IND vs AUS: ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ; ವಿಡಿಯೋ ಹಂಚಿಕೊಂಡ ಬಿಸಿಸಿಐ
Nitish Kumar Reddy: 21 ವರ್ಷದ ನಿತೀಶ್ ಕುಮಾರ್ ರೆಡ್ಡಿ ಅವರು ಮೆಲ್ಬೋರ್ನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನಿತೀಶ್ ಈ ಸಾಧನೆ ಮಾಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅವರ ತಂದೆ ಕಣ್ಣೀರಿಟ್ಟಿದ್ದರು.ಆ ಬಳಿಕ ದಿನದಾಟ ಮುಗಿದ ನಂತರ ನಿತೀಶ್ ಅವರ ಕುಟುಂಬ ಅವರನ್ನು ತಂಡದ ಡ್ರೆಸಿಂಗ್ ರೂಮ್ನಲ್ಲಿ ಭೇಟಿಯಾಗಿದ್ದಾರೆ.
ಟೀಂ ಇಂಡಿಯಾದ 21 ವರ್ಷದ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ನಿತೀಶ್ ರೆಡ್ಡಿ ಸಿಡಿಸಿದ ಈ ಚೊಚ್ಚಲ ಐತಿಹಾಸಿಕ ಶತಕಕ್ಕೆ ಮೈದಾನದಲ್ಲಿದ್ದ 83 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾಗಿದ್ದರೆ, ಇತ್ತ ಶತಕೋಟಿ ಭಾರತೀಯರ ಮನದಲ್ಲಿ ನಿತೀಶ್ಗೆ ಹೀರೋ ಸ್ಥಾನ ಸಿಕ್ಕಿದೆ. ನಿತೀಶ್ ಶತಕ ಸಿಡಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಅದೆಷ್ಟೋ ಭಾರತೀಯ ಮನಸುಗಳ ಕಣ್ಣಲ್ಲಿ ನೀರು ಜಿನುಗಿತ್ತು. ಇದರ ಜೊತೆಗೆ ಮಗನ ಆಟವನ್ನು ನೋಡಲು ಮೈದಾನಕ್ಕೆ ಬಂದಿದ್ದ ನಿತೀಶ್ ರೆಡ್ಡಿ ಅವರ ಕುಟುಂಬ ಕೂಡ ಕಣ್ಣೀರಿಟ್ಟಿತ್ತು. ನಿತೀಶ್ ತಮ್ಮ ಮೊದಲ ಶತಕವನ್ನು ಬೌಂಡರಿ ಬಾರಿಸುವ ಮೂಲಕ ಪೂರ್ಣಗೊಳಿಸಿದ ತಕ್ಷಣ, ಕ್ರೀಡಾಂಗಣದಲ್ಲಿದ್ದ ಅವರ ತಂದೆ ಭಾವುಕರಾಗಿದ್ದರು. ಇದೀಗ ದಿನದಾಟ ಮುಗಿದ ಬಳಿಕ ನಿತೀಶ್ರನ್ನು ಭೇಟಿಯಾದ ಅವರ ಅಪ್ಪ- ಅಮ್ಮ ಮಗನನ್ನು ತಬ್ಬಿ ಕಣ್ಣೀರಿಟ್ಟಿದ್ದಾರೆ. ಅದರ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಆ ಕ್ಷಣವನ್ನು ಮತ್ತಷ್ಟು ಸ್ಮರಣೀಯಗೊಳಿಸಿದೆ.
ಮಗನನ್ನು ತಬ್ಬಿ ಕಣ್ಣೀರಿಟ್ಟ ಅಪ್ಪ- ಅಮ್ಮ
ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು ಇದರಲ್ಲಿ ನಿತೀಶ್ ಅವರ ಕುಟುಂಬವು ನಿತೀಶ್ ಉಳಿದಿದ್ದ ರೂಂ ಹೊರಗೆ ಅವರಿಗಾಗಿ ಕಾಯುತ್ತಿದೆ. ನಿತೀಶ್ ಹೊರಗೆ ಬಂದು ಮೊದಲು ತನ್ನ ತಾಯಿಯನ್ನು ಮತ್ತು ನಂತರ ತನ್ನ ಸಹೋದರಿಯನ್ನು ತಬ್ಬಿಕೊಂಡಿದ್ದಾರೆ. ಇದಾದ ನಂತರ ತನ್ನ ಕ್ರಿಕೆಟ್ಗಾಗಿ ಸರ್ಕಾರಿ ನೌಕರಿಯನ್ನೇ ತ್ಯಜಿಸಿದ್ದ ತಂದೆಯನ್ನು ಬಿಗಿಯಾಗಿ ತಬ್ಬಿಕೊಂಡಿದ್ದಾರೆ. ಈ ವೇಳೆ ಇಬ್ಬರು ಭಾವುಕರಾಗಿದ್ದಾರೆ. ಮಗನ ಐತಿಹಾಸಿಕ ಸಾಧನೆ ಕಂಡು ಖುಷಿಯಿಂದ ಮತ್ತೊಮ್ಮೆ ಭಾವುಕರಾದ ಮುತ್ಯಾಲ ರೆಡ್ಡಿ ಕಣ್ಣೀರಿಟ್ಟಿದ್ದಾರೆ.
ಹೆಮ್ಮೆಪಡುತ್ತೇನೆ ಎಂದ ಅಪ್ಪ
ಇದೇ ವಿಡಿಯೋದಲ್ಲಿ ಮಗನನ್ನು ಹೊಗಳಿರುವ ನಿತೀಶ್ ತಂದೆ, ‘ನಿತೀಶ್ ಇಂದು ತುಂಬಾ ಚೆನ್ನಾಗಿ ಆಡಿದ್ದಾನೆ. ನಾನು ಅವನ ಬಗ್ಗೆ ಹೆಮ್ಮೆಪಡುತ್ತೇನೆ. ನಾವು ಭಾರತ ತಂಡಕ್ಕೆ ಧನ್ಯವಾದ ಹೇಳುತ್ತೇವೆ ಎಂದಿದ್ದಾರೆ. ಆ ಬಳಿಕ ಮಾತನಾಡಿರುವ ನಿತೀಶ್ ಅವರ ಸಹೋದರಿ, ‘ನಿತೀಶ್ ಅವರಿಗೆ ಇದು ಸುಲಭದ ಪ್ರಯಾಣವಾಗಿರಲಿಲ್ಲ. ನಿತೀಶ್ ಹೇಳಿದ್ದನ್ನೇ ಮಾಡಿದ್ದಾನೆ ಎಂದಿದ್ದಾರೆ.