ಗಳ ಮೇಲಿನ ಜಿಎಸ್​ಟಿಯನ್ನೂ ಶೇ. 5ಕ್ಕೆ ಇಳಿಸಬಹುದು ಎಂದು ಸಚಿವರ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಅಕ್ಟೋಬರ್ ಅಂತ್ಯದೊಳಗೆ ಸಚಿವರ ಸಮಿತಿ ತನ್ನ ವರದಿಯನ್ನು ಜಿಎಸ್​ಟಿ ಮಂಡಳಿಗೆ ಸಲ್ಲಿಸಬೇಕಿದೆ. ನವೆಂಬರ್ ತಿಂಗಳಲ್ಲಿ ಮುಂದಿನ ಜಿಎಸ್​ಟಿ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಸಚಿವರ ಸಮಿತಿ ಮಾಡಿರುವ ಶಿಫಾರಸುಗಳನ್ನು ಪರಿಗಣಿಸಿ ಒಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ