ನವದೆಹಲಿ, ಆಗಸ್ಟ್ 9: ಹಲ್ದೀರಾಮ್ಸ್ ಬ್ರ್ಯಾಂಡ್ ಹೆಸರು ಕೇಳಿರಬಹುದು. ಚೌಚೌನಿಂದ ಹಿಡಿದು ವಿವಿಧ ಕುರುಕು ತಿಂಡಿಗಳವರೆಗೆ ಹಲ್ದೀರಾಮ್ಸ್ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಭಾರತದ ದೊಡ್ಡ ಕಂಪನಿಗಳಲ್ಲಿ ಹಲ್ದೀರಾಮ್ ಸ್ನ್ಯಾಕ್ಸ್ ಪ್ರೈ ಸಂಸ್ಥೆಯೂ ಒಂದು. ಭಾರತದ ಪ್ರಮುಖ ಕುಟುಂಬ ನಿರ್ವಹಿತ ಕಂಪನಿಗಳಲ್ಲಿ ಒಂದು. ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗದ ಫ್ಯಾಮಿಲಿ ಬಿಸಿನೆಸ್ಗಳ ಪಟ್ಟಿಯಲ್ಲಿ ಹಲ್ದೀರಾಮ್ಸ್ ಮೊದಲ ಸ್ಥಾನ ಪಡೆಯುತ್ತದೆ. ‘2024ರ ಬಾರ್ಕ್ಲೇಸ್ ಪ್ರೈವೇಟ್ ಕ್ಲೈಂಟ್ಸ್ ಹುರೂನ್ ಇಂಡಿಯಾ ಮೋಸ್ಟ್ ವ್ಯಾಲುವಬಲ್ ಫ್ಯಾಮಿಲಿ ಬಿಸಿನೆಸ್’ ಪಟ್ಟಿಯಲ್ಲಿ ಹಲ್ದೀರಾಮ್ಸ್ ಅಗ್ರಗಣ್ಯ ಎನಿಸಿದೆ.
ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿ ಮೌಲ್ಯಯುತ ಫ್ಯಾಮಿಲಿ ಬಿಸಿನೆಸ್ ಎನಿಸಿದೆ. ಈ ಪಟ್ಟಿಯಲ್ಲಿ ಹಲ್ದೀರಾಮ್ಸ್ ಕಂಪನಿಯದ್ದು 30ನೇ ಸ್ಥಾನ. ಆದರೆ, ಹಲ್ದೀರಾಮ್ಸ್ ಸಂಸ್ಥೆ ಇನ್ನೂ ಐಪಿಒ ಪಡೆದಿಲ್ಲ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ. ಲಿಸ್ಟ್ ಆಗದ ಫ್ಯಾಮಿಲಿ ಬಿಸಿನೆಸ್ಗಳಲ್ಲಿ ಹಲ್ದೀರಾಮ್ಸ್ ಮೊದಲ ಸ್ಥಾನ ಪಡೆಯುತ್ತದೆ. ಈ ಕಂಪನಿಯ ಈಗಿನ ಮೌಲ್ಯ ಬರೋಬ್ಬರಿ 63,000 ಕೋಟಿ ರೂ ಆಗಿದೆ.
ಇದನ್ನೂ ಓದಿ: ನಾಮಿನಿ ಸಂಖ್ಯೆ ಹೆಚ್ಚಳ ಸೇರಿ ಬ್ಯಾಂಕಿಂಗ್ ಕಾನೂನುಗಳಲ್ಲಿ ತರಲಾಗುತ್ತಿರುವ ಕೆಲ ಬದಲಾವಣೆಗಳಿವು…
ಒಬ್ಬ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟ ಒಂದು ಸಂಸ್ಥೆಯನ್ನು ಆ ವ್ಯಕ್ತಿಯ ಕುಟುಂಬದ ಸದಸ್ಯರು ನಿರ್ವಹಿಸಬಹುದು. ಅಂಥ ಸಂಸ್ಥೆಗಳನ್ನು ಅಥವಾ ಉದ್ದಿಮೆಗಳನ್ನು ಫ್ಯಾಮಿಲಿ ಬಿಸಿನೆಸ್ ಎಂದು ಕರೆಯಲಾಗುತ್ತದೆ. ಧೀರೂಭಾಯ್ ಅಂಬಾನಿ ಅವರು ಆರಂಭಿಸಿದ ಬಿಸಿನೆಸ್ ಇಂದು ಹೆಮ್ಮರವಾಗಿ ಬೆಳೆದಿದೆ. ಅವರ ಮಕ್ಕಳು, ಮೊಮ್ಮಕ್ಕಳು ರಿಲಾಯನ್ಸ್ ಸಾಮ್ರಾಜ್ಯದ ವಿವಿಧ ಆಯಕಟ್ಟಿನ ಜಾಗ ನಿರ್ವಹಣೆ ಮಾಡುತ್ತಿದ್ದಾರೆ.
ಭಾರತದಲ್ಲಿ ಈ ರೀತಿ ಬಹುಭಾಗದ ಬಿಸಿನೆಸ್ಗಳು ಕುಟುಂಬ ಆಳ್ವಿಕೆ ಹೊಂದಿವೆ. ಸಂಸ್ಥಾಪಕರ ಕುಟುಂಬದ ಕೈಯಲ್ಲೇ ವ್ಯವಹಾರ ಇದ್ದರೆ ಅದನ್ನು ವೃದ್ಧಿಸಲು ಹೆಚ್ಚು ಬದ್ಧತೆ ಹೊಂದಿರುತ್ತಾರೆ. ಇದು ಫ್ಯಾಮಿಲಿ ಬಿಸಿನೆಸ್ಗೆ ಇರುವ ಅನುಕೂಲ.
ಹಲ್ದೀರಾಮ್ ಸಂಸ್ಥೆಗೆ ಮನೋಹರ್ ಅಗರ್ವಾಲ್ ಕುಟುಂಬದವರು ಮಾಲೀಕರು. ಈ ವ್ಯವಹಾರವನ್ನು ಅಗರ್ವಾಲ್ ಕುಟುಂಬದ ಎಂಟು ಮಂದಿ ನೋಡಿಕೊಳ್ಳುತ್ತಿದ್ದಾರೆ. ಒಂದೇ ಕುಟುಂಬದ ಇಷ್ಟೊಂದು ಸದಸ್ಯರು ಒಂದು ದೊಡ್ಡ ಕಂಪನಿಯನ್ನು ನಿರ್ವಹಿಸುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಯೂನಿಯನ್ ಬ್ಯಾಂಕ್ನಲ್ಲಿ ಎಫ್ಡಿ ದರ ಹೆಚ್ಚಳ; ಫಿಕ್ಸೆಡ್ ಇಟ್ಟರೆ ಶೇ. 8.15ರವರೆಗೆ ಬಡ್ಡಿ
ಹಲ್ದೀರಾಮ್ ಸ್ನ್ಯಾಕ್ಸ್ ಪ್ರೈ ಲಿ ಸಂಸ್ಥೆ ಐಪಿಒ ಮೂಲಕ ಪ್ರಾಥಮಿಕ ಮಾರುಕಟ್ಟೆಗೆ ಆಗಮಿಸಿ ಬಂಡವಾಳ ಸಂಗ್ರಹಿಸಲು ಪ್ರಯತ್ನ ಮಾಡುತ್ತಿದೆ. ಆದರೆ, ಸೂಕ್ತ ವ್ಯಾಲುಯೇಶನ್ಗೆ ಎದುರು ನೋಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ