ಅಹ್ಮದಾಬಾದ್ ವಿಮಾನ ಅಪಘಾತ: ವಿಮಾದಾರ ಮತ್ತು ನಾಮಿನಿ ಇಬ್ಬರೂ ಮೃತ; ಏನಾಗುತ್ತೆ ಇನ್ಷೂರೆನ್ಸ್ ಹಣ?
Air India flight crash incident, insurance dilemma: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಇನ್ಷೂರೆನ್ಸ್ ಪಾಲಿಸಿ ಹೊಂದಿದ್ದ ಒಬ್ಬ ವ್ಯಕ್ತಿ ಹಾಗೂ ಪಾಲಿಸಿಗೆ ನಾಮಿನಿಯಾಗಿದ್ದ ಅವರ ಹೆಂಡತಿ ಇಬ್ಬರೂ ಬಲಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಇನ್ಷೂರೆನ್ಸ್ ಹಣಕ್ಕೆ ಯಾರು ಕ್ಲೇಮ್ ಸಲ್ಲಿಸಬಹುದು? ಇಲ್ಲಿದೆ ಡೀಟೇಲ್ಸ್.

ಅಹ್ಮದಾಬಾದ್, ಜೂನ್ 20: ಕಳೆದ ವಾರ (ಜೂನ್ 12) ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ (Air India flight crash) 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಮಂದಿಯಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಏರ್ ಇಂಡಿಯಾ ಸಂಸ್ಥೆ ಮೃತ ಪ್ರಯಾಣಿಕರ ಕುಟುಂಬಗಳಿಗೆ ಹಂಗಾಮಿಯಾಗಿ ಒಂದೂಕಾಲು ಕೋಟಿ ರೂ ಪರಿಹಾರ ಘೋಷಿಸಿದೆ. ಇದು ವಿಮಾನದ ಇನ್ಷೂರೆನ್ಸ್ ಮತ್ತು ಅಂತಾರಾಷ್ಟ್ರೀಯ ನಿಯಮಗಳ ಅನುಸಾರವಾಗಿ ನೀಡಲಾಗುತ್ತಿರುವ ಪರಿಹಾರ. ಇದರ ಜೊತೆಗೆ ವೈಯಕ್ತಿಕ ಇನ್ಷೂರೆನ್ಸ್ (Personal insurance cover) ವಿಚಾರವೂ ಇದೆ. ಇದು ಈಗ ಸ್ವಲ್ಪ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಗೊಂದಲ ಎಂದರೆ, ವಿಮಾನಾಪಘಾತದಲ್ಲಿ ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟ ಒಂದು ನಿದರ್ಶನ ಇದೆ. ಸಾಮಾನ್ಯವಾಗಿ ಪಾಲಿಸಿದಾರ ಮೃತಪಟ್ಟರೆ ನಾಮಿನಿಯು ಹಣಕ್ಕೆ ಕ್ಲೇಮ್ ಮಾಡಬಹುದು. ಇಲ್ಲಿ ಇಬ್ಬರೂ ಮೃತಪಟ್ಟಾಗ ಇನ್ಷೂರೆನ್ಸ್ ಹಣ ಏನಾಗುತ್ತದೆ?
ಇದನ್ನೂ ಓದಿ: ಪಿಎಂ ಜೀವನಜ್ಯೋತಿ ಬಿಮಾ ಯೋಜನೆ: ಕೈಗೆಟಕುವ ಬೆಲೆಗೆ ಸರ್ಕಾರದಿಂದ ಇನ್ಷೂರೆನ್ಸ್ ಸ್ಕೀಮ್
ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಸಕ್ಸಶನ್ ಸರ್ಟಿಫಿಕೇಟ್ ಪಡೆಯಲಾಗುತ್ತದೆ. ಏರ್ ಇಂಡಿಯಾ ಅಪಘಾತ ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ಕಾನೂನನ್ನು ಸ್ವಲ್ಪ ಸಡಿಸಲಾಗಿದೆ. ವಿಮಾದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟಿದ್ದಾಗ ಕ್ಲಾಸ್ ಒನ್ ವಾರಸುದಾರರಿಗೆ ಕ್ಲೇಮ್ಗೆ ಅವಕಾಶ ಕೊಡಲಾಗುತ್ತದೆ. ಕ್ಲಾಸ್ ಒನ್ ವಾರಸುದಾರ ಎಂದರೆ ಅತಿಹತ್ತಿರದ ರಕ್ತಸಂಬಂಧಿ. ಅಂದರೆ, ಮಗ ಅಥವಾ ಮಗಳಾಗಿರಬಹುದು.
ಇಬ್ಬರು ಅಥವಾ ಹೆಚ್ಚು ಮಕ್ಕಳಿದ್ದರೆ ಆಗ ಎಲ್ಲರೂ ಕೂಡ ಯಾರಿಗೆಷ್ಟು ಪಾಲು ಸಿಗಬೇಕು ಎಂದು ಡಿಕ್ಲರೇಶನ್ ಸಲ್ಲಿಸಬೇಕು. ಇಂಥದ್ದೊಂದು ಸಾಧ್ಯತೆಯನ್ನು ಅವಲೋಕಿಸಲಾಗುತ್ತಿದೆ.
ಇನ್ನುಳಿದಂತೆ ಇತರ ಸಾವುಗಳ ವಿಚಾರದಲ್ಲಿ ವಿಮಾ ಹಣ ಸೆಟಲ್ ಮಾಡಲು ಎಲ್ಲಾ ಇನ್ಷೂರೆನ್ಸ್ ಕಂಪನಿಗಳು ಹೆಲ್ಪ್ ಡೆಸ್ಕ್ ತೆರೆದಿವೆ. ಉದ್ಯೋಗಿಗಳಿಗೆ ಮಾಡಿಸಿರುವ ಗ್ರೂಪ್ ಇನ್ಷೂರೆನ್ಸ್, ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್, ಬ್ಯಾಗೇಜ್ ಇನ್ಷೂರೆನ್ಸ್ ಇತ್ಯಾದಿ ನಾನಾ ರೀತಿಯ ಇನ್ಷೂರೆನ್ಸ್ ಮಾಡಿಸಲಾಗಿದ್ದು ನಾಮಿನಿಗಳು ಹಣಕ್ಕಾಗಿ ಕ್ಲೇಮ್ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ನಾನ್-ಕಮರ್ಷಿಯಲ್ ವಾಹನಗಳಿಗೆ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್; ಬೆಲೆ 3,000 ರೂ; 200 ಟ್ರಿಪ್ ಮಿತಿ
ವಿಮಾದಾರರು ಹೊಂದಿದ್ದ ಟಿಕೆಟ್, ಮರಣ ಪ್ರಮಾಣಪತ್ರ ಇತ್ಯಾದಿ ದಾಖಲೆಗಳನ್ನು ಸಂಬಂಧಿಕರು ಸಲ್ಲಿಸಿ ವಿಮಾ ಹಣಕ್ಕೆ ಕ್ಲೇಮ್ ಮಾಡಬಹುದು.
ಇದೇ ವೇಳೆ, ಏರ್ ಇಂಡಿಯಾ ಘೋಷಿಸಿರುವ ಒಂದೂವರೆ ಕೋಟಿ ರೂ ಪರಿಹಾರವು ಈ ಪರ್ಸನಲ್ ಇನ್ಷೂರೆನ್ಸ್ನಿಂದ ಹೊರತಾಗಿರುವಂಥದ್ದು. ವಿಮಾನದಲ್ಲಿದ್ದ ಪ್ರಯಾಣಿಕರು ಪರ್ಸನಲ್ ಆಗಿ ಅಥವಾ ಉದ್ಯೋಗಸ್ಥಳದಿಂದಾಗಲೀ ಇನ್ಷೂರೆನ್ಸ್ ಕವರೇಜ್ ಇಲ್ಲದಿದ್ದರೂ ಅವರ ಕುಟುಂಬಗಳಿಗೆ ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಪರಿಹಾರ ಸಿಕ್ಕೇ ಸಿಗುತ್ತದೆ. ಆದರೆ, ಇಲ್ಲಿ ಮೃತ ವ್ಯಕ್ತಿಗಳ ಕುಟುಂಬದವರು ಎಂಬುದನ್ನು ನಿರೂಪಿಸುವ ದಾಖಲೆ ಹೊಂದಿರಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ