ಎಸ್ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ
SBI recruitment 2024-25: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಎಸ್ಬಿಐ ಈ ಹಣಕಾಸು ವರ್ಷದಲ್ಲಿ 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಇದರಲ್ಲಿ ಶೇ. 85ರಷ್ಟು ಎಂಜಿನಿಯರುಗಳಿಗೆ ಆದ್ಯತೆ ಇರಲಿದೆ. ಅಂದರೆ, 10,000 ಹುದ್ದೆಗಳಿಗೆ ಎಂಜಿನಿಯರುಗಳನ್ನು ರೆಕ್ರೂಟ್ ಮಾಡಿಕೊಳ್ಳಲಿದೆ ಎಸ್ಬಿಐ. ಬ್ಯಾಂಕಿಂಗ್ನಲ್ಲಿ ತಂತ್ರಜ್ಞಾನ ನಿರ್ವಹಣೆಯನ್ನು ಹೆಚ್ಚು ಸಮರ್ಪಕಗೊಳಿಸಲು ಈ ಯೋಜನೆ ಮಾಡಲಾಗಿದೆ.
ನವದೆಹಲಿ, ಮೇ 12: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2024-25ರ ಹಣಕಾಸು ವರ್ಷದಲ್ಲಿ 12,000 ಮಂದಿ ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಪ್ರೊಬೇಶನರಿ ಆಫೀಸರ್ಸ್ (Probationary Officers) ಮತ್ತು ಅಸೋಸಿಯೇಟ್ಸ್ಗಳಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರನ್ನು ಸೇರಿಸಿಕೊಳ್ಳಲಾಗಲಿದೆ. ಎಸ್ಬಿಐ ಛೇರ್ಮನ್ ದಿನೇಶ್ ಖರ (Dinesh Khara) ನೀಡಿದ ಮಾಹಿತಿ ಪ್ರಕಾರ ನೇಮಕಾತಿ ಆಗುವ ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್ಗಳ ನೇಮಕಾತಿ ಆಗಲಿದೆ. ಡಿಜಿಟಲ್ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರುವ ಕಾರಣವೊಡ್ಡಿ ಆರ್ಬಿಐ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರಿದ ಕ್ರಮ ಇತ್ತೀಚೆಗಷ್ಟೇ ನಡೆದಿದೆ. ಕೋಟಕ್ ಮಾತ್ರವಲ್ಲ, ಭಾರತದ ಹೆಚ್ಚಿನ ಬ್ಯಾಂಕುಗಳಲ್ಲಿ ಇನ್ನೂ ಹಳೆಯ ತಂತ್ರಜ್ಞಾನವೇ ಚಾಲ್ತಿಯಲ್ಲಿದೆ. ಒಂದೊಂದಾಗಿ ಬ್ಯಾಂಕುಗಳ ಮೇಲೆ ಆರ್ಬಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್ಬಿಐ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿರಬಹುದು.
ವರದಿಗಳ ಪ್ರಕಾರ ಎಸ್ಬಿಐ ಸಾಕಷ್ಟು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ವ್ಯಯಿಸಲು ಹೊರಟಿದೆ. ಸದ್ಯ ಭಾರತದ ಬ್ಯಾಂಕಿಂಗ್ ವಲಯದಲ್ಲಿ ತಂತ್ರಜ್ಞಾನ ನಿರ್ವಹಣಾ ವೆಚ್ಚ ಒಟ್ಟು ಬಜೆಟ್ನಲ್ಲಿ ಸರಾಸರಿ ಶೇ. 7ರಿಂದ 8ರಷ್ಟಿದೆ. ಎಸ್ಬಿಐ ಇದಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನಕ್ಕಾಗಿ ವ್ಯಯಿಸಲಿದೆ ಎನ್ನುವ ಮಾಹಿತಿಯನ್ನು ಎಸ್ಬಿಐ ಛೇರ್ಮನ್ ನೀಡಿದ್ದಾರೆ.
ಇದನ್ನೂ ಓದಿ: Google Jobs: ಅಮೆರಿಕದಲ್ಲಿ ಲೇ ಆಫ್ ಮಾಡಿದರೂ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್
ಎಂಜಿನಿಯರ್ಗಳನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂದು ಏನು ಮಾಡುತ್ತದೆ ಎಸ್ಬಿಐ?
ಸದ್ಯ ಬ್ಯಾಂಕಿಂಗ್ ಜ್ಞಾನ ಇರುವಂತಹ ಎಂಜಿನಿಯರುಗಳಿಗೆ ಎಸ್ಬಿಐ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ. 3,000 ಪ್ರೊಬೇಶನರಿ ಆಫೀಸರ್ಗಳು ಹಾಗೂ 8,000 ಅಸೋಸಿಯೇಟ್ಗಳ ಹುದ್ದೆಗೆ ನೇಮಕವಾಗುವ ಎಂಜಿನಿಯರುಗಳಿಗೆ ಆರಂಭಿಕ ತರಬೇತಿ ನೀಡಿ, ವಿವಿಧ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗಲಿದೆ.
ತಾಂತ್ರಿಕವಾಗಿ ಪಳಗಿರುವ ಎಂಜಿನಿಯರುಗಳನ್ನು ಐಟಿ ಮತ್ತು ಬಿಸಿನೆಸ್ ರೋಲ್ಗಳಿಗೆ ಹಾಕಿದರೆ ಗ್ರಾಹಕರೊಂದಿಗಿನ ವ್ಯವಹಾರ ಸಮರ್ಪಕವಾಗಿ ನಡೆಯಬಹುದು ಎನ್ನುವುದು ಎಸ್ಬಿಐನ ಎಣಿಕೆ.
‘ನಾವು ಅವರನ್ನು ಮೊದಲು ಬ್ಯಾಂಕಿಂಗ್ಗೆ ಹಾಕುತ್ತೇವೆ. ಬಳಿಕ ಅವರ ಅಭಿರುಚಿ, ಸಾಮರ್ಥ್ಯ ಇತ್ಯಾದಿ ಆಧಾರದ ಮೇಲೆ ಐಟಿ ಅಥವಾ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗುವುದು. ಇದರಿಂದ ತಂತ್ರಜ್ಞಾನ ಅರಿವು ಇರುವ ಮಾನವ ಸಂಪನ್ಮೂಲದ ನಿರಂತರ ಲಭ್ಯತೆ ಇದ್ದಂತಾಗುತ್ತದೆ ಎಂದು ಎಸ್ಬಿಐ ಮುಖ್ಯಸ್ಥರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ