ನವದೆಹಲಿ, ಮೇ 13: ಎಚ್ಡಿಎಫ್ಸಿ ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ನೋಟೀಸ್ ಪೀರಿಯಡ್ (Notice period) ಅವಧಿಯನ್ನು ಕಡಿಮೆಗೊಳಿಸಿದೆ. ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಪ್ರಕಾರ 90 ದಿನಗಳಷ್ಟು ಇದ್ದ ನೋಟೀಸ್ ಪೀರಿಯಡ್ ಅವಧಿಯನ್ನು 30 ದಿನಗಳಿಗೆ ಇಳಿಸಲಾಗಿದೆ. ರಾಜೀನಾಮೆ ನೀಡಿದ ಉದ್ಯೋಗಿಗಳು ಈಗ 30 ತಿಂಗಳು ನೋಟೀಸ್ ಪೀರಿಯಡ್ ಸರ್ವ್ ಮಾಡಿದರೆ ಸಾಕಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಐಸಿಐಸಿಐ ಬ್ಯಾಂಕ್ ಕೂಡ ನೋಟೀಸ್ ಪೀರಿಯಡ್ ಅವಧಿಯನ್ನು 90 ದಿನಗಳಿಂದ 30 ದಿನಗಳಿಗೆ ಇಳಿಸಿತ್ತು. ಈಗ ಎಚ್ಡಿಎಫ್ಸಿ ಬ್ಯಾಂಕ್ ಕೂಡ ಈ ಹೆಜ್ಜೆ ಇಟ್ಟಿದೆ. ಇದರೊಂದಿಗೆ ಉದ್ಯೋಗಿಗಳಿಗೆ ಅನುಕೂಲ ಆಗಬಹುದು.
ಈಗ ಪ್ರೊಬೇಶನ್ನಲ್ಲಿರುವ ಉದ್ಯೋಗಿ 30 ದಿನ ನೋಟೀಸ್ ಅವಧಿ ಕೆಲಸ ಮಾಡಬೇಕಾಗುತ್ತದೆ. ಈ ಉದ್ಯೋಗಿ ಮನವಿ ಮೇರೆಗೆ ಅವರ ರಿಪೋರ್ಟಿಂಗ್ ಮ್ಯಾನೇಜರ್ ಬೇಕಿದ್ದಲ್ಲಿ 30 ದಿನದೊಳಗೆ ರಿಲೀವ್ ಮಾಡಬಹುದು. ಉದ್ಯೋಗಿ ಇಚ್ಛಿಸಿದಲ್ಲಿ ಅವರು ಪೂರ್ಣ 30 ದಿನ ನೋಟೀಸ್ ಪೀರಿಯಡ್ ಸರ್ವ್ ಮಾಡಬಹುದು. ದೇಶದ ಬಹುತೇಕ ಪ್ರಮುಖ ಬ್ಯಾಂಕುಗಳ ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ ಬಳಿಕ 90 ದಿನಗಳ ನೋಟೀಸ್ ಪೀರಿಯಡ್ ಸರ್ವ್ ಮಾಡಬೇಕಾಗುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದ್ದು, 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಉದ್ಯೋಗಿಗಳ ಸಂಖ್ಯೆ 2 ಲಕ್ಷ ದಾಟಿದೆ. 2024ರ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ನಿವ್ವಳ ಲಾಭ 16,511.85 ಕೋಟಿ ರೂ ಆಗಿದೆ. ಕಳೆದ ಬಾರಿಗಿಂತ ಲಾಭದಲ್ಲಿ ಬರೋಬ್ಬರಿ ಶೇ. 37.05ರಷ್ಟು ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯ 23,351 ಕೋಟಿ ರೂ ಇದ್ದದ್ದು 29,076 ಕೋಟಿ ರೂಗೆ ಏರಿದೆ.
ಇದನ್ನೂ ಓದಿ: ಎಸ್ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ
ಇಡೀ ವರ್ಷದ ಆದಾಯ ಪರಿಗಣಿಸುವುದಾದರೆ 2023-24ರ ಹಣಕಾಸು ವರ್ಷದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ನಿವ್ವಳ ಆದಾಯ 60,810 ಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಗಳಿಸಿದ್ದಕ್ಕಿಂತ ಶೇ 37.9ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ.
ಇತರ ಬ್ಯಾಂಕುಗಳಂತೆ ಎಚ್ಡಿಎಫ್ಸಿ ಬ್ಯಾಂಕ್ನ ಷೇರುಬೆಲೆ ಇತ್ತೀಚೆಗೆ ಇಳಿಕೆ ಆಗುತ್ತಿದೆ. ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್ಇನಲ್ಲಿ ಅದರ ಷೇರುಬೆಲೆ 1,434 ರೂ ಇದೆ. 2023-24ರ ಹಣಕಾಸು ವರ್ಷಕ್ಕೆ ಎಚ್ಡಿಎಫ್ಸಿ ಬ್ಯಾಂಕ್ನ ಒಂದು ಈಕ್ವಿಟಿ ಷೇರಿಗೆ 19.50 ರೂನಂತೆ ಡಿವಿಡೆಂಡ್ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ