ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾಹಿತಿ ಹರಿದಾಡುತ್ತಿರುತ್ತದೆ. ಕೆಲ ಮಾಹಿತಿ ಉಪಯುಕ್ತವಾಗಿಬಹುದು. ಕೆಲವು ಸತ್ಯಾಂಶದಿಂದ ಕೂಡಿದ್ದಾಗಿರಬಹುದು. ಇವುಗಳ ಜೊತೆಗೆ ಸುಳ್ಳು ಮಾಹಿತಿಯೂ ಸೃಷ್ಟಿಗೊಂಡು ಓಡಾಡುತ್ತಿರುತ್ತದೆ. ಜನರಿಗೆ ಶಾಕ್ ಕೊಡುವ, ಅಚ್ಚರಿ ಮೂಡಿಸುವ ವಿಚಾರಗಳನ್ನು ಇಟ್ಟುಕೊಂಡು ತಪ್ಪು ಮಾಹಿತಿಯನ್ನು ಹರಿಬಿಟ್ಟಿರಬಹುದು. ಇಂಥ ಹಲವು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಹೋಗುತ್ತವೆ. ಚೆಕ್ ಮೇಲೆ ಕಪ್ಪು ಬಣ್ಣದ ಇಂಕ್ನಲ್ಲಿ ಸಹಿ ಮಾಡುವಂತಿಲ್ಲ. ಇದು ಆರ್ಬಿಐ ಗೈಡ್ಲೈನ್ಸ್ ಎಂದು ಹೇಳುವ ಪೋಸ್ಟ್ವೊಂದು ವೈರಲ್ ಆಗಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಎಕ್ಸ್ ಅಕೌಂಟ್ನಲ್ಲಿ ಈ ವೈರಲ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಲಾಗಿದ್ದು, ಅದನ್ನು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಲಾಗಿದೆ.
‘ಚೆಕ್ ಮೇಲೆ ಬ್ಲ್ಯಾಕ್ ಇಂಕ್ನಲ್ಲಿ ಬರೆಯಬಾರದು ಎಂದು ಆರ್ಬಿಐ ಸೂಚಿಸಿದೆ ಎಂದು ಹೇಳುವ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಸಂಪೂರ್ಣ ತಪ್ಪಾಗಿರುವ ಮಾಹಿತಿ. ಚೆಕ್ ಮೇಲೆ ಬರೆಯಲು ಇಂಥದ್ದೇ ಬಣ್ಣದ ಇಂಕ್ ಬಳಸಬೇಕು ಎನ್ನುವ ಯಾವುದೇ ಮಾರ್ಗಸೂಚಿಯನ್ನು ಆರ್ಬಿಐ ಹೊರಡಿಸಿಲ್ಲ’ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
ಆರ್ಬಿಐನ ಸಿಟಿಎಸ್ ಅಥವಾ ಚೆಕ್ ಟ್ರುಂಕೇಶನ್ ಸಿಸ್ಟಂ ಪ್ರಕಾರ, ಚೆಕ್ ಮೇಲೆ ಬರೆಯುವಾಗ ನೋಡಲು ಸ್ಪಷ್ಟ ಇರುವ ಮತ್ತು ಖಾಯಂ ಇರುವ ಇಂಕ್ ಅನ್ನು ಬಳಸಬೇಕು. ಇದರಿಂದ ಬರೆದಿರುವುದನ್ನು ತಿದ್ದಲು ಆಗುವುದಿಲ್ಲ. ಇದು ಆರ್ಬಿಐ ಮಾರ್ಗಸೂಚಿಯಲ್ಲಿ ತಿಳಿಸಿರುವ ಒಂದು ನಿಯಮ. ಆದರೆ, ನಿರ್ದಿಷ್ಟ ಇಂಕ್ ಬಣ್ಣಗಳನ್ನು ಚೆಕ್ನಲ್ಲಿ ಬರೆಯಬೇಕು ಎಂದು ಎಲ್ಲೂ ನಿರ್ದಿಷ್ಟಪಡಿಸಿಲ್ಲ.
ಇದನ್ನೂ ಓದಿ: ಎಸ್ಬಿಐ ಹೊಸ ಆರ್ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಮತ್ತೊಂದು ಸಂಗತಿ ಎಂದರೆ, ಚೆಕ್ನಲ್ಲಿ ಯಾರು ಸ್ವೀಕೃತರಿರುತ್ತಾರೋ ಅವರ ಹೆಸರು, ಹಾಗೂ ಅವರಿಗೆ ನೀಡಲು ಬಯಸುವ ಹಣದ ಮೊತ್ತವನ್ನು ಸಂಖ್ಯೆಯಲ್ಲಿ ಹಾಗೂ ಅಕ್ಷರದಲ್ಲಿ ಬರೆದಿರುತ್ತಾರೆ. ಹೀಗೆ ಒಮ್ಮೆ ಇದನ್ನು ಬರೆದ ಬಳಿಕ, ಅದನ್ನು ತಿದ್ದುವಂತಿಲ್ಲ. ಹೀಗೆ ತಿದ್ದಿದ ಅಕ್ಷರ ಮತ್ತು ಸಂಖ್ಯೆ ಉಳ್ಳ ಚೆಕ್ ಅನ್ನು ಬ್ಯಾಂಕ್ನವರು ತಿರಸ್ಕರಿಸುತ್ತಾರೆ. ಚೆಕ್ ನೀಡಿದಾಗ ಒಂದೊಮ್ಮೆ ಏನೋ ತಪ್ಪಾಗಿದೆ ಎನಿಸಿದಲ್ಲಿ, ಅದನ್ನು ತಿದ್ದುವ ಬದಲು ಹೊಸ ಚೆಕ್ ನೀಡುವುದೇ ಲೇಸು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ