ಹೋಮ್ ಲೋನ್ (ಗೃಹ ಸಾಲ) ಸುದೀರ್ಘಾವಧಿಯ ಸಾಲ. ಜತೆಗೆ ಸಾಲದ ಮೊತ್ತವೂ ಭಾರೀ ಆಗಿರುತ್ತದೆ. ಒಂದು ಒಂದು ಸಣ್ಣ ತಪ್ಪು ಮಾಡಿದರೂ ಅರ್ಜಿದಾರರಿಗೆ ಸಾಲ ಸಿಗುವ ಅವಕಾಶವೇ ಕಡಿಮೆ ಆಗುತ್ತದೆ. ಇಲ್ಲದಿದ್ದರೆ ಅಗತ್ಯ ಪ್ರಮಾಣದಲ್ಲಿ ಸಾಲ ಸಿಗಲ್ಲ. ಭವಿಷ್ಯದಲ್ಲಿ ಮರುಪಾವತಿಗೂ ನಾನಾ ಸಮಸ್ಯೆಗಳು ಎದುರಾಗುತ್ತವೆ. ಹೋಮ್ ಲೋನ್ ವಿಚಾರವಾಗಿ ತಜ್ಞರು ನೀಡುವ ಸಲಹೆ ಏನು? ಏನು ಮಾಡಿದರೆ ಸಮಸ್ಯೆಗಳು ಕಡಿಮೆ ಮಾಡಿಕೊಳ್ಳಬಹುದು? ಅಂದ ಹಾಗೆ ಹೋಮ್ ಲೋನ್ ಅರ್ಜಿದಾರರು ಈ 5 ತಪ್ಪುಗಳು ಆಗದಿದ್ದಂತೆ ನೋಡಿಕೊಂಡಲ್ಲಿ ಉತ್ತಮ.
1) ಅಗತ್ಯ ಪ್ರಮಾಣದ ಡೌನ್ಪೇಮೆಂಟ್ ಇಲ್ಲದಿರುವುದು ಅಥವಾ ಮಾರ್ಜಿನ್ನ ಕೊರತೆ
ಆರ್ಬಿಐ ನಿಯಮಾವಳಿ ಪ್ರಕಾರ, ಆಸ್ತಿ ಮೌಲ್ಯದ ಶೇ 70ರಿಂದ 90ರಷ್ಟು ಮಾತ್ರ ಹಣಕಾಸು ಸೌಲಭ್ಯ ಬ್ಯಾಂಕ್ಗಳಿಂದ ಸಿಗುತ್ತದೆ. ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಾರಲ್ಲಾ ಅವರ ಕ್ರೆಡಿಟ್ ರಿಸ್ಕ್ ಅಳೆದು, ಅದರ ಆಧಾರದಲ್ಲಿ ಸಾಲ ನೀಡಲಾಗುತ್ತದೆ. ಬಾಕಿ ಮೊತ್ತವನ್ನು ಅರ್ಜಿದಾರರೇ ಹೊಂದಿಸಿಕೊಳ್ಳಬೇಕು. ಮಾರ್ಜಿನ್ ಅಥವಾ ಡೌನ್ಪೇಮೆಂಟ್ಗೆ ಹಣ ಒಗ್ಗೂಡಿಸುವುದು ಅರ್ಜಿದಾರರ ಕೆಲಸ. ಆಸ್ತಿಯ ಒಟ್ಟು ಮೌಲ್ಯದ ಶೇ 10ರಿಂದ 25ರಷ್ಟು ಹಣ ಇಟ್ಟುಕೊಂಡು, ಸಾಲ ಪಡೆಯುವುದಕ್ಕೆ ಸಿದ್ಧವಿರುವುದಾಗಿ ಖಾತ್ರಿಪಡಿಸಬೇಕು. ಈ ಮೊತ್ತ ಹೆಚ್ಚಾದಷ್ಟೂ ಸಾಲ ನೀಡುವ ಸಂಸ್ಥೆಗಳಿಗೂ ಅಪಾಯ ಕಡಿಮೆ. ಸಾಲ ಮಂಜೂರಾಗುವ ಹಾಗೂ ಮಾಮೂಲಿಗಿಂತ ಬಡ್ಡಿ ದರ ಕಡಿಮೆ ಆಗುವ ಅವಕಾಶಗಳು ಇರುತ್ತವೆ. ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ತೆಗೆದು ಈ ಉದ್ದೇಶಕ್ಕೆ ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ.
2) ಹೋಮ್ ಲೋನ್ಗೆ ಹೋಗುವ ಮುನ್ನ ಕ್ರೆಡಿಟ್ ಸ್ಕೋರ್ ನೋಡಲ್ಲ
ಅರ್ಜಿ ಹಾಕುವವರ ಸಾಲ ಪಡೆಯುವ ಸಾಮರ್ಥ್ಯವನ್ನು ಅಳೆಯುವುದಕ್ಕೆ ಕ್ರೆಡಿಟ್ ಸ್ಕೋರ್ ಅತಿ ಮುಖ್ಯವಾದ ಅಂಶಗಳಲ್ಲಿ ಒಂದು. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರುವವರಿಗೆ ಸಾಲ ಸಿಗುವ ಸಾಧ್ಯತೆ ಹೆಚ್ಚು. ಜತೆಗೆ ಬಡ್ಡಿ ದರವೂ ಕಡಿಮೆ ಇರುತ್ತದೆ. ಆದ್ದರಿಂದ ಅರ್ಜಿ ಹಾಕಿಕೊಳ್ಳುವವರು ಸಾಲಕ್ಕೆ ಅರ್ಜಿ ಹಾಕಿಕೊಳ್ಳಬೇಕು ಎಂದಿರುವವರು ನಿಯಮಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತಿರಬೇಕು. ಹಾಗೆ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸಿಕೊಳ್ಳುವುದಕ್ಕೆ ಅಗತ್ಯ ಸಮಯ ದೊರೆಯುತ್ತದೆ.
3) ವಿವಿಧ ಸಂಸ್ಥೆಗಳಲ್ಲಿ ಹೋಮ್ ಲೋನ್ ಹೋಲಿಕೆ ಮಾಡುವುದಿಲ್ಲ
ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ, ಮರುಪಾವತಿ ಅವಧಿ, ಸಾಲ ಮರುಪಾವತಿ ಮತ್ತು ಅರ್ಜಿದಾರರ ಕ್ರೆಡಿಟ್ ಪ್ರೊಫೈಲ್ ಆಧಾರದಲ್ಲಿ ಎಲ್ಟಿವಿ (ಲೋನ್ ಟು ವ್ಯಾಲ್ಯೂ) ರೇಷಿಯೋ ಒಂದು ಸಂಸ್ಥೆಯಿಂದ ಮತ್ತೊಂದಕ್ಕೆ ಬದಲಾಗುತ್ತದೆ. ಆದ್ದರಿಂದ ವಿವಿಧ ಸಂಂಸ್ಥೆಗಳಲ್ಲಿ ಇರುವ ಜೋಮ್ ಲೋನ್ ಆಫರ್ಗಳನ್ನು ವಿವಿಧ ಸಂಸ್ಥೆಗಳಲ್ಲಿ ಹೋಲಿಕೆ ಮಾಡಿ ನೋಡಬೇಕು. ಈಗಾಗಲೇ ಎಲ್ಲಿ ವಹಿವಾಟು ನಡೆಸುತ್ತಿದ್ದಾರೋ ಅಲ್ಲೇ ಸಾಲಕ್ಕೆ ಪ್ರಯತ್ನಿಸುವುದು ಉತ್ತಮ. ಆನ್ಲೈನ್ ಮಾರ್ಕೆಟ್ಪ್ಲೇಸ್ನಲ್ಲಿ ಬಡ್ಡಿದರ, ಸಾಲದ ವೈಶಿಷ್ಟ್ಯಗಳನ್ನು ವಿವಿಧ ಸಂಸ್ಥೆಗಳ ಜತೆಗೆ ಹೋಲಿಸಬೇಕು. ಕಡಿಮೆ ಬಡ್ಡಿ, ಅಗತ್ಯ ಪ್ರಮಾಣದ ಸಾಲ ಹಾಗೂ ಅವಧಿ ನೀಡುವಂಥ ಸಂಸ್ಥೆ ಬಳಿ ಸಾಲ ಪಡೆಯುವುದು ಉತ್ತಮ.
4) ಇಎಂಐ ಕಟ್ಟುವುದಕ್ಕೆ ಸಾಧ್ಯವಾ ಎಂದು ಪರೀಕ್ಷಿಸಿಕೊಳ್ಳಲ್ಲ
ಸಾಲ ನೀಡುವ ಸಂಸ್ಥೆಗಳು ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತವೆ. ಹೊಸದಾಗಿ ಪಡೆಯುವ ಗೃಹ ಸಾಲದ ಇಎಂಐ ಜವಾಬ್ದಾರಿಯನ್ನೂ ಸೇರಿಸಿ ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಅದನ್ನೂ ಸೇರಿಸಿಯೇ ತಿಂಗಳ ಆದಾಯದಲ್ಲಿ ಶೇ 50ರಿಂದ 60ರಷ್ಟು ಮಾತ್ರ ಇಎಂಐಗೆ ಹೋಗುವಂತೆ ಇರಬೇಕು. ಯಾರು ಆ ಮೊತ್ತವನ್ನು ಮೀರುತ್ತಾರೋ ಅಂಥವರಿಗೆ ಸಾಲ ದೊರೆಯುವ ಸಾಧ್ಯತೆ ಕಡಿಮೆ. ಆ್ದರಿಂದ ಸಾಲ ಪಡೆದಿಕೊಳ್ಳುವವರು ಈ ಮಿತಿಯನ್ನು ಮೀರಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಈಗಿರುವ ಸಾಲವನ್ನು ಅವಧಿಗೆ ಪೂರ್ವವಾಗಿ ತೀರಿಸಬೇಕು ಅಥವಾ ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಗೆ ಮಾಡಿಸಿಕೊಳ್ಳಬೇಕು ಅಥವಾ ಹೋಮ್ ಲೋನ್ ಮಾರ್ಜಿನ್ ಹೆಚ್ಚಿಸಬೇಕು ಅಥವಾ ಡೌನ್ ಪೇಮೆಂಟ್ ಜಾಸ್ತಿ ಮಾಡಬೇಕು. ಇನ್ನೊಂದು ವಿಧಾನ ಏನೆಂದರೆ, ಆನ್ಲೈನ್ನಲ್ಲಿ ಹೋಮ್ಲೋನ್ ಇಎಂಐ ಕ್ಯಾಲ್ಕುಲೇಟರ್ ಸಿಗುತ್ತದೆ. ಅದರ ಸಹಾಯ ಪಡೆದುಕೊಂಡು, ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಎಷ್ಟು ಸಾಲ ಸಿಗುತ್ತದೆ ಎಂದು ಲೆಕ್ಕ ಹಾಕಿಕೊಳ್ಳುವುದು ಉತ್ತಮ.
5) ತುರ್ತು ನಿಧಿಯಲ್ಲಿ ಹೋಮ್ ಲೋನ್ ಇಎಂಐ ಗಣನೆಗೆ ತೆಗೆದುಕೊಂಡಿರಲ್ಲ
ಉದ್ಯೋಗ ನಷ್ಟ, ಅನಾರೋಗ್ಯ, ಅಂಗವೈಕಲ್ಯ ಮುಂತಾದವು ಯಾವಾಗ ಬೇಕಾದರೂ ಎರಗಬಹುದು. ಇದರಿಂದಾಗಿ ಸಾಲ ಮರುಪಾವತಿಗೆ ಸಮಸ್ಯೆ ಆಗಬಹುದು. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಆಗದಿದ್ದಲ್ಲಿ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ದಂಡ ಬೀಳುತ್ತದೆ. ಒಂದು ವೇಳೆ ಈಗಿರುವಂಥ ಹೂಡಿಕೆಯನ್ನು ಕರಗಿಸಿ, ಅದರಿಂದ ಹೋಮ್ ಲೋನ್ ಪಾವತಿಸಿದರೆ ಭವಿಷ್ಯದ ಹಣಕಾಸು ಗುರಿಗೆ ಹೊಡೆತ ಬೀಳುತ್ತದೆ. ಆದ್ದರಿಂದ ತುರ್ತು ನಿಧಿ ಎಂದು ಮೀಸಲಿಡುವಾಗ ಆರು ತಿಂಗಳ ಇಎಂಐ ಅನ್ನು ಸಹ ಎತ್ತಿಟ್ಟಿರಿ.
ಇದನ್ನೂ ಓದಿರಿ:Personal finance: ಸ್ಯಾಲರಿ ಓವರ್ಡ್ರಾಫ್ಟ್ ಅಥವಾ ಕ್ರೆಡಿಟ್ ಕಾರ್ಡ್ ಇವೆರಡರಲ್ಲಿ ಯಾವ ಸಾಲ ಉತ್ತಮ?
(5 mistakes you must avoid while taking home loan from lending institutions)
Published On - 6:02 pm, Sat, 8 May 21