GST for Home Rent: ಹೊಸ ಜಿಎಸ್​ಟಿ ನಿಯಮ, ವಸತಿ ಮನೆ ಬಾಡಿಗೆ ಪಡೆದರೂ ಜಿಎಸ್​ಟಿ ಪಾವತಿ ಕಡ್ಡಾಯ; ಎಷ್ಟು ಗೊತ್ತಾ?

| Updated By: Rakesh Nayak Manchi

Updated on: Aug 12, 2022 | 3:04 PM

ಈ ಹಿಂದೆ ವಾಣಿಜ್ಯ ಆಸ್ತಿಗಳಿಗೆ ಮಾತ್ರ ಜಿಎಸ್​ಟಿ ವಿಧಿಸಲಾಗುತ್ತಿತ್ತು. ಆದರೀಗ ಹೊಸ ಜಿಎಸ್​ಟಿ ನಿಯಮದ ಪ್ರಕಾರ, ಜಿಎಸ್​ಟಿ ನೋಂದಾಯಿತ ವ್ಯಕ್ತಿಗಳು ಮನೆ ಬಾಡಿಗೆದಾರರಾಗಿದ್ದರೇ ಬಾಡಿಗೆ ಹಣದ ಮೇಲೆ ಶೇ.18 ರಷ್ಟು ಜಿಎಸ್​ಟಿ ಪಾವತಿಸಬೇಕು. ಸಾಮಾನ್ಯ ಸಂಬಳದಾರರು ಜಿಎಸ್​ಟಿ ನೋಂದಾವಣೆ ಆಗದಿದ್ದರೇ ಜಿಎಸ್​ಟಿ‌ ಪಾವತಿಸಬೇಕಿಲ್ಲ.

GST for Home Rent: ಹೊಸ ಜಿಎಸ್​ಟಿ ನಿಯಮ, ವಸತಿ ಮನೆ ಬಾಡಿಗೆ ಪಡೆದರೂ ಜಿಎಸ್​ಟಿ ಪಾವತಿ ಕಡ್ಡಾಯ; ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ನಮಗೆ-ನಿಮಗೆ ತಿಳಿದಿರುವಂತೆ ವಾಣಿಜ್ಯ ಆಸ್ತಿಗಳನ್ನು ಬಾಡಿಗೆಗೆ ಪಡೆದರೆ ಮಾತ್ರ ಜಿಎಸ್​ಟಿ ಪಾವತಿಸಬೇಕಿತ್ತು. ಇನ್ನು ಮುಂದೆ ಹಾಗಿಲ್ಲ, ಜಿಎಸ್​ಟಿ ನೋಂದಾಯಿತ ವ್ಯಕ್ತಿಗಳು ವಸತಿ ಮನೆ ಬಾಡಿಗೆದಾರರಾಗಿದ್ದರೂ ಜಿಎಸ್​ಟಿ ಕಟ್ಟಲೇಬೇಕು. ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ ಜಿಎಸ್​ಟಿ ನೋಂದಾಯಿತ ಉದ್ಯಮಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರೆ ಆತ ಬಾಡಿಗೆ ಹಣದ ಜೊತೆಗೆ ಶೇ.18 ರಷ್ಟು ಜಿಎಸ್​ಟಿ ಪಾವತಿಸಬೇಕು. ಆದರೆ ಮನೆ ಮಾಲೀಕರು ಜಿಎಸ್​ಟಿ ಪಾವತಿಸಬೇಕಿಲ್ಲ. ಹಾಗಿದ್ದರೆ ಸಾಮಾನ್ಯ ಸಂಬಳದಾರರ ಕಥೆ ಏನು? ಸಾಮಾನ್ಯ ಸಂಬಳದಾರರು ಜಿಎಸ್​ಟಿ ನೋಂದಾವಣೆ ಆಗದಿದ್ದರೇ ಜಿಎಸ್​ಟಿ‌ ಪಾವತಿಸಬೇಕಿಲ್ಲ.

ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ, ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಒಬ್ಬ ಬಾಡಿಗೆದಾರನು ವಸತಿ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅಂದರೆ ಮನೆಯ ತಿಂಗಳ ಬಾಡಿಗೆ 20 ಸಾವಿರ ರೂಪಾಯಿ ಇದ್ದಾಗ ಶೇ.18 ರಷ್ಟು ಜಿಎಸ್​ಟಿಯಾಗಿ 3,600 ರೂಪಾಯಿ ಪಾವತಿಸಬೇಕು.

ಜಿಎಸ್​ಟಿ ಅಡಿಯಲ್ಲಿ ನೋಂದಾಯಿತ ಬಾಡಿಗೆದಾರರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈ ಹಿಂದೆ ಬಾಡಿಗೆ ಮನೆ ಅಥವಾ ಲೀಸ್​ನಲ್ಲಿ ನೀಡಲಾದ ಕಚೇರಿಗಳು ಅಥವಾ ಚಿಲ್ಲರೆ ಸ್ಥಳಗಂತಹ ವಾಣಿಜ್ಯ ಆಸ್ತಿಗಳು ಮಾತ್ರ ಜಿಎಸ್​ಟಿಗೆ ಒಳಪಟ್ಟಿದ್ದವು. ಆದರೆ ಕಾರ್ಪೊರೇಟ್ ಮನೆಗಳು ಅಥವಾ ವ್ಯಕ್ತಿಗಳಿಂದ ವಸತಿ ಆಸ್ತಿಗಳ ಬಾಡಿಗೆ ಅಥವಾ ಗುತ್ತಿಗೆಯ ಮೇಲೆ ಯಾವುದೇ ಜಿಎಸ್​ಟಿ ವಿಧಿಸಲಾಗುತ್ತಿರಲಿಲ್ಲ.

ಹೊಸ ನಿಯಮಗಳ ಪ್ರಕಾರ, ಜಿಎಸ್​ಟಿ ನೋಂದಾಯಿತ ಬಾಡಿಗೆದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಅದಾಗ್ಯೂ ಆತ ಇನ್‌ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಪಾವತಿಸಿದ ಜಿಎಸ್​ಟಿಯನ್ನು ಕಡಿತವಾಗಿ ಕ್ಲೈಮ್ ಮಾಡಬಹುದು. ಜಿಎಸ್​ಟಿ ಅಡಿಯಲ್ಲಿ ನೋಂದಾಯಿಸಿಕೊಂಡಾಗ ಮತ್ತು ಜಿಎಸ್​ಟಿ ರಿಟರ್ನ್‌ಗಳನ್ನು ಸಲ್ಲಿಸಲು ಹೊಣೆಗಾರನಾಗಿದ್ದರೆ ಮಾತ್ರ ತೆರಿಗೆ ಅನ್ವಯಿಸುತ್ತದೆ. ಆದರೆ ವಸತಿ ಆಸ್ತಿಯ ಮಾಲೀಕರು ಜಿಎಸ್‌ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.

“ಯಾವುದೇ ಸಾಮಾನ್ಯ ವೇತನದಾರರು ವಸತಿ ಮನೆ ಅಥವಾ ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆಗೆ ತೆಗೆದುಕೊಂಡಿದ್ದರೆ ಅವರು ಜಿಎಸ್​ಟಿ ಪಾವತಿಸಬೇಕಾಗಿಲ್ಲ. ಆದಾಗ್ಯೂ, ವ್ಯಾಪಾರ ಅಥವಾ ವೃತ್ತಿಯನ್ನು ನಿರ್ವಹಿಸುವ ಜಿಎಸ್‌ಟಿ ನೋಂದಾಯಿತ ವ್ಯಕ್ತಿಯು ಮಾಲೀಕರಿಗೆ ಪಾವತಿಸುವ ಅಂತಹ ಬಾಡಿಗೆಯೊಂದಿಗೆ ಶೇ.18 ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ” ಎಂದು ಕ್ಲಿಯರ್‌ಟ್ಯಾಕ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ವಿವರಿಸಿದ್ದಾಗಿ ಮಿಂಟ್ ವರದಿ ಮಾಡಿದೆ.

ಜಿಎಸ್‌ಟಿ ನೋಂದಾಯಿತ ವ್ಯಕ್ತಿ ಬಾಡಿಗೆಗೆ ಪಡೆದ ವಸತಿ ಆಸ್ತಿಯಿಂದ ಸೇವೆಗಳನ್ನು ಒದಗಿಸಿದರೆ ಅವರು 18 ಪ್ರತಿಶತದಷ್ಟು ತೆರಿಗೆಯನ್ನು ಪಾವತಿಸಲು ಹೊಣೆಗಾರರಾಗಿರುತ್ತಾನೆ. ಜಿಎಸ್​ಟಿ ಕಾನೂನಿನಡಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ನೋಂದಾಯಿತ ವ್ಯಕ್ತಿಗಳು ಒಳಗೊಂಡಿರುತ್ತಾರೆ. ವ್ಯಾಪಾರ ಅಥವಾ ವೃತ್ತಿಯನ್ನು ನಡೆಸುತ್ತಿರುವ ವ್ಯಕ್ತಿಯು ಮಿತಿ ಮತ್ತು ಮಿತಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟನ್ನು ತಲುಪಿದಾಗ ಜಿಎಸ್​ಟಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಜಿಎಸ್​ಟಿ ಕಾನೂನಿನಡಿಯಲ್ಲಿ ಮಿತಿಯು ಪೂರೈಕೆಯ ಸ್ವರೂಪ ಮತ್ತು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಸೇವೆಗಳನ್ನು ಪೂರೈಸುವ ನೋಂದಾಯಿತ ವ್ಯಕ್ತಿಗೆ 20 ಲಕ್ಷ ರೂ. ಮಿತಿ ನಿಗದಿಪಡಿಸಲಾಗಿದೆ. ಕೇವಲ ಸರಕುಗಳ ಪೂರೈಕೆದಾರರಿಗೆ 40 ಲಕ್ಷ ಮಿತಿ ನಿಗದಿಪಡಿಸಲಾಗಿದ್ದು, ನೋಂದಾಯಿತ ಘಟಕವು ಯಾವುದೇ ಈಶಾನ್ಯ ರಾಜ್ಯಗಳು ಅಥವಾ ವಿಶೇಷ ವರ್ಗದ ರಾಜ್ಯಗಳಲ್ಲಿ ನೆಲೆಗೊಂಡಿದ್ದರೆ ಪ್ರತಿ ಹಣಕಾಸು ವರ್ಷಕ್ಕೆ 10 ಲಕ್ಷ ಮಿತಿ ನಿಗದಿ ಮಾಡಲಾಗಿದೆ.

ಹೊಸ ನಿಯಮ ಯಾರ ಮೇಲೆ ಪ್ರಭಾವ ಬೀರಲಿದೆ?

ಜಿಎಸ್‌ಟಿ ಮಂಡಳಿಯ 47ನೇ ಸಭೆಯ ನಂತರ ಜಾರಿಗೆ ತರಲಾದ ಹೊಸ ಬದಲಾವಣೆಗಳು ಬಾಡಿಗೆ ಅಥವಾ ಗುತ್ತಿಗೆಗೆ ವಸತಿ ಆಸ್ತಿಗಳನ್ನು ತೆಗೆದುಕೊಂಡಿರುವ ಕಂಪನಿಗಳು ಮತ್ತು ವೃತ್ತಿಪರರ ಮೇಲೆ ಪರಿಣಾಮ ಬೀರುತ್ತವೆ. ಉದ್ಯೋಗಿಗಳಿಗೆ ಅತಿಥಿ ಗೃಹಗಳು ಅಥವಾ ನಿವಾಸಗಳಾಗಿ ಬಳಸಲು ಬಾಡಿಗೆಗೆ ತೆಗೆದುಕೊಂಡ ವಸತಿ ಆಸ್ತಿಗಳಿಗೆ ಕಂಪನಿಗಳು ಪಾವತಿಸುವ ಬಾಡಿಗೆಗೆ ಈಗ ಶೇ.18 ಜಿಎಸ್‌ಟಿ ವಿಧಿಸಲಾಗುತ್ತದೆ. ಇದು ಉದ್ಯೋಗಿಗಳಿಗೆ ಉಚಿತ ವಸತಿ ನೀಡುತ್ತಿರುವ ಕಂಪನಿಗಳಿಗೆ ಉದ್ಯೋಗಿಗಳ ವೆಚ್ಚವನ್ನು ಹೆಚ್ಚಿಸುತ್ತದೆ.