ಸಣ್ಣ ಸೆಟಿಲೈಟ್​​ಗಳನ್ನು ಹೊತ್ತೊಯ್ಯುವ ಎಸ್​​ಎಸ್​​ಎಲ್​​ವಿ ರಾಕೆಟ್​​​ಗಳನ್ನು ತಯಾರಿಸುವ ಗುತ್ತಿಗೆ ಎಚ್​​ಎಎಲ್​​ಗೆ

HAL gets contract to build SSLV rockets: ಬೆಂಗಳೂರಿನ ಏರೋಸ್ಪೇಸ್ ಕಂಪನಿಯಾದ ಎಚ್​​ಎಎಲ್ ಈಗ ಎಸ್​​ಎಸ್​​ಎಲ್​​ವಿ ರಾಕೆಟ್ ತಯಾರಿಸುವ ಗುತ್ತಿಗೆಯನ್ನು ಪಡೆದಿದೆ. ಇಸ್ರೋ ಹಾಗೂ ಇನ್​​ಪಸ್ಪೇಸ್ ಕರೆದಿದ್ದ ಬಿಡ್​​ನಲ್ಲಿ ಒಂಬತ್ತು ಕಂಪನಿಗಳ ಪೈಕಿ ಎಚ್​​ಎಎಲ್ ಆಯ್ಕೆಯಾಗಿದೆ. ಇದು 511 ಕೋಟಿ ರೂ ಬಿಡ್ ಸಲ್ಲಿಸಿತ್ತು. ವರ್ಷಕ್ಕೆ 6-12 ಎಸ್​​ಎಸ್​​ಎಲ್​​ವಿ ರಾಕೆಟ್​​ಗಳನ್ನು ನಿರ್ಮಿಸುವ ಗುರಿಯನ್ನು ಎಚ್​​ಎಎಲ್ ಹೊಂದಿದೆ.

ಸಣ್ಣ ಸೆಟಿಲೈಟ್​​ಗಳನ್ನು ಹೊತ್ತೊಯ್ಯುವ ಎಸ್​​ಎಸ್​​ಎಲ್​​ವಿ ರಾಕೆಟ್​​​ಗಳನ್ನು ತಯಾರಿಸುವ ಗುತ್ತಿಗೆ ಎಚ್​​ಎಎಲ್​​ಗೆ
ಎಸ್​​ಎಸ್​​​ಎಲ್​​ವಿ

Updated on: Jun 20, 2025 | 6:03 PM

ನವದೆಹಲಿ, ಜೂನ್ 20: ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (HAL) ಇದೀಗ ಸಣ್ಣ ರಾಕೆಟ್​​ಗಳನ್ನು ಅಥವಾ ಉಡಾವಣಾ ವಾಹನಗಳನ್ನು (SSLV- Small Satellite Launch Vehicles) ತಯಾರಿಸುವ ಗುತ್ತಿಗೆ ಗಿಟ್ಟಿಸಿದೆ. ಸಣ್ಣ ಸೆಟಿಲೈಟ್​​ಗಳನ್ನು ಹೊತ್ತು ಹೋಗಬಲ್ಲ ಎಸ್​​ಎಸ್​​​ಎಲ್​​ವಿ ರಾಕೆಟ್​​ಗಳನ್ನು (SSLV rockets) ತಯಾರಿಸುವ ಗುತ್ತಿಗೆಗಾಗಿ ನಡೆಸಲಾದ ಬಿಡ್ ಅನ್ನು ಎಚ್​​ಎಎಲ್ ಗೆದ್ದಿದೆ. ಬೆಂಗಳೂರಿನ ಮತ್ತೊಂದು ಕಂಪನಿಯಾದ ಆಲ್ಫಾ ಡಿಸೈನ್ ಹಾಗೂ ಹೈದರಾಬಾದ್ ಮೂಲದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿಗಳ ನೇತೃತ್ವದ ಇನ್ನೆರಡು ಗುಂಪುಗಳು ಕೂಡ ಈ ಗುತ್ತಿಗೆಗಾಗಿ ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಅತಿಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಎಚ್​​ಎಎಲ್​​ಗೆ ಗುತ್ತಿಗೆ ಸಿಕ್ಕಿದೆ. ಎಚ್​​ಎಎಲ್ 511 ಕೋಟಿ ರೂ ಮೊತ್ತವನ್ನು ಆಫರ್ ಮಾಡಿತ್ತು.

ಈ ಗುತ್ತಿಗೆಯೊಂದಿಗೆ, ಎಚ್​​ಎಎಲ್ ರಾಕೆಟ್ ತಯಾರಿಸುವ ಮೂರನೇ ಕಂಪನಿ ಎನಿಸಿದೆ. ಈಗಾಗಲೇ ಹೈದರಾಬಾದ್​​ನ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಹಾಗೂ ಚೆನ್ನೈನ ಅಗ್ನಿಕುಲ್ ಕಾಸ್ಮೋಸ್ (Agnikul Cosmos) ಎನ್ನುವ ಖಾಸಗಿ ಕಂಪನಿಗಳು ರಾಕೆಟ್​​ಗಳನ್ನು ತಯಾರಿಸಲು ಆರಂಭಿಸಿವೆ.

ಇದನ್ನೂ ಓದಿ: ಫ್ರಾನ್ಸ್​ನ ಏರೋಸ್ಪೇಸ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲಿರುವ ವಿಪ್ರೋ

ಎಸ್​​ಎಸ್​​ಎಲ್​​ವಿ ರಾಕೆಟ್ ತಯಾರಿಸುವ ಗುತ್ತಿಗೆಗಾಗಿ ಎರಡು ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಇಸ್ರೋ ಹಾಗೂ ಇನ್​​ಸ್ಪೇಸ್ (In-SPACE) (ಬಾಹ್ಯಾಕಾಶ ನಿಯಂತ್ರಕ ಸಂಸ್ಥೆ) ಜಂಟಿಯಾಗಿ ಈ ಬಿಡ್ ಕರೆದಿದ್ದುವು. ಒಟ್ಟು 9 ಬಿಡ್​​ಗಳು ಸಲ್ಲಿಕೆಯಾಗಿದ್ದವು. ಮೊದಲ ಹಂತದ ಪರಿಶೀಲನೆ ಬಳಿಕ ಆರು ಕಂಪನಿಗಳನ್ನು ಶಾರ್ಟ್​​ಲಿಸ್ಟ್ ಮಾಡಲಾಯಿತು. ಎರಡನೇ ಹಂತದಲ್ಲಿ ಎಚ್​​ಎಎಲ್, ಆಲ್ಫಾ ಡಿಸೈನ್ ಮತ್ತು ಬಿಡಿಎಲ್ ಶಾರ್ಟ್​ಲಿಸ್ಟ್ ಆದವು. ತಜ್ಞರ ಸಮಿತಿಯನ್ನು ಇದಕ್ಕಾಗಿ ನೇಮಿಸಲಾಗಿತ್ತು. ಅಂತಿಮವಾಗಿ ಎಚ್​ಎಎಲ್​​ಗೆ ಬಿಡ್ ಒಲಿದುಬಂದಿತು.

ಎಚ್​​ಎಎಲ್​​ಗೆ ಇಸ್ರೋದಿಂದ ತಂತ್ರಜ್ಞಾನ ರವಾನೆ

ಸದ್ಯ ರಾಕೆಟ್ ತಂತ್ರಜ್ಞಾನವು ಇಸ್ರೋ ಬಳಿ ಇದೆ. ಮುಂದಿನ ಎರಡು ವರ್ಷದಲ್ಲಿ ಇಸ್ರೋ ಈ ತಂತ್ರಜ್ಞಾನವನ್ನು ಎಚ್​​ಎಎಲ್​​ಗೆ ರವಾನಿಸಲಿದೆ. ಈ ಅವಧಿಯಲ್ಲಿ ಎಚ್​​ಎಎಲ್ ಎರಡು ರಾಕೆಟ್ ಪ್ರೋಟೋಟೈಪ್ ಸಿದ್ಧಪಡಿಸಬೇಕು. ಈ ಪ್​ರೋಟೋಟೈಪ್ ನಿರ್ಮಾಣದ ವೇಳೆ ಎಚ್​​ಎಎಲ್ ಸಂಸ್ಥೆ ಇಸ್ರೋದ ಸರಬರಾಜು ಮೂಲಗಳನ್ನೇ ಬಳಸಿಕೊಳ್ಳಬೇಕು. ಅದು ಹೇಳಿದ ರೀತಿಯಲ್ಲೇ ಪ್ರೋಟೋಟೈಪ್ ಡಿಸೈನ್ ಇರಬೇಕು.

ಇದನ್ನೂ ಓದಿ: India’s Power: ವಿದ್ಯುತ್ ಉತ್ಪಾದನೆ ಹೆಚ್ಚಳ: ಚೀನಾ, ಅಮೆರಿಕ ನಂತರ ಭಾರತವೇ ಮುಂದು

ಪ್ರೋಟೋಟೈಪ್ ನಿರ್ಮಾಣದ ಬಳಿಕ ಎಚ್​​ಎಎಲ್ ತನ್ನದೇ ಸರಬರಾಜು ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಕೆಟ್ ವಿನ್ಯಾಸವನ್ನೂ ಬದಲಾಯಿಸಬಹುದು. ಈ ಕಾರ್ಯದಲ್ಲಿ ಇಸ್ರೋ ನೆರವನ್ನೂ ಪಡೆಯಲು ಅವಕಾಶ ಇರುತ್ತದೆ. ಉತ್ಪಾದನಾ ಹಂತ ಬಂದಾಗ ಎಚ್​​ಎಎಲ್ ಒಂದು ವರ್ಷದಲ್ಲಿ 6-12 ಎಸ್​​ಎಸ್​​ಎಲ್​​ವಿ ರಾಕೆಟ್​​ಗಳನ್ನು ತಯಾರಿಸಲು ಗುರಿ ಇಟ್ಟುಕೊಂಡಿದೆ. ಕಡಿಮೆ ಬೆಲೆಗೆ ರಾಕೆಟ್ ತಯಾರಿಸುವುದಾಗಿಯೂ ಅದು ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ