ಮಹೀಂದ್ರ ಮತ್ತು ಚೀನಾದ ಶಾಂಕ್ಸಿಯಿಂದ ಜಂಟಿಯಾಗಿ ಕಾರ್ ಫ್ಯಾಕ್ಟರಿ ತಯಾರಿಸುವ ಸುದ್ದಿ; ಇಲ್ಲ ಇಲ್ಲ ಎಂದ ಭಾರತೀಯ ಕಂಪನಿ
No car plant from Mahindra & Mahindra with Shaanxi of China: ಗುಜರಾತ್ನಲ್ಲಿ ಚೀನಾದ ಶಾಂಕ್ಸಿ ಜೊತೆ ಸೇರಿ ಮಹೀಂದ್ರ ಅಂಡ್ ಮಹೀಂದ್ರದಿಂದ ಕಾರು ತಯಾರಕಾ ಘಟಕ ಸ್ಥಾಪನೆ ಆಗಬಹುದು ಎನ್ನುವ ಸುದ್ದಿ ಇದೆ. ಆದರೆ, ಮಹೀಂದ್ರ ಅಂಡ್ ಮಹೀಂದ್ರ ಈ ರಾಯ್ಟರ್ಸ್ ಸುದ್ದಿಯನ್ನು ಬಲವಾಗಿ ತಳ್ಳಿಹಾಕಿದೆ. ಎನ್ಎಸ್ಇ ಮತ್ತು ಬಿಎಸ್ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಅದು ಈ ಸುದ್ದಿ ಸುಳ್ಳು ಎಂದು ಹೇಳಿದೆ.
ನವದೆಹಲಿ, ಆಗಸ್ಟ್ 9: ಚೀನಾದ ಶಾಂಕ್ಸಿ ಜೊತೆ ಸೇರಿ ಭಾರತದಲ್ಲಿ ಕಾರು ಫ್ಯಾಕ್ಟರಿ ಆರಂಭಿಸಲಾಗುತ್ತದೆ ಎನ್ನುವಂತಹ ಸುದ್ದಿಯೊಂದನ್ನು ಮಹೀಂದ್ರ ಅಂಡ್ ಮಹೀಂದ್ರ ತಳ್ಳಿಹಾಕಿದೆ. ಸ್ಟಾಕ್ ಎಕ್ಸ್ಚೇಂಜ್ಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಅದು ರಾಯ್ಟರ್ಸ್ ಏಜೆನ್ಸಿಯಿಂದ ಬಂದ ಸುದ್ದಿಯನ್ನು ನಿರಾಕರಿಸಿದೆ. ಭಾರತದ ಮಹೀಂದ್ರ ಅಂಡ್ ಮಹೀಂದ್ರ ಮತ್ತು ಚೀನಾದ ಶಾಂಕ್ಸಿ ಆಟೊಮೊಬೈಲ್ ಗ್ರೂಪ್ ಸಂಸ್ಥೆಗಳು ಜಂಟಿಯಾಗಿ ಸೇರಿ ಭಾರತದಲ್ಲಿ 3 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಯಲ್ಲಿ ಕಾರು ಉತ್ಪಾದನೆ ಮಾಡಲಿವೆ. ಭಾರತ ಸರ್ಕಾರದಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎನ್ನುವಂತಹ ಸುದ್ದಿಯನ್ನು ರಾಯ್ಟರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿತ್ತು.
ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಮಹೀಂದ್ರ ಅಂಡ್ ಮಹೀಂದ್ರ ಇಂದು ಶುಕ್ರವಾರ ಹೇಳಿದೆ. ‘ರಾಯ್ಟರ್ಸ್ನ ಸುದ್ದಿಯಲ್ಲಿ ಅನಗತ್ಯವಾಗಿ ಊಹಾಪೋಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಸ್ವಯಂಪ್ರೇರಿತವಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿ ಬಂತು,’ ಎಂದು ಎನ್ಎಸ್ಇ ಮತ್ತು ಬಿಎಸ್ಇಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಅದು ತಿಳಿಸಿದೆ.
ರಾಯ್ಟರ್ಸ್ ವರದಿ ಪ್ರಕಾರ ಮಹೀಂದ್ರ ಮತ್ತು ಶಾಂಕ್ಸಿ ಯೋಜಿತ ಕಾರು ಘಟಕ ಗುಜರಾತ್ನಲ್ಲಿ ಸ್ಥಾಪನೆ ಆಗಬಹುದು. ಈ ಜಂಟಿ ಬಿಸಿನೆಸ್ನ ಬಹುಪಾಲು ಮಾಲಕತ್ವ ಮಹೀಂದ್ರ ಅಂಡ್ ಮಹೀಂದ್ರದ್ದಾಗಿರುತ್ತದೆ. ಎಂಜಿನ್, ಕಾರು ಬ್ಯಾಟರಿ ಇತ್ಯಾದಿ ಸೇರಿ ಸಮಗ್ರ ಕಾರು ತಯಾರಿಕಾ ಘಟಕದ ನಿರ್ಮಾಣ ಮಾಡಲಾಗುತ್ತದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಈಗ ಮಹೀಂದ್ರ ಸಂಸ್ಥೆ ಈ ಬೆಳವಣಿಗೆಯನ್ನು ನಿರಾಕರಿಸಿದೆ.
ಇದನ್ನೂ ಓದಿ: Most Valuable Family Business: ಹಲ್ದೀರಾಮ್ಸ್, ಭಾರತದ ಅಗ್ರಗಣ್ಯ ಫ್ಯಾಮಿಲಿ ಬುಸಿನೆಸ್
ಚೀನಾದ ಶಾಂಕ್ಸಿ ಆಟೊಮೊಬೈಲ್ ಕಾರ್ಪೊರೇಶನ್ ವಿಶ್ವದ ಅತಿದೊಡ್ಡ ಕಮರ್ಷಿಯಲ್ ವಾಹನಗಳ ತಯಾರಕ ಸಂಸ್ಥೆಗಳಲ್ಲಿ ಒಂದು. ಇದು ಹೆಚ್ಚಾಗಿ ಟ್ರಕ್ ಮತ್ತು ಬಸ್ಸುಗಳನ್ನು ತಯಾರಿಸುತ್ತದೆ. ವಿಶ್ವದ 140 ದೇಶಗಳಲ್ಲಿ ಇದಕ್ಕೆ ಮಾರುಕಟ್ಟೆ ಇದೆ. ಭಾರತದ ರಫ್ತು ಪ್ರಮಾಣ ಹೆಚ್ಚಿಸಬೇಕಾದರೆ ಚೀನಾದ ನೇರ ಹೂಡಿಕೆ ಅವಶ್ಯಕ ಎನ್ನುವ ಅಂಶವನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಹಮತ ವ್ಯಕ್ತಪಡಿಸಿದ್ದರು. ಇದೂ ಕೂಡ ಶಾಂಕ್ಸಿ ಮತ್ತು ಮಹೀಂದ್ರ ಜಂಟಿಯಾಗಿ ಕಾರ್ ಫ್ಯಾಕ್ಟರಿ ಸ್ಥಾಪಿಸಬಹುದು ಎನ್ನುವ ಸುದ್ದಿಗೆ ಇಂಬು ಕೊಟ್ಟಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ