AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಸ್ಟಾರ್ಟ್ ಅಪ್ ಕಂಪೆನಿ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಾಜಿ ಇಂಜಿನಿಯರ್ ಬ್ರಿಜಿತ್ ಕೃಷ್ಣ, ಕೇರಳದ ಯಶಸ್ವಿ ಉದ್ಯಮಿ

ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಕೇರಳ ಮೂಲದ 47 ವರ್ಷದ ಬ್ರಿಜಿತ್ ಕೃಷ್ಣ ಅವರೇ ನೈಜ ಉದಾಹರಣೆ. ಕೊರೋನದ ಸಮಯದಲ್ಲಿ ಐಟಿ ಉದ್ಯೋಗ ಕಳೆದುಕೊಂಡ ಅವರು ಧೈರ್ಯಗೆಡಲಿಲ್ಲ. ಮೊಳಕೆಯೊಡೆದ ಗೋಡಂಬಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಯಶಸ್ವಿ ಉದ್ಯಮಿಯೆನಿಸಿಕೊಂಡಿದ್ದಾರೆ. ಪ್ರಸ್ತುತ ಇವರು ಈ ಫುಡ್ ಸ್ಟಾರ್ಟ್ ಅಪ್ ನಿಂದ ವಾರ್ಷಿಕವಾಗಿ 25 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ.

ಫುಡ್ ಸ್ಟಾರ್ಟ್ ಅಪ್ ಕಂಪೆನಿ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಾಜಿ ಇಂಜಿನಿಯರ್ ಬ್ರಿಜಿತ್ ಕೃಷ್ಣ, ಕೇರಳದ ಯಶಸ್ವಿ ಉದ್ಯಮಿ
ಕೇರಳದ ನಿರುದ್ಯೋಗಿ ಇಂಜಿನಿಯರ್
ಸಾಯಿನಂದಾ
| Edited By: |

Updated on: Dec 27, 2024 | 5:00 PM

Share

ಕೊರೋನದ ಸಮಯದಲ್ಲಿ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬದುಕಿಗೆ ಮುಂದೇನು ಎಂದು ಯೋಚಿಸುತ್ತಲೇ ಗಟ್ಟಿ ನಿರ್ಧಾರದೊಂದಿಗೆ ಉದ್ಯಮದತ್ತ ಮುಖ ಮಾಡಿದವರು ಅನೇಕರಿದ್ದಾರೆ. ಹೌದು, ಕೇರಳದ 47 ವರ್ಷದ ಬ್ರಿಜಿತ್ ಕೃಷ್ಣ 2020 ರಲ್ಲಿ ತನ್ನ ಐಟಿ ಉದ್ಯೋಗವನ್ನು ಕಳೆದುಕೊಂಡರು. ಕೊರೋನದ ಸಮಯದಲ್ಲಿ ಆ ವೇಳೆಯಲ್ಲಿ ಧೃತಿಗೆಡದೇ ಫುಡ್ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಲು ಮುಂದಾದರು. ಆದರೆ ಇಂದು ಬ್ರಿಜಿತ್ ಕೃಷ್ಣರವರು ಈ ಉದ್ಯಮದಿಂದಲೇ ವಾರ್ಷಿಕವಾಗಿ 25 ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದಿಸುತ್ತಿದ್ದಾರೆ

ಬ್ರಿಜಿತ್ ಕೃಷ್ಣನವರು ಗೇರುಬೀಜ ಕೃಷಿ ಕುಟುಂಬದಿಂದ ಬಂದವರು. ಕೊರೋನ ಸಮಯದಲ್ಲಿ ಗೇರು ಬೀಜ ಬೆಳೆಯೂ ನಷ್ಟದಿಂದಲೇ ಕೂಡಿತ್ತು. ಆದರೆ ಈ ವೇಳೆ ಬ್ರಿಜಿತ್ ಕೃಷ್ಣ, ಸಸ್ಯಾಹಾರಿಗಳಿಗೆ ಪ್ರೋಟೀನ್ ಭರಿತ ಆಹಾರವನ್ನು ಒದಗಿಸಲು ಫುಡ್ ಸ್ಟಾರ್ಟ್ ಆಪ್ ಕಂಪನಿ ಆರಂಭಿಸಲು ಮುಂದಾದರು. ಕಣ್ಣೂರಿನ ಗೇರು ಕೃಷಿ ಕುಟುಂಬದಿಂದ ಬಂದ ಬ್ರಿಜಿತ್‌ಗೆ ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿದಿತ್ತು.

ಗೇರು ಕೃಷಿಗೆ ಮಳೆಯ ಅಗತ್ಯವಿಲ್ಲ. ಒಂದು ವೇಳೆ ಭಾರೀ ಮಳೆ ಬಂದರೆ ಗೋಡಂಬಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಗೋಡಂಬಿಯನ್ನು ಸಂಸ್ಕರಿಸಿ ಮಾರಾಟ ಮಾಡುವ ಕಂಪನಿಗಳು ಅಂತಹ ಗೋಡಂಬಿಗಳನ್ನು ಖರೀದಿಸಲು ನಿರಾಕರಿಸುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬ್ರಿಜಿತ್ ಕೃಷ್ಣ ನಿರ್ಧರಿಸಿದರು. ಈ ವೇಳೆಯಲ್ಲೂ ಕೇರಳದ ಕೃಷಿ ವಿಶ್ವವಿದ್ಯಾಲಯದ ಗೋಡಂಬಿ ಸಂಶೋಧನಾ ಕೇಂದ್ರದ ಬೆಂಬಲದೊಂದಿಗೆ ಗೋಡಂಬಿಯೂ ಮೊಳಕೆಯೊಡೆಯುವ ಸಾಮರ್ಥ್ಯವನ್ನು 90 ದಿನಗಳವರೆಗೆ ವಿಸ್ತರಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು.

ತದನಂತರದಲ್ಲಿ 2021ರಲ್ಲಿ ವಿಶಿಷ್ಟ ಗೋಡಂಬಿ ಖಾದ್ಯಗಳನ್ನು ತಯಾರಿಸಲು ಮಲಬಾರಿಕಾಸ್ ಎಲ್ ಎಲ್ ಪಿ ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿದರು. ಆದರೆ ಈ ಮೊಳಕೆಯೊಡೆದ ಗೋಡಂಬಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಲು ಹಣದ ಅವಶ್ಯಕತೆಯಿತ್ತು. ಹೀಗಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 25 ಲಕ್ಷ ರೂ ಅನುದಾನ ಪಡೆದುಕೊಂಡರು. ಮೊಳಕೆ ಬರಿಸಿದ ಗೋಡಂಬಿಯಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಿದರು. ಬ್ರಿಜಿತ್ ಅವರ ಫುಡ್ ಸ್ಟಾರ್ಟ್ ಅಪ್ ಕಂಪೆನಿಯೂ ವಿವಿಧ ರೀತಿಯ ಸಲಾಡ್‌ಗಳು, ತಿಂಡಿಗಳು, ಮಿಲ್ಕ್‌ಶೇಕ್‌ಗಳಂತಹ ರುಚಿಕರವಾದ ಗೋಡಂಬಿ ಖಾದ್ಯಗಳನ್ನು ಮಾರಾಟ ಮಾಡುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.

ಈ ಫುಡ್ ಸ್ಟಾರ್ಟ್ ಅಪ್ ಕಂಪೆನಿಯೂ ಕೇರಳ, ಬೆಂಗಳೂರು ಮತ್ತು ಮುಂಬೈನ ಪ್ರಮುಖ ಆಹಾರ ಸರಬರಾಜು ಕಂಪನಿಗಳು ಮತ್ತು ಹೋಟೆಲ್‌ಗಳಿಗೆ ಗೋಡಂಬಿಯ ವಿವಿಧ ಖಾದ್ಯಗಳನ್ನು ಪೂರೈಸುತ್ತಿದೆ. ಅದಲ್ಲದೇ, ಇಂಡಿಯಾಮಾರ್ಟ್, ಜಿಯೋಮಾರ್ಟ್ ಹಾಗೂ ಅಮೆಜಾನ್‌ನಂತಹ ಪ್ರಮುಖ ಮಾರುಕಟ್ಟೆಗಳ ಮೂಲಕ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಕಂಪನಿಯು ಆಹಾರ ಸುರಕ್ಷತಾ ನಿರ್ವಹಣಾ ಸಂಸ್ಥೆಯಿಂದ ಐಎಸ್ಒ ಮತ್ತು ಹೆಚ್ಎಸಿಸಿಪಿ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ದಿವಾಳಿಯಂಚಿನಲ್ಲಿದ್ದ ದೇಶವನ್ನು ಆ ಒಂದು ಬಜೆಟ್​ನಿಂದ ರಕ್ಷಿಸಿದ್ದ ಮನಮೋಹನ್ ಸಿಂಗ್!

ಬ್ರಿಜಿತ್ ಕೃಷ್ಣರವರು ಸ್ಥಳೀಯ ರೈತರನ್ನು ಸಹ ಬೆಂಬಲಿಸಲು ಕನಿಷ್ಟ 11 ಸ್ಥಳೀಯ ರೈತರಿಂದ ಗೋಡಂಬಿಗಳನ್ನು ಖರೀದಿಸುತ್ತಾರೆ ಹಾಗೂ ಅವುಗಳನ್ನು ಉತ್ತಮ ಗುಣಮಟ್ಟದ ಮೊಳಕೆಯೊಡೆದ ಗೋಡಂಬಿಗಳಾಗಿ ಪರಿವರ್ತಿಸುತ್ತಾರೆ. ಗೇರು ಕೃಷಿಯಲ್ಲಿ ಆಸಕ್ತಿಯಿರುವ ಸಣ್ಣ ರೈತರಿಗೆ ಉಚಿತ ತರಬೇತಿಯನ್ನೂ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಪ್ರಸ್ತುತ ವರ್ಷಕ್ಕೆ 25 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದು, ಉದ್ಯಮ ಮಾಡಬೇಕೆನ್ನುವ ಯುವಕರಿಗೆ ಮಾದರಿ ವ್ಯಕ್ತಿಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ